ಮಂಗಳೂರು: ಮಂಗಳೂರು ಜಿಲ್ಲೆಯ ಬಂಟ್ವಾಳ ಬಳಿಯ ಫರಂಗಿಪೇಟೆ ಪಟ್ಟಣದ ದ್ವಿತೀಯ ಪಿಯುಸಿ ವಿದ್ಯಾರ್ಥಿ ನಾಪತ್ತೆಯಾಗಿ ಐದು ದಿನ ಕಳೆದರೂ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರ "ನಿಷ್ಕ್ರಿಯತೆ" ಖಂಡಿಸಿ ಹಿಂದೂ ಪರ ಸಂಘಟನೆಗಳು ಮತ್ತು ಬಿಜೆಪಿ ಶನಿವಾರ ಫರಂಗಿಪೇಟೆ ಬಂದ್ ಮಾಡಿ, ಪ್ರತಿಭಟನೆ ನಡೆಸಿತು.
ಪ್ರತಿಭಟನೆ ಹಿನ್ನೆಲೆಯಲ್ಲಿ ಪೊಲೀಸರು ಕರ್ನಾಟಕ ರಾಜ್ಯ ಮೀಸಲು ಪೊಲೀಸ್(ಕೆಎಸ್‌ಆರ್‌ಪಿ)ಯ ಎರಡು ತುಕಡಿಗಳು ಮತ್ತು 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಈ ಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ನಿಯೋಜಿಸಿದ್ದಾರೆ.
ವಿಶ್ವ ಹಿಂದೂ ಪರಿಷತ್(ವಿಎಚ್‌ಪಿ), ಬಜರಂಗದಳ ಮತ್ತು ಬಿಜೆಪಿಯ ಕಾರ್ಯಕರ್ತರು, ಮಹಿಳೆಯರು ಸೇರಿದಂತೆ ನೂರಾರು ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಬಂದ್ ಹಿನ್ನೆಲೆಯಲ್ಲಿ ಹೆಚ್ಚಿನ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದವು.
ವಿದ್ಯಾರ್ಥಿ ನಾಪತ್ತೆ ಪ್ರಕರಣದಲ್ಲಿ "ಗಾಂಜಾ ಗ್ಯಾಂಗ್" ಭಾಗಿಯಾಗಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಮಾದಕವಸ್ತು ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರನ್ನು ಒತ್ತಾಯಿಸಿದರು.
ಮಂಗಳೂರು ನಗರದ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದರು ದಿಗಂತ್ ಫೆಬ್ರವರಿ 25 ರಂದು ಸಂಜೆ 7 ಗಂಟೆಗೆ ನಾಪತ್ತೆಯಾಗಿದ್ದಾನೆ. ಆ ದಿನ ಕಾಲೇಜ್ ಗೆ ತೆರಳಿ ಬೋರ್ಡ್ ಪರೀಕ್ಷೆಗೆ ತನ್ನ ಹಾಲ್ ಟಿಕೆಟ್ ತೆಗೆದುಕೊಂಡು ಸಂಜೆ ಆಂಜನೇಯ ವ್ಯಾಯಾಮ ಶಾಲೆಗೆ ಭೇಟಿ ನೀಡಿದ್ದಾನೆ. ಆದರೆ ಮನೆಗೆ ಹಿಂತಿರುಗಿಲ್ಲ.
ಹುಡುಕಾಟ ನಡೆಸಿದಾಗ ದಿಗಂತ್ ಅವರ ಚಪ್ಪಲಿಗಳು ಹಾಗೂ ಮೊಬೈಲ್ ಮನೆ ಸಮೀಪದ ರೈಲ್ವೆ ಹಳಿಗಳ ಬಳಿ ಪತ್ತೆಯಾಗಿವೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ.
ಪರೀಕ್ಷಾ ಭಯದಿಂದಾಗಿ ದಿಗಂತ್ ಕಾಣೆಯಾಗಿದ್ದಾನೆ ಎಂದು ತೀರ್ಮಾನಿಸಿದ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದು, ಮುಂದಿನ ಎರಡು ದಿನಗಳಲ್ಲಿ ಪೊಲೀಸರು ವಿದ್ಯಾರ್ಥಿಯನ್ನು ಪತ್ತೆಮಾಡಲು ವಿಫಲವಾದರೆ, ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.