ಬೆಂಗಳೂರು: ನಾಡಹಬ್ಬ ಮೈಸೂರು ದಸರಾ-2025 ಆಚರಣೆ ಕುರಿತು ವಿಧಾನಸೌಧ ಸಭಾಂಗಣದಲ್ಲಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಇಂದು ಉನ್ನತ ಮಟ್ಟದ ಸಮಿತಿ ಸಭೆ ನಡೆಯಿತು.
ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಜೃಂಭಣೆ ಭರದಲ್ಲಿ ದಸರಾದ ಚಾರಿತ್ರಿಕ ಮಹತ್ವ ಮರೆಯಾಗಬಾರದು. ಅನಗತ್ಯವಾಗಿ ಹಣ ಖರ್ಚು ಮಾಡುವುದು ವೈಭವ ಅಲ್ಲ. ಜನರ, ಪ್ರವಾಸಿಗರ ಸುರಕ್ಷತೆ ಮತ್ತು ಅನುಕೂಲಕ್ಕೆ ಮೊದಲ ಆದ್ಯತೆ ಇರಲಿ ಎಂದು ಸೂಚಿಸಿದರು.
ಈ ಬಾರಿ ರಾಜ್ಯಾದ್ಯಂತ ಮಳೆ- ಬೆಳೆ ಉತ್ತಮವಾಗಿದ್ದು, ನದಿ, ಕೆರೆಗಳು ತುಂಬಿದ್ದು, ವೈಭವದಿಂದ ದಸರಾ ಆಚರಿಸಲಾಗುವುದು. ಸೆಪ್ಟೆಂಬರ್ 22 ರಂದು ದಸರಾ ಹಬ್ಬಕ್ಕೆ ಚಾಲನೆ ದೊರೆಯಲಿದ್ದು, ಅಕ್ಟೋಬರ್ 2 ರಂದು ವಿಜಯದಶಮಿ, ಜಂಬೂ ಸವಾರಿ ನಡೆಯಲಿದೆ. ದಸರಾ ಈ ಬಾರಿ 10 ದಿನಗಳ ಬದಲು 11 ದಿನಗಳ ಕಾಲ ನಡೆಯಲಿದೆ ಎಂದರು.
ದಸರಾಕ್ಕೆ ತನ್ನದೇ ಆದ ಚಾರಿತ್ರಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯಿದ್ದು, ಇದಕ್ಕೆ ಪೂರಕವಾಗಿ ದಸರಾ ಆಚರಿಸಲಾಗುವುದು, ವಿಶ್ವ ವಿಖ್ಯಾತ ದಸರಾದ ಪರಂಪರೆ ಮುಂದುವರೆಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಬೇಕು ಎಂದು ಸೂಚಿಸಿದರು.
ಪೊಲೀಸರು ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಬೇಕು. ಕಾನೂನು ಸುವ್ಯವಸ್ಥೆಗೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಎಲ್ಲಾ ಜಿಲ್ಲೆಗಳಿಂದ ಆಗಮಿಸುವ ಸ್ತಬ್ಧಚಿತ್ರಗಳು ವೈವಿಧ್ಯಮಯವಾಗಿರಬೇಕು. ಈ ಬಾರಿ ಸ್ತಬ್ಧಚಿತ್ರಗಳಲ್ಲಿ ಗಾಂಧೀಜಿ ವಿಚಾರಧಾರೆಗಳಿಗೂ ಸಹ ಅವಕಾಶ ಕಲ್ಪಿಸಬೇಕು ಎಂದರು.
ಕಳೆದ ವರ್ಷ ದಸರಾ ಆಚರಣೆಗೆ ರೂ. 40 ಕೋಟಿ ಅನುದಾನ ಒದಗಿಸಲಾಗಿತ್ತು. ಈ ಬಾರಿ ಅದ್ದೂರಿಯಾಗಿ ದಸರಾ ಆಚರಣೆಗೆ ಅಗತ್ಯವಾದಷ್ಟು ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಸಚಿವರಾದ ಡಾ. ಎಚ್.ಸಿ.ಮಹದೇವಪ್ಪ, ಕೆ.ಜೆ.ಜಾರ್ಜ್, ಶಿವರಾಜ ತಂಗಡಗಿ, ಕೆ.ವೆಂಕಟೇಶ್, ಶಾಸಕರಾದ ಜಿ.ಟಿ.ದೇವೇಗೌಡ, ರಮೇಶ್ ಬಂಡಿಸಿದ್ದೇಗೌಡ, ಪುಟ್ಟರಂಗಶೆಟ್ಟಿ, ತನ್ವೀರ್ ಸೇಠ್, ಡಾ.ಯತೀಂದ್ರ ಎಸ್, ಡಾ.ಡಿ.ತಿಮ್ಮಯ್ಯ, ಅನಿಲ್ ಕುಮಾರ್, ಎ.ಆರ್.ಕೃಷ್ಣಮೂರ್ತಿ, ಮಧು ಜಿ ಮಾದೇಗೌಡ, ಕೆ.ಹರೀಶ್ ಗೌಡ, ದರ್ಶನ್ ಧ್ರುವನಾರಾಯಣ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡರು.