ಬೆಂಗಳೂರು: ಶಾಲೆಗಳಲ್ಲಿ ತ್ರಿಭಾಷಾ ಸೂತ್ರವನ್ನು ಜಾರಿಗೆ ತರುವ ಕೇಂದ್ರ ಸರ್ಕಾರದ ಪ್ರಯತ್ನವನ್ನು ಪೀಪಲ್ಸ್ ಅಲೈಯನ್ಸ್ ಫಾರ್ ಫಂಡಮೆಂಟಲ್ ರೈಟ್ ಟು ಎಜುಕೇಶನ್ (PAFRE) ಬಲವಾಗಿ ವಿರೋಧಿಸಿದೆ. ಇದು ಮಕ್ಕಳ ಮಾತೃಭಾಷೆ ಕಲಿಕೆಯನ್ನು ದುರ್ಬಲಗೊಳಿಸುವುದಲ್ಲದೆ ಸೃಜನಶೀಲ ಕಲಿಕೆಗೆ ಅಡ್ಡಿಯುಂಟುಮಾಡುತ್ತದೆ ಎಂದು ವಾದಿಸಿದೆ. ಭಾಷಾ ವೈವಿಧ್ಯತೆಯನ್ನು ಗೌರವಿಸುವ ಮತ್ತು ರಾಜ್ಯಗಳಾದ್ಯಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಕಲಿಕೆಯನ್ನು ಖಚಿತಪಡಿಸುವ ಬಹುಭಾಷಾ ಶಿಕ್ಷಣ ನೀತಿಗೆ ಬದಲಾಯಿಸಬೇಕೆಂದು ಸಂಘಟನೆ ಒತ್ತಾಯಿಸಿದೆ.
ತ್ರಿಭಾಷಾ ನೀತಿಯು ಅದರ ಅಪ್ರಾಯೋಗಿಕತೆಯಿಂದಾಗಿ ಹಲವಾರು ದಕ್ಷಿಣ ರಾಜ್ಯಗಳಲ್ಲಿ ಪ್ರತಿರೋಧವನ್ನು ಎದುರಿಸಿದೆ ಎಂದು ಎತ್ತಿ ತೋರಿಸಿದೆ. ಇದನ್ನು ಜಾರಿಗೆ ತಂದಿರುವ ರಾಜ್ಯಗಳಲ್ಲಿಯೂ ಸಹ ವಿವಿಧ ಸಮಸ್ಯೆಗಳು ಮುಂದುವರೆದಿವೆ. ವಿಶೇಷವಾಗಿ ಉತ್ತರ ಭಾರತದಲ್ಲಿ ಮಕ್ಕಳು ದಕ್ಷಿಣ ಭಾರತದ ಭಾಷೆಗಳಿಗೆ ಒಡ್ಡಿಕೊಳ್ಳುವುದು ಕಡಿಮೆ. ಉತ್ತರ ಭಾರತದಲ್ಲಿರುವ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ದಕ್ಷಿಣ ಭಾರತೀಯ ಭಾಷೆಗಳನ್ನು ಅಥವಾ ಕಾಶ್ಮೀರಿ, ಪಂಜಾಬಿ, ಅಸ್ಸಾಮಿ, ಬಂಗಾಳಿ ಅಥವಾ ಒಡಿಯಾದಂತಹ ಇತರ ಪ್ರಾದೇಶಿಕ ಭಾಷೆಗಳನ್ನು ಮೂರನೇ ಭಾಷೆಯಾಗಿ ಮಕ್ಕಳಿಗೆ ಒದಗಿಸುವುದು ಅಪರೂಪ ಎಂದು ಹೇಳಿದೆ.
ದ್ವಿಭಾಷಾ ನೀತಿಯನ್ನು ಅನುಸರಿಸುವ ತಮಿಳುನಾಡು, ಪರ್ಯಾಯ ವಿಧಾನವು ಪರಿಣಾಮಕಾರಿಯಾಗಬಹುದು ಎಂದು ತೋರಿಸಿದೆ ಎಂದು ಹೇಳಿದೆ. ಭಾಷಾ ಕಲಿಕೆಯನ್ನು ಬೋಧನಾ ಮಾಧ್ಯಮಕ್ಕೆ ಸೀಮಿತಗೊಳಿಸಬಾರದು, ಮಕ್ಕಳು ಯೋಚಿಸಲು, ಆಲೋಚನೆ ವ್ಯಕ್ತಪಡಿಸಲು ಮತ್ತು ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಅನ್ವೇಷಿಸಲು ಮೂಲಭೂತ ಸಾಧನವಾಗಿ ನೋಡಬೇಕು ಎಂದು ಒತ್ತಿ ಹೇಳಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು 2005 ಇದನ್ನು ಗುರುತಿಸಿದ್ದರೂ, ಭಾಷಾ ನೀತಿಗಳು ಇನ್ನೂ ತಪ್ಪುದಾರಿಗೆಳೆಯಲ್ಪಡುತ್ತಿವೆ ಎಂದು ಸಂಸ್ಥೆ ಹೇಳಿಕೆ ಮೂಲಕ ಗಮನಸೆಳೆದಿದೆ.
ದಕ್ಷಿಣ ಭಾರತೀಯ ವಿದ್ಯಾರ್ಥಿಗಳು ಹಿಂದಿ ಕಲಿಯಲು ಸಿದ್ಧರಿರುತ್ತಾರೆ ಎಂದು ಭಾವಿಸಿ, ಅದರಿಂದ ಅವರಿಗೆ ಆಗುವ ಪ್ರಯೋಜನಗಳನ್ನು ಪರಿಗಣಿಸದೆ ತ್ರಿಭಾಷಾ ಸೂತ್ರವನ್ನು ಕಲಿಸುವುದಕ್ಕೆ ಟೀಕಿಸಿರುವ ಸಂಸ್ಥೆಯು ಈ ನೀತಿಯು ಈಶಾನ್ಯ ಭಾಗವನ್ನು ಬಹುಪಾಲು ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.
ದಕ್ಷಿಣ ಭಾರತದಲ್ಲಿ ಹಿಂದಿ ಶಿಕ್ಷಕರಿದ್ದರೂ ಸಹ, ಉತ್ತರ ಭಾರತೀಯ ಶಾಲೆಗಳಲ್ಲಿ ದಕ್ಷಿಣ ಭಾರತೀಯ ಭಾಷಾ ಶಿಕ್ಷಕರ ಕೊರತೆಯನ್ನು ವ್ಯವಸ್ಥೆಯ ವೈಫಲ್ಯವೆಂದು ಉಲ್ಲೇಖಿಸಲಾಗಿದೆ. ಇದಲ್ಲದೆ, ಅಂಕಗಳನ್ನು ಗಳಿಸಲು ಮಾತ್ರ ಸಂಸ್ಕೃತವನ್ನು ಮೂರನೇ ಭಾಷೆಯಾಗಿ ಪರಿಗಣಿಸುವ ಅಭ್ಯಾಸವನ್ನು PAFRE ಖಂಡಿಸಿದೆ.
ದಕ್ಷಿಣ ಭಾರತದಂತೆಯೇ ಉತ್ತರ ಭಾರತದ ರಾಜ್ಯಗಳು ತ್ರಿಭಾಷಾ ಮಾದರಿಯನ್ನು ಅನುಸರಿಸಿಲ್ಲ ಎಂದು ಹೇಳಿದೆ. ಇಂಗ್ಲಿಷ್‌ಗೆ ಆದ್ಯತೆ, ಸಾಕಷ್ಟು ತರಬೇತಿ ಅಥವಾ ಸಾಮಗ್ರಿಗಳಿಲ್ಲದೆ 1 ನೇ ತರಗತಿಯಿಂದ ಇಂಗ್ಲಿಷ್-ಮಾಧ್ಯಮ ಶಿಕ್ಷಣಕ್ಕೆ ತ್ವರಿತ ಬದಲಾವಣೆಯೊಂದಿಗೆ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹದಗೆಡಿಸಿದೆ. ಇದು ಭಾಷಾ ಕಲಿಕೆಯನ್ನು ಅಪೂರ್ಣವಾಗಿಸಿದ್ದು, ಶಿಕ್ಷಣ ಮಾನದಂಡಗಳನ್ನು ದುರ್ಬಲಗೊಳಿಸಿದೆ ಎಂದು ಟೀಕಿಸಿದೆ.
ಸಮಗ್ರ ಬಹುಭಾಷಾ ವಿಧಾನವನ್ನು ಪ್ರತಿಪಾದಿಸಿದ PAFRE, ನೀತಿ ನಿರೂಪಕರು ಭಾರತದ ಭಾಷಾ ವೈವಿಧ್ಯತೆಯನ್ನು ಗುರುತಿಸಿ ಎಲ್ಲರನ್ನೂ ಒಳಗೊಳ್ಳುವ ಭಾಷಾ ಸೂತ್ರವನ್ನು ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿದೆ. ಬಹುಭಾಷಾ ಶಿಕ್ಷಣವು ಬಹುತ್ವ ಮತ್ತು ಬಹು-ಸಾಂಸ್ಕೃತಿಕತೆಯನ್ನು ಉತ್ತೇಜಿಸುವ ಅಂತಾರಾಷ್ಟ್ರೀಯ ಉದಾಹರಣೆಗಳನ್ನು ಅದು ಉಲ್ಲೇಖಿಸಿದೆ.