ಬೆಂಗಳೂರು: ಸಕಲೇಶಪುರ-ಹಾಸನದ ಶಿರಾಡಿ ಘಾಟ್ ಮಾರನಹಳ್ಳಿ ಸಮೀದ ಹೆಗ್ಗದ್ದೆ ಗ್ರಾಮದಲ್ಲಿ 20 ದಿನಗಳ ಹಿಂದೆ ಸಣ್ಣ ಪ್ರಮಾಣದ ಭೂ ಕುಸಿತ ಸಂಭವಿಸಿದ ಸ್ಥಳದಲ್ಲಿ ಈಗ ಮತ್ತೆ ಎತ್ತರದ ಗುಡ್ಡದಿಂದ ಹಂತ ಹಂತವಾಗಿ ಮಣ್ಣು ಹಾಗೂ ಮರಗಳು ಕುಸಿಯುತ್ತಿವೆ. ಮಳೆಯ ನಡುವೆ ಭಾರೀ ಪ್ರಮಾಣದ ಮಣ್ಣು ಕುಸಿದು ಬಿದ್ದಿದೆ, ಅದೃಷ್ಟವಶಾತ್ ವಾಹನಗಳು ಮತ್ತೊಂದು ಪಥದಲ್ಲಿ ಚಲಿಸುತ್ತಿದ್ದರಿಂದ ಭಾರೀ ಅನಾಹುತ ತಪ್ಪಿದೆ.
ಸುಮಾರು ನೂರು ಮೀಟರ್ಗೂ ಉದ್ದಕ್ಕೆ ಗುಡ್ಡ ಕಡಿದ ಪರಿಣಾಮವಾಗಿ ಪದೇ ಪದೆ ಗುಡ್ಡದ ಮಣ್ಣು ಕುಸಿಯುತ್ತಿದೆ. ಪಕ್ಕದಲ್ಲೇ ಯಶಸ್ವಿ ಎನ್ನುವವರ ಮನೆಯಿದ್ದು ಮನೆಯ ದಾರಿಯೇ ಮುಚ್ಚಿಹೋಗಿ ಅವರು ಕುಟುಂಬ ಸಮೇತವಾಗಿ ಮನೆ ಖಾಲಿಮಾಡಿಕೊಂಡು ಊರು ತೊರೆದಿದ್ದಾರೆ. ಮೇಲ್ಭಾಗದ ಮೊಬೈಲ್ ಟವರ್ ಬೀಳುವ ಆತಂಕದಲ್ಲಿ ಜನರಿದ್ದಾರೆ.
ದೊಡ್ಡತಪ್ಲು ಬಳಿ ಮತ್ತೊಂದು ಸ್ಥಳದಲ್ಲಿ ಭಾರೀ ಪ್ರಮಾಣದ ಮಣ್ಣು ಹಾಗೂ ಮರಗಳು ರಸ್ತೆಗೆ ಕುಸಿಯುತ್ತಿದ್ದು ಅಪಾರ ಪ್ರಮಾಣದ ಕಾಫಿ ತೋಟವನ್ನೇ ಆಪೋಶನ ತೆಗೆದುಕೊಂಡು ಕೆಳಗೆ ಬರುತ್ತಿರುವ ಮಣ್ಣಿನ ರಾಶಿ ದೊಡ್ಡ ಅನಾಹುತದ ಸೂಚನೆ ನೀಡುತ್ತಿದೆ. ಶಿರಾಢಿಘಾಟ್ ಭಾಗದಲ್ಲಿ ಮಳೆ ಹೆಚ್ಚಿದಂತೆಲ್ಲ ಆತಂಕ ಹೆಚ್ಚುತ್ತಲೇ ಇದೆ.
ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿತ ಮಂಗಳೂರು-ಬೆಂಗಳೂರು ಮಧ್ಯೆ ವಾಹನ ಸಂಚಾರರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.