ಬೆಂಗಳೂರು: ಬುಧವಾರ ಮಧ್ಯಾಹ್ನ ಎಂಎಸ್ ಪಾಳ್ಯದ ವಾಣಿಜ್ಯ ಕಟ್ಟಡವೊಂದರಲ್ಲಿ ಕ್ರಿಪ್ಟೋಕರೆನ್ಸಿ ವಹಿವಾಟಿನ ವೇಳೆ ಆರು ಅಪರಿಚಿತ ಶಸ್ತ್ರಸಜ್ಜಿತ ವ್ಯಕ್ತಿಗಳು ಕೆಂಗೇರಿಯ 33 ವರ್ಷದ ಉದ್ಯಮಿಯೊಬ್ಬರಿಂದ 2 ಕೋಟಿ ರೂಪಾಯಿ ನಗದು ದೋಚಿದ್ದಾರೆ.
ಶ್ರೀಹರ್ಷ ವಿ ಹಣವನ್ನು USDT (ಕ್ರಿಪ್ಟೋಕರೆನ್ಸಿ) ಆಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾಗ, ದರೋಡೆಕೋರರು ಆವರಣಕ್ಕೆ ನುಗ್ಗಿ, ಚಾಕುಗಳನ್ನು ತೋರಿಸಿ ಬೆದರಿಸಿದ್ದಾರೆ. ಬಳಿಕ ಹಣ ಮತ್ತು ನಾಲ್ಕು ಮೊಬೈಲ್ ಫೋನ್‌ಗಳನ್ನು ದೋಚಿ, ಅವರನ್ನು ಕೂಡಿಹಾಕಿ ಪರಾರಿಯಾಗಿದ್ದಾರೆ.
ಎಫ್‌ಐಆರ್ ಪ್ರಕಾರ, ಹರ್ಷ ತನ್ನ ಕೋಲ್ಡ್-ಪ್ರೆಸ್ಡ್ ಎಣ್ಣೆ ವ್ಯವಹಾರಕ್ಕಾಗಿ ಉಪಕರಣವೊಂದನ್ನು ಆಮದು ಮಾಡಿಕೊಳ್ಳಲು ಸ್ನೇಹಿತರಿಂದ ಹಣವನ್ನು ಸಾಲವಾಗಿ ಪಡೆದಿದ್ದರು. ಯುಎಸ್‌ಡಿಐಟಿಗೆ ಹಣ ಕನ್ವರ್ಟ್ ಮಾಡಿಸುವ ಸಲುವಾಗಿ ಸ್ನೇಹಿತರಾದ ಪ್ರಕಾಶ್ ಅಗರ್ವಾಲ್ ಮತ್ತು ರಕ್ಷಿತ್ ಎಂಬುವವರನ್ನು ಸಂಪರ್ಕಿಸಿದ್ದರು. ಅವರು ಬೆಂಜಮಿನ್ ಎಂಬ ವ್ಯಕ್ತಿಯನ್ನು ಪರಿಚಯಿಸಿದ್ದರು.
ಆತ ಎಂಎಸ್ ಪಾಳ್ಯದಲ್ಲಿರುವ ಎಕೆ ಎಂಟರ್ಪ್ರೈಸಸ್ ಬಳಿ ಬರುವಂತೆ ಹರ್ಷ ಅವರಿಗೆ ಸೂಚಿಸಿದ್ದಾನೆ. ಅದರಂತೆ ಜೂನ್ 25ರಂದು ಮಧ್ಯಾಹ್ನ 3 ಗಂಟೆಗೆ ಎಂಎಸ್ ಪಾಳ್ಯದ ವಾಣಿಜ್ಯ ಸಂಕೀರ್ಣದಲ್ಲಿ ಬೆಂಜಮಿನ್ ಹಾಗೂ ಶ್ರೀಹರ್ಷ ಭೇಟಿಯಾಗಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ವಾಣಿಜ್ಯ ಸಂಕೀರ್ಣದಲ್ಲಿರುವ ಅಂಗಡಿಯೊಂದರಲ್ಲಿ ಶ್ರೀಹರ್ಷ, ಬೆಂಜಮಿನ್ ಮತ್ತು ಆತನ ಇಬ್ಬರು ಸ್ನೇಹಿತರು 2 ಕೋಟಿ ರೂ. ಹಣ ಎಣಿಕೆ ಮಾಡುತ್ತಿದ್ದಾಗ ಸಂಜೆ 4 ಗಂಟೆ ಸುಮಾರಿಗೆ ಆರು ಶಸ್ತ್ರಸಜ್ಜಿತ ವ್ಯಕ್ತಿಗಳು ಒಳಗೆ ನುಗ್ಗಿದ್ದಾರೆ. ಚಾಕುವಿನಿಂದ ಶ್ರೀಹರ್ಷ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅವರನ್ನು ರೂಂನಲ್ಲಿ ಕೂಡಿಹಾಕಿ 2 ಕೋಟಿ ರೂ. ಹಣ ದೋಚಿ ಪರಾರಿಯಾಗಿದ್ದಾರೆ.
ಬೆಂಜಮಿನ್ ಮತ್ತು ಆತನ ಸ್ನೇಹಿತರು ಕೂಡ ಅದಾದ ಸ್ವಲ್ಪ ಸಮಯದ ನಂತರ ಸ್ಥಳದಿಂದ ಪರಾರಿಯಾಗಿದ್ದಾರೆ. ಬೆಂಜಮಿನ್, ರಕ್ಷಿತ್ ಮತ್ತು ಇತರರನ್ನು ದರೋಡೆಗೆ ಸಂಬಂಧಿಸಿದಂತೆ ಶಂಕಿತರೆಂದು ಹರ್ಷ ಹೆಸರಿಸಿದ್ದಾರೆ.
ಸದ್ಯ ಶ್ರೀಹರ್ಷ ನೀಡಿರುವ ದೂರಿನ ಮೇರೆಗೆ, ವಿದ್ಯಾರಣ್ಯಪುರ ಠಾಣೆ ಪೊಲೀಸರು ಸಂಭಾವ್ಯ ಹವಾಲಾ ಸಂಪರ್ಕಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಬಿಎನ್‌ಎಸ್‌ನ ಸೆಕ್ಷನ್ 310(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬೆಂಜಮಿನ್ ಹರ್ಷ ಮತ್ತು ಆತನ ಸ್ನೇಹಿತರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.