ರಾಯಚೂರು: ಗ್ರಾಮೀಣ ಪ್ರದೇಶದಲ್ಲಿ ವಿಜ್ಞಾನ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯ 12 ಸರ್ಕಾರಿ ಶಾಲೆಗಳಿಗೆ ರಾಜ್ಯ ಮತ್ತು ಎನ್ ಸಿಇಆರ್ ಟಿ ಪಠ್ಯಕ್ರಮದ ಜೊತೆಗೆ ಪ್ರಯೋಗಗಳನ್ನು ಮತ್ತು ಕ್ಯುರೇಟೆಡ್ ವಿಜ್ಞಾನ ಕೋರ್ಸ್ ನಡೆಸಲು ಸುಸಜ್ಜಿತ ವಿಜ್ಞಾನ ಲ್ಯಾಬ್ ಗಳನ್ನು ಒದಗಿಸಲಾಗುತ್ತಿದೆ.
ಇದು ಪ್ರಯೋಗ ಶಿಕ್ಷಣ ಸಂಶೋಧನಾ ಸಂಸ್ಥೆಯ ಕ್ರಿಯಾ ಯೋಜನೆಯ ಭಾಗವಾಗಿದೆ. ಇದರಡಿ ಕರ್ನಾಟಕದ 77 ಶಾಲೆಗಳಲ್ಲಿ 11,000 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ವಿಜ್ಞಾನ ಕಲಿಕೆಯನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.
ಕ್ರಿಯಾ ಯೋಜನೆ ಈಗ 10 ನೇ ವರ್ಷದಲ್ಲಿದೆ. 6 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಬಹು ವರ್ಷಗಳ ಕಾರ್ಯಕ್ರಮವಾಗಿ ವಿಶೇಷವಾಗಿ ಸರ್ಕಾರಿ ಮತ್ತು ಗ್ರಾಮೀಣ ಶಾಲೆಗಳಲ್ಲಿ ವಿಜ್ಞಾನದ ಅನುಭವದ ಕಲಿಕೆಯ ಪರಿಣಾಮವನ್ನು ಅರ್ಥಮಾಡಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.
ಶಿಕ್ಷಕರಿಗೆ ನಿರಂತರ ಶೈಕ್ಷಣಿಕ ಮಾರ್ಗದರ್ಶನದೊಂದಿಗೆ ರಚನಾತ್ಮಕ ಶಿಕ್ಷಕರ ಸಬಲೀಕರಣ ಕಾರ್ಯಕ್ರಮವನ್ನು (TEP) ಒಳಗೊಂಡಿದೆ ಎಂದು ಗುರುವಾರ ಬಿಡುಗಡೆ ಮಾಡಲಾದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎಸ್‌ಬಿಐ ಫೌಂಡೇಶನ್ ಸಹಯೋಗದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಸಹಯೋಗ ಕುರಿತು ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಪ್ರಕಾಶ್ ಮಾತನಾಡಿ, ಗ್ರಾಮೀಣ ಭಾರತದಲ್ಲಿ ಶೈಕ್ಷಣಿಕ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಗುಣಮಟ್ಟದ ವೈಜ್ಞಾನಿಕ ಶಿಕ್ಷಣ ಮತ್ತು ಅಗತ್ಯ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ನಾವು ವಿದ್ಯಾರ್ಥಿಗಳಿಗೆ ವಿಜ್ಞಾನವನ್ನು ಹೆಚ್ಚು ಪ್ರಾಯೋಗಿಕವಾಗಿ ತಿಳಿಯಲು ಅನುವು ಮಾಡಿಕೊಡುತ್ತಿದ್ದೇವೆ ಎಂದು ತಿಳಿಸಿದರು.