ಬೆಂಗಳೂರು: ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹಕ್ಕಿಜ್ವರ ಭೀತಿಯಿಂದಾಗಿ ಚಿಕನ್ ವಹಿವಾಟಿನ ಮೇಲೆ ಪರಿಣಾಮ ಬೀರಿದ್ದು, ಚಿಕನ್ ಬೇಡಿಕೆ ಕುಸಿದು, ಮಾಂಸಪ್ರಿಯರು ಮಟನ್ ಮೊರೆ ಹೋಗುತ್ತಿದ್ದಾರೆ.
ಹೌದು.. ರಾಜ್ಯದಲ್ಲಿ ದಿನೇ ದಿನೇ ಹಕ್ಕಿಜ್ವರದ ಪ್ರಕರಣಗಳು ಹೆಚ್ಚಾಗುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ಪ್ರಕರಣಗಳು ವರದಿಯಾಗಿವೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ವ್ಯಾಪಕವಾಗಿದ್ದ ಹಕ್ಕಿ ಜ್ವರ ಭೀತಿ ಈ ಎರಡು ರಾಜ್ಯಗಳಿಗೆ ಹೊಂದಿಕೊಂಡಿರುವ ರಾಜ್ಯದ ಜಿಲ್ಲೆಗಳಲ್ಲೂ ವ್ಯಾಪಿಸಿದೆ.
ರಾಜ್ಯದ ಬಾಗಲಕೋಟೆ, ಬಳ್ಳಾರಿ, ಚಿಕ್ಕಬಳ್ಳಾಪುರ, ರಾಯಚೂರು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿದ್ದು, ಬಳ್ಳಾರಿಯಲ್ಲಿ ಸೋಂಕು ಪೀಡಿತ 8 ಸಾವಿರ ಕೋಳಿಗಳನ್ನು ನಾಶಪಡಿಸಲಾಗಿದೆ. ಮಹಾರಾಷ್ಟ್ರ, ರಾಜ್ಯದ ಚಿಕ್ಕಬಳ್ಳಾಪುರ, ಬಳ್ಳಾರಿ, ಪಕ್ಕದ ರಾಯಚೂರು ಜಿಲ್ಲೆಯಲ್ಲಿ ಹಕ್ಕಿಜ್ವರ ಬಂದಿರುವುದು ಖಚಿತಪಟ್ಟಿದೆ. ಕೋಳಿ ಪಾರಂ ಗಳಲ್ಲಿ ಮಾಲೀಕರು ತೀವ್ರ ನಿಗಾ ವಹಿಸಿದ್ದಾರೆ.
ಕುರಿ, ಮೇಕೆ ಮಾಂಸಕ್ಕೆ ಬೇಡಿಕೆ
ಈ ನಡುವೆ ಹಕ್ಕಿಜ್ವರ ಭೀತಿಯಿಂದಾಗಿ ಚಿಕನ್ ವ್ಯಾಪಾರದ ಮೇಲೆ ಪರಿಣಾಮ ಬೀರಿದ್ದು, ಚಿಕನ್ ವಹಿವಾಟು ದಿನೇ ದಿನೇ ಕುಸಿಯುತ್ತಾ ಸಾಗಿದೆ. ಅಂತೆಯೇ ಮಟನ್ ಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಮಾಂಸಪ್ರಿಯರು ಇದೀಗ ಮಟನ್ ಮೊರೆ ಹೋಗುತ್ತಿದ್ದಾರೆ.
ಮಟನ್ ದರ 50 ರೂ ಏರಿಕೆ
ಇನ್ನು ಮಾಂಸಾಹಾರ ಪ್ರಿಯರು ಮಟನ್ ನತ್ತ ಮುಖ ಮಾಡುತ್ತಲೇ ಮಟನ್ ಗೆ ಬೇಡಿಕೆ ಹೆಚ್ಚಾಗಿದ್ದು, ಇದರಿಂದ ದರ ಕೂಡ ಕೊಂಚ ಏರಿಕೆಯಾಗಿದೆ. ಪ್ರತೀ ಕೆಜಿ ಮಟನ್ ದರದಲ್ಲಿ 50 ಕೂ ಏರಿಕೆಯಾಗಿದ್ದು, ದರ ಏರಿಕೆ ಹೊರತಾಗಿಯೂ ಮಾಂಸಪ್ರಿಯರು ಮಟನ್ ಖರೀದಿಯಲ್ಲಿ ತೊಡಗಿದ್ದಾರೆ.
ಚಿಕನ್ ದರ ಕುಸಿತ
ಇನ್ನು ಹಕ್ಕಿ ಜ್ವರದಿಂದಾಗಿ ಚಿಕನ್ ಬೇಡಿಕೆ ಕುಸಿದಿದ್ದು, ಚಿಕನ್ ದರದಲ್ಲಿ 20 ರೂ ಇಳಿಕೆಯಾಗಿದೆ. ಆದಾಗ್ಯೂ ಚಿಕನ್ ಮಾರಾಟದಲ್ಲಿ ಚೇತರಿಕೆ ಕಾಣುತ್ತಿಲ್ಲ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.