ಬೆಂಗಳೂರು: ಕಳೆದ ವರ್ಷ ಇದೇ ಸಮಯದಲ್ಲಿ ಗಗನಕ್ಕೇರಿದ್ದ ತೊಗರಿ ಬೇಳೆ ಬೆಲೆ ಈ ವರ್ಷ ಗಣನೀಯವಾಗಿ ಕುಸಿತ ಕಂಡಿದ್ದು, ಗ್ರಾಹಕರಲ್ಲಿ ಹರ್ಷ ಮನೆ ಮಾಡಿದೆ.
ಗಗನದತ್ತ ಮುಖ ಮಾಡಿದ್ದ ತೊಗರಿ ಬೇಳೆ ಬೆಳೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದ್ದು, ದೇಶದಲ್ಲಿ ಇಳುವರಿ ಹೆಚ್ಚಾದ ಹಿನ್ನಲೆಯಲ್ಲಿ ಬೆಲೆಯಲ್ಲಿ ಕೂಡ ಕುಸಿತ ಕಂಡುಬಂದಿದೆ ಎನ್ನಲಾಗಿದೆ.
ಇದರಿಂದಾಗಿ ಕೈಗೆಟಕುವ ದರದಲ್ಲಿ ಗ್ರಾಹಕರು ತೊಗರಿ ಬೇಳೆ ಖರೀದಿಸಲು ಸಾಧ್ಯವಾಗುತ್ತಿದೆ. ಆದರೆ, ಕಳೆದ ವರ್ಷ ಕ್ವಿಂಟಲ್‌ಗೆ 12 ಸಾವಿರಕ್ಕೆ ಏರಿಕೆ ಕಂಡಿದ್ದ ತೊಗರಿ ದರ ಈ ಬಾರಿ 6,500ರಿಂದ 7 ಸಾವಿರ ರೂ ಆಸುಪಾಸಿಗೆ ಕುಸಿದಿದೆ.
ಉತ್ಪಾದನೆ ಹೆಚ್ಚಳ
ತೊಗರಿ ಕಣಜ ಎಂದೇ ಖ್ಯಾತಿ ಪಡೆದಿರುವ ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಹೆಚ್ಚಿನ ಇಳುವರಿ ಬಂದಿರುವುದರ ಜೊತೆಗೆ ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶದಲ್ಲಿಯೂ ಉತ್ಪಾದನೆ ಹೆಚ್ಚಿದ ಪರಿಣಾಮ ತೊಗರಿ ಬೇಳೆಯ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ.
ಅಲ್ಲದೆ ಕೇಂದ್ರ ಸರ್ಕಾರವು ಬರ್ಮಾ, ಘಾನಾ, ದಕ್ಷಿಣ ಆಫ್ರಿಕಾ ದೇಶಗಳಿಂದ ಈ ಬಾರಿ ತೊಗರಿಯನ್ನು ಆಮದು ಮಾಡಿಕೊಂಡಿದ್ದರಿಂದ ತೊಗರಿ ಸಂಗ್ರಹ ಯಥೇಚ್ಛವಾಗಿದೆ. ದಾಲ್ ಮಿಲ್‌ಗಳು ಹೆಚ್ಚಿನ ಪ್ರಮಾಣದಲ್ಲಿ ತೊಗರಿ ಬೇಳೆಯನ್ನು ಉತ್ಪಾದನೆ ಮಾಡಿವೆ ಎಂದು ಪತ್ರಿಕೆಯೊಂದರ ವರದಿಯಲ್ಲಿ ಉಲ್ಲೇಖಿಸಲಾಗಿದೆ.
'ಈ ಬಾರಿ ಕಲಬುರಗಿ, ವಿಜಯಪುರ ಜಿಲ್ಲೆ ಹಾಗೂ ಪಕ್ಕದ ಆಂಧ್ರಪ್ರದೇಶ, ತೆಲಂಗಾಣದಲ್ಲೂ ವ್ಯಾಪಕವಾಗಿ ತೊಗರಿ ಬೆಳೆದಿದ್ದಾರೆ. ಇಳುವರಿ ಉತ್ತಮವಾಗಿ ಬಂದಿದೆಯಾದರೂ ತೊಗರಿ ಗುಣಮಟ್ಟ ಕಡಿಮೆ ಇದೆ. ಹೀಗಾಗಿ, ಕ್ವಿಂಟಲ್‌ಗೆ ಸರಾಸರಿ 6,300ರಂತೆ ತೊಗರಿ ಖರೀದಿ ಮಾಡಿದ್ದೇವೆ. 9,200 ರಿಂದ 10 ಸಾವಿರದವರೆಗೆ ಪ್ರತಿ ಕ್ವಿಂಟಲ್ ತೊಗರಿ ಬೇಳೆಯನ್ನು ಮಾರಾಟ ಮಾಡುತ್ತಿದ್ದೇವೆ. ಮೂರ್ನಾಲ್ಕು ತಿಂಗಳ ಹಿಂದೆ ಪ್ರತಿ ಕೆ.ಜಿಗೆ 120 ಇದ್ದ ತೊಗರಿ ಬೇಳೆ ದರವು ಈಗ 95ರಿಂದ 100 ರೂ ನತೆ ಮಾರಾಟವಾಗುತ್ತಿದೆ. ಒಂದು ತಿಂಗಳ ಬಳಿಕ ಮತ್ತೆ ಕೊಂಚ ದರ ಏರಿಕೆಯಾಗಬಹುದು' ಎಂದು ವ್ಯಾಪಾರಿಯೊಬ್ಬರು ಹೇಳಿದ್ದಾರೆ.
ಕಳೆದ ವರ್ಷ ನೆಟೆ ರೋಗ ಬಂದಿದ್ದರಿಂದ ತೊಗರಿ ಉತ್ಪಾದನೆ ಕುಸಿದಿತ್ತು. ಈ ಬಾರಿ ಉತ್ತಮ ಇಳುವರಿ ಬಂದಿದ್ದರಿಂದ ದಾಲ್ ಮಿಲ್‌ನವರು ಪ್ರತಿ ಕ್ವಿಂಟಲ್‌ಗೆ ₹6,300ರಂತೆ ತೊಗರಿ ಖರೀದಿ ಮಾಡಿದ್ದಾರೆ. ಹೀಗಾಗಿ, ತೊಗರಿ ಬೇಳೆ ದರವೂ ಇಳಿಕೆಯಾಗಿದೆ. 2024ರ ಜುಲೈನಲ್ಲಿ ಪ್ರತಿ ಕೆ.ಜಿ ತೊಗರಿ ಬೇಳೆ ದರವು 180 ರೂಗೆ ತಲುಪಿತ್ತು. ಬಳಿಕ ಈ ವರ್ಷದ ಜನವರಿಯಿಂದ ತೊಗರಿ ಬೇಳೆ ಬೆಲೆಯಲ್ಲಿ ಇಳಿಕೆ ಆರಂಭವಾಗಿತ್ತು.
'Mandi-Shulk' ತೆರವು ಮಾಡಿದ್ದ ಮಧ್ಯಪ್ರದೇಶ ಸರ್ಕಾರ
ಈ ಹಿಂದೆ ಮಧ್ಯಪ್ರದೇಶ ಸಚಿವ ಸಂಪುಟ ಸಭೆಯಲ್ಲಿ ತೊಗರಿ ಬೇಳೆ ಮೇಲಿನ Mandi-Shulk ತೆರವು ಮಾಡುವ ಮಹತ್ವದ ನಿರ್ಣಯ ಕೈಗೊಳ್ಳಲಾಗಿತ್ತು. ಜೂನ್ 10ರಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ಅಧ್ಯಕ್ಷತೆಯಲ್ಲಿ ಭೋಪಾಲ್‌ನ ಮಂತ್ರಾಲಯದಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ಹೊರಗಿನಿಂದ ಆಮದು ಮಾಡಿಕೊಳ್ಳುವ ತೊಗರಿ ಬೇಳೆ (ಪಾರಿವಾಳ ಬಟಾಣಿ) ಮೇಲೆ 'ಮಂಡಿ-ಶುಲ್ಕ' ಅನ್ನು ಸಂಪೂರ್ಣವಾಗಿ ವಿನಾಯಿತಿ ನೀಡಲು ನಿರ್ಧರಿಸಲಾಗಿತ್ತು.