ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳ 6 ರಿಂದ 12ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಮಟ್ಟವನ್ನು ಹೆಚ್ಚಿಸಲು, ಗುಣಮಟ್ಟದ ಡಿಜಿಟಲ್ ಕಲಿಕೆಗಾಗಿ ಖಾನ್ ಅಕಾಡೆಮಿಯ ಸಹಯೋಗದಲ್ಲಿ 'ಜ್ಞಾನ ಸೇತು' ಕಾರ್ಯಕ್ರಮವನ್ನು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅನುಷ್ಠಾನಗೊಳಿಸುತ್ತಿದೆ.
ಈ ಕಾರ್ಯಕ್ರಮದ ಮೂಲಕ ರಾಜ್ಯದ 21,726 ಹಿರಿಯ ಪ್ರಾಥಮಿಕ ಶಾಲೆ, 4,821 ಪ್ರೌಢಶಾಲೆ ಹಾಗೂ 1,229 ಪಿಯು ಕಾಲೇಜುಗಳಲ್ಲಿ ಈಗಾಗಲೇ ಲಭ್ಯವಿರುವ ಎಲ್‌ಇಡಿ ಪ್ರೊಜೆಕ್ಟರ್ ಅಥವಾ ಸ್ಮಾರ್ಟ್ ಬೋರ್ಡ್‌ಗಳನ್ನು ಬಳಸಿಕೊಂಡು ವಾರದಲ್ಲಿ ಒಂದು ದಿನ ಡಿಜಿಟಲ್ ಕಲಿಕೆ ನೀಡಲಾಗುತ್ತದೆ.
ಲಾಭರಹಿತ ಸಂಸ್ಥೆಯಾಗಿರುವ ಖಾನ್ ಅಕಾಡೆಮಿಯ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗುವ ಮೂಲಕ ಹಾಗೂ ಮೊಬೈಲ್ ಫೋನ್ ಆ್ಯಪ್ ಮೂಲಕ ವಿದ್ಯಾರ್ಥಿಗಳು ವಿಜ್ಞಾನ, ತಂತ್ರಜ್ಞಾನ, ಗಣಿತ, ಎಂಜಿನಿಯರಿಂಗ್ (ಸ್ಟೆಮ್) ಸಂಬಂಧಿಸಿದ ವಿಷಯಗಳನ್ನು ಕಲಿಯಬಹುದು.
ಇದೇ ವೇಳೆ ಶಿಕ್ಷಕರು ಹಾಗೂ ಉಪನ್ಯಾಸಕರು ಕೂಡ ಖಾನ್ ಅಕಾಡೆಮಿಯ ಕಾನ್‌ಮಿಗೋ ಆರ್ಟಿಫೀಷಿಯಲ್ ಇಂಟಲಿಜೆನ್ಸ್ ಬಳಸಿಕೊಂಡು ತರಬೇತಿ ಪಡೆದುಕೊಂಡು ಪಾಠ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದ ಅಡಿಯಲ್ಲಿ ಪ್ರತಿ ಶನಿವಾರದಂದು ಒಂದು ಬೋಧನಾ ಅವಧಿಯನ್ನು ಖಾನ್ ಅಕಾಡೆಮಿ ಇಂಡಿಯಾ ಮೂಲಕ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಕಲೆ ಮತ್ತು ಗಣಿತ (STEAM) ವಿಷಯಗಳಿಗೆ ನಿಗದಿಪಡಿಸಲಾಗುತ್ತದೆ. ಸಮವಯಸ್ಕ ಅಧ್ಯಯನ (Peer learning) ದ ಅವಧಿಗಳಿಗಾಗಿ ಡಿಜಿಟಲ್ ಅಧ್ಯಯನ ತಂಡಗಳನ್ನು ರೂಪಿಸಿಸಲಾಗುತ್ತದೆ. ಉತ್ತಮ ಪ್ರಗತಿಯನ್ನು ಸಾಧಿಸುವ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ನೀಡುವುದು ಎಂದು ತಿಳಿಸಲಾಗಿದೆ.
ಕಾರ್ಯಾಗಾರ ಮತ್ತು ವೆಬಿನಾರ್‌ಗಳ ಮೂಲಕ ಖಾನ್ ಅಕಾಡೆಮಿ ಇಂಡಿಯಾದಲ್ಲಿ ಲಭ್ಯವಿರುವ ಡಿಜಿಟಲ್ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ಬೋಧನ ಕಲಿಕಾ ಪ್ರಕ್ರಿಯೆಗಳಲ್ಲಿ ಬಳಸುವ ಬಗ್ಗೆ, ಶಿಕ್ಷಕರಿಗೆ/ಉಪನ್ಯಾಸಕರಿಗೆ ತರಬೇತಿ ನೀಡಲಾಗುತ್ತದೆ. ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರತಿ ಬ್ಲಾಕ್‌ನಲ್ಲೂ ಡಿಜಿಟಲ್ ಮೆಂಟರ್‌ಗಳನ್ನು ಶಿಕ್ಷಕರಿಗೆ ನೆರವು ನೀಡಲು ನಿಯೋಜಿಸಲಾಗುವುದು.
ಕಾರ್ಯಕ್ರಮದ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಮೂರನೇ ವ್ಯಕ್ತಿಯ ಮೌಲ್ಯಮಾಪನ ಸಂಸ್ಥೆಯನ್ನು ನೇಮಿಸಲಾಗುವುದು ಮತ್ತು ರಾಜ್ಯ ಮಟ್ಟದಲ್ಲಿ ನಿಯಮಿತ ವಿಮರ್ಶೆಗಳನ್ನು ನಡೆಸಲಾಗುವುದು. ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ನಿರ್ದೇಶಕರು ಅನುಷ್ಠಾನ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಕಾರ್ಯಕ್ರಮದ ಕಾರ್ಯಗತಗೊಳಿಸುವಿಕೆಯನ್ನು ಮೇಲ್ವಿಚಾರಣೆ ಮಾಡುತ್ತಾರೆಂದು ಆದೇಶದಲ್ಲಿ ತಿಳಿಸಲಾಗಿದೆ.