ಕೋಲಾರ: ಕರ್ನಾಟಕದಲ್ಲಿ ಮತ್ತೊಂದು ATM ಕಳ್ಳತನ ವರದಿಯಾಗಿದ್ದು, ಎಟಿಎಂಗೆ ನುಗ್ಗಿದ ದುಷ್ಕರ್ಮಿಗಳು, 27 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ
ಕೋಲಾರ ಜಿಲ್ಲೆಯ ಗುಲ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಗಿನ ಜಾವ 4.30 ರ ಸುಮಾರಿಗೆ ಈ ಘಟನೆ ನಡೆದಿದೆ. ಭದ್ರತಾ ಸಿಬ್ಬಂದಿ ಇಲ್ಲದ ಎಸ್‌ಬಿಐ ಎಟಿಎಂ ಗೆ ನುಗ್ಗಿದ ಕೆಲವು ಅಪರಿಚಿತ ದುಷ್ಕರ್ಮಿಗಳು 27 ಲಕ್ಷ ರೂ.ಗೂ ಹೆಚ್ಚು ಹಣವನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಲ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಗಿನ ಜಾವ 4.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಾವಲು ಇಲ್ಲದ ಎಟಿಎಂ ಕಿಯೋಸ್ಕ್ ಅನ್ನು ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಎಟಿಎಂ ಮಷಿನ್ ನ ಕ್ಯಾಶ್ ಬಾಕ್ಸ್ ಅನ್ನು ಒಡೆದು ನಗದು ದೋಚಿದ್ದಾರೆ.
ಎಟಿಎಂನಲ್ಲಿದ್ದ ಸಿಸಿಟಿವಿಯಲ್ಲಿ ತಮ್ಮ ಗುರುತು ಮರೆಮಾಚಲು ಸಿಸಿಟಿವಿ ಕ್ಯಾಮೆರಾದ ಮೇಲೆ ಕಪ್ಪು ಬಣ್ಣವನ್ನು ಎರಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂತೆಯೇ ಕಿಯೋಸ್ಕ್‌ನೊಳಗಿನ ಎಚ್ಚರಿಕೆ ವ್ಯವಸ್ಥೆಗಳು ಸಹ ಕಾರ್ಯನಿರ್ವಹಿಸುತ್ತಿರಲಿಲ್ಲ. ಇದು ಕಳ್ಳರಿಗೆ ನೆರವಾಗಿದೆ ಎಂದು ಹೇಳಲಾಗಿದೆ.
ಗ್ಯಾಸ್ ಕಟ್ಟರ್‌ಗಳನ್ನು ಬಳಸಿ, ಕಳ್ಳರು ಎಟಿಎಂ ಯಂತ್ರವನ್ನು ಒಡೆದು 27.62 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದಾರೆ ಎಂದು ಕೋಲಾರ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ತಿಳಿಸಿದ್ದಾರೆ.
"ನಾವು ಪ್ರಕರಣ ದಾಖಲಿಸಿದ್ದೇವೆ ಮತ್ತು ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ" ಎಂದು ಅವರು ಹೇಳಿದರು.