ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾದ ಮುರುಡೇಶ್ವರ ದೇವಾಲಯದಲ್ಲಿ ಅಧಿಕೃತವಾಗಿ ವಸ್ತ್ರ ಸಂಹಿತೆ ಜಾರಿಗೆ ಬಂದಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರು ಭಾರತೀಯ ಸಾಂಪ್ರದಾಯಿಕ ಉಡುಪು ಧರಿಸುವಂತೆ ಸೂಚಿಸಲಾಗಿದೆ.
ಹೊಸ ವಸ್ತ್ರ ಸಂಹಿತೆ ಪ್ರಕಾರ ಪುರುಷರು ಅಂಗಿ, ಧೋತಿ, ಪ್ಯಾಂಟ್ ಮತ್ತು ಕುರ್ತಾ ಪೈಜಾಮ, ಮಹಿಳೆಯರು ಸೀರೆ, ಸಾಲ್ವರ್ -ಚೂಡಿದಾರ ಧರಿಸಿ ದೇವರ ದರ್ಶನ ಪಡೆಯಬಹುದು ಎಂದು ತಿಳಿಸಲಾಗಿದೆ.
ದೇವಾಲಯದೊಳಗೆ ಪಾಶ್ಚಿಮಾತ್ಯ ಶೈಲಿಯ ಅಥವಾ ಕ್ಯಾಶುಯಲ್ ಉಡುಪುಗಳಿಗೆ ಅನುಮತಿ ನಿರಾಕರಿಸಲಾಗಿದೆ. ಹೊಸ ನಿಯಮವನ್ನು ಭಕ್ತರಿಗೆ ಗೆ ತಿಳಿಸಲು ದೇವಸ್ಥಾನದ ಪ್ರವೇಶ ದ್ವಾರದಲ್ಲಿ ಸೂಚನಾ ಫಲಕವನ್ನು ಅಳವಡಿಸಲಾಗಿದೆ.
ದೇವಸ್ಥಾನದ ಪಾವಿತ್ರ್ಯತೆ ಕಾಪಾಡಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ದೇವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಮುರುಡೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಕೆಲವು ಭಕ್ತರು ಅನುಚಿತ ಮತ್ತು ಬೇಕಾಬಿಟ್ಟಿ ವಸ್ತ್ರ ಧರಿಸಿ ಪ್ರವೇಶಿಸುತ್ತಿದ್ದರು ಎಂಬ ಆಕ್ಷೇಪಗಳು ಕೇಳಿಬಂದಿದ್ದವು.
ಈ ಕುರಿತು ಸ್ಥಳೀಯ ಭಕ್ತರು ಮತ್ತು ಹಿಂದೂ ಪರ ಸಂಘಟನೆಗಳು ದೇವಾಲಯದ ಆಡಳಿತ ಮಂಡಳಿಗೆ ವಸ್ತ್ರ ಸಂಹಿತೆ ಜಾರಿಗೊಳಿಸುವಂತೆ ಮನವಿ ಸಲ್ಲಿಸಿದ್ದವು. ಈ ಮನವಿಗಳನ್ನು ಪರಿಗಣಿಸಿ, ಆಡಳಿತ ಮಂಡಳಿಯು ಈಗ ಕಡ್ಡಾಯ ವಸ್ತ್ರ ಸಂಹಿತೆ ಜಾರಿಗೊಳಿಸಿದೆ.