ಮಂಗಳೂರು: ಕುಡುಪುವಿನಲ್ಲಿ ಏಪ್ರಿಲ್ 27 ರಂದು ನಡೆದಿದ್ದ ಗುಂಪು ಹತ್ಯೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಚಿಂದಿ ಆಯುವವನ ಬೆತ್ತಲೆ ದೇಹದ ಬಳಿ ನಿಂತಿದ್ದ ನಾಲ್ವರು ಅಪರಿಚಿತ ವ್ಯಕ್ತಿಗಳ ಕೆಳಗಿನ ಕಾಲುಗಳು ಮತ್ತು ಪಾದರಕ್ಷೆಗಳನ್ನು ಮಾತ್ರ ತೋರಿಸುವ ಪೋಟೊ ಆರೋಪಿಗಳ ಗುರುತು ಪತ್ತೆ ಮಾಡುವಲ್ಲಿ ನೆರವಾಗಿದೆ.
ಹೌದು. ಗುಂಪು ಹತ್ಯೆಯಿಂದ ಮೃತಪಟ್ಟಿದ್ದ ಕೇರಳದ ಮಲಪ್ಪುರಂ ಜಿಲ್ಲೆಯ 38 ವರ್ಷದ ಅಶ್ರಫ್ ಫೋಟೋ ಅಸ್ಪಷ್ಟವಾಗಿತ್ತು. ಮಕಾಡೆ ಮಲಗಿದ್ದು, ನಾಲ್ಕು ವ್ಯಕ್ತಿಗಳ ಕಾಲುಗಳನ್ನು ಮಾತ್ರ ಬಹಿರಂಗಪಡಿಸಿತ್ತು. ಇದರ ಹೊರತಾಗಿ ಕ್ರೂರ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿರುವ 20 ಜನರನ್ನು ಪತ್ತೆಹಚ್ಚಲು ಮತ್ತು ಗುರುತಿಸಲು ಮಂಗಳೂರು ನಗರ ಪೊಲೀಸರು ಪಾದರಕ್ಷೆಗಳ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.
ಈ ಕುರಿತು ಸುದ್ದಿಗಾರರೊಂದಿಗೆ ವಿವರ ಹಂಚಿಕೊಂಡ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ, "ಒಂದು ಜೊತೆ ಪಾದರಕ್ಷೆಗಳು ತುಂಬಾ ಮಣ್ಣಾಗಿದ್ದು, ಅದರ ಮೂಲ ಬಣ್ಣವು ಅಸ್ಪಷ್ಟವಾಗಿತ್ತು. ಹೀಗಾಗಿ ನಮ್ಮ ಗುರುತಿನ ಪ್ರಯತ್ನಗಳನ್ನು ಸ್ವಲ್ಪಮಟ್ಟಿಗೆ ನಿಧಾನಗೊಳಿಸಿತು. ಆದರೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಮತ್ತು ಸ್ಥಳೀಯ ಗುಪ್ತಚರ ಮಾಹಿತಿ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.
ದಾಳಿ ನಡೆದಾಗ ಸ್ಥಳದಲ್ಲಿ 125ಕ್ಕೂ ಹೆಚ್ಚು ಮಂದಿ ಇದ್ದರು ಎಂಬುದು ತಿಳಿದುಬಂದಿದೆ. ಇಲ್ಲಿಯವರೆಗೆ 35 ವ್ಯಕ್ತಿಗಳಿಂದ ಹೇಳಿಕೆಗಳನ್ನು ದಾಖಲಿಸಲಾಗಿದೆ. 10 ಕ್ಕೂ ಹೆಚ್ಚು ಮಂದಿಯಿಂದ ಮೌಖಿಕ ಸಾಕ್ಷ್ಯ ಸಿಕ್ಕಿದೆ ಎನ್ನಲಾಗಿದೆ.
ಸ್ಥಳೀಯ ಕ್ರಿಕೆಟ್ ಪಂದ್ಯದ ಸ್ಥಳದಲ್ಲಿ ಪ್ರದರ್ಶಿಸಲಾಗಿದ್ದ ಧ್ವಜವನ್ನು ಅಶ್ರಫ್ ತೆಗೆದ ನಂತರ ಮಾರಣಾಂತಿಕ ಹಲ್ಲೆ ನಡೆದಿದೆ. ಇಬ್ಬರು ವ್ಯಕ್ತಿಗಳು ಹಿಂಸಾಚಾರವನ್ನು ಪ್ರಾರಂಭಿಸಿದ್ದಾರೆ. ತದನಂತರ ಅಲ್ಲಿದ್ದವರೆಲ್ಲರೂ ಸೇರಿ ಹಲ್ಲೆ ನಡೆಸಿದ್ದಾರೆ. ಅಶ್ರಫ್ ತಪ್ಪಿಸಿಕೊಳ್ಳಲು ಯತ್ನಿಸಿದನಾದರೂ, ಆತನನ್ನು ಹಿಂಬಾಲಿಸಿ ಹಿಡಿದು, ಮತ್ತೆ ಥಳಿಸಿ ಕೊಲೆ ಮಾಡಿದ್ದಾರೆ. ಆಘಾತಕಾರಿ ಸಂಗತಿಯೆಂದರೆ, ಹತ್ತಿರದಲ್ಲಿಯೇ ಒಬ್ಬ ವ್ಯಕ್ತಿ ಸತ್ತರೂ ಕ್ರಿಕೆಟ್ ಪಂದ್ಯವು ಅಡೆತಡೆಯಿಲ್ಲದೆ ಮುಂದುವರೆದಿದೆ ಎಂದು ತಿಳಿಸಿದರು.
ಈ ಪ್ರದೇಶದಲ್ಲಿ ಸಿಸಿಟಿವಿ ಕಣ್ಗಾವಲು ಇಲ್ಲದಿರುವುದು ತನಿಖಾಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿತು. ಆರಂಭಿಕ ಹಂತದಲ್ಲಿ ಸ್ವಲ್ಪ ಮಟ್ಟಿಗೆ ಪ್ರಗತಿ ಸಾಧಿಸಲಾಗಿತ್ತು. ಆದರೆ ಒಬ್ಬ ಪ್ರೇಕ್ಷಕರಿಂದ ತೆಗೆದಿದೆ ಎನ್ನಲಾದ ಫೋಟೋ ಪ್ರಮುಖ ಸಾಕ್ಷ್ಯವೆಂದು ಸಾಬೀತಾಗಿದೆ" ಎಂದು ಕಮಿಷನರ್ ಹೇಳಿದರು.
ಮಾಜಿ ಕಾರ್ಪೊರೇಟರ್ ಪತಿ ರವೀಂದ್ರ, ಅಲಿಯಾಸ್ ಪಿಸ್ತೂಲ್ ರವಿ ಭಾಗಿಯಾಗಿರುವ ವದಂತಿ ಕುರಿತು ಪ್ರತಿಕ್ರಿಯಿಸಿದ ಸುಧೀರ್ ಕುಮಾರ್ ರೆಡ್ಡಿ, ಅವರು ಗುಂಪು ಹಲ್ಲೆಯಲ್ಲಿ ಭಾಗಿಯಾಗಿದ್ದಾರೆ ಅಥವಾ ಪ್ರಚೋದಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ತನಿಖೆ ಮುಂದುವರೆದಿದೆ. ಬಿಡುಗಡೆಯಾಗಿರುವ ಕೆಲ ಆರೋಪಿಗಳಿಗೆ ಜಾಮೀನು ಸಿಗದ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಸೂಕ್ತ ಪುರಾವೆಗಳಿದ್ದಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡುವುದಕ್ಕಿಂತ ಮುಂದೆ ಬಂದು ಪೊಲೀಸರಿಗೆ ದೂರು ನೀಡಿ ಎಂದು ಜನರಿಗೆ ಅವರು ಮನವಿ ಮಾಡಿದರು.