ದುಬೈನಿಂದ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದಲ್ಲಿ ಬಂಧನಕ್ಕೀಡಾಗಿರುವ ಕನ್ನಡದ ನಟಿ ರನ್ಯಾ ರಾವ್ ಅವರ ಬೆಂಗಳೂರಿನ ನಿವಾಸದ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯ ದಾಳಿ ನಡೆಸಿ ಅಪಾರ ಪ್ರಮಾಣದ ನಗದು ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ವಶಪಡಿಸಿಕೊಂಡಿದೆ. ದುಬೈನಿಂದ ಸೋಮವಾರ ರಾತ್ರಿ ಎಮಿರೇಟ್ಸ್ ಏರ್‌ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿಯನ್ನು ತಪಾಸಣೆ ಮಾಡಿದಾಗ 14.80 ಕೆಜಿ ಚಿನ್ನ ಪತ್ತೆಯಾಗಿತ್ತು. ಬಳಿಕ ನಟಿಯನ್ನು ಬಂಧಿಸಲಾಗಿತ್ತು. ರನ್ಯಾ ಅವರ ಲ್ಯಾವೆಲ್ಲೆ ರಸ್ತೆಯಲ್ಲಿರುವ ಐಷಾರಾಮಿ ಫ್ಲಾಟ್‌ನಿಂದ 2.06 ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು 2.67 ಕೋಟಿ ರೂಪಾಯಿ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಆ ಫ್ಲಾಟ್‌ಗೆ ನಟಿ 4.5 ಲಕ್ಷ ರೂಪಾಯಿ ಬಾಡಿಗೆ ಪಾವತಿಸುತ್ತಿದ್ದರು ಎಂದು ವರದಿಯಾಗಿದೆ.
ಕಳೆದ ಸೋಮವಾರ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ ಬುಧವಾರ ಹಿರಿಯ ಐಪಿಎಸ್ ಅಧಿಕಾರಿ ಡಿ ರೂಪಾ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಡಿ ರೂಪಾ ಅವರ ವಿರುದ್ಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಲಿಖಿತ ದೂರು ನೀಡಿದ್ದ ವರ್ತಿಕಾ ಕಟಿಯಾರ್ ಅವರನ್ನು ಸೋಮವಾರ ವರ್ಗಾವಣೆ ಮಾಡಲಾಗಿತ್ತು. ಈಗ ಆಂತರಿಕ ಭದ್ರತಾ ವಿಭಾಗದ ಐಜಿಪಿಯಾಗಿದ್ದ ಡಿ ರೂಪಾ ಅವರನ್ನು ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ್ ವ್ಯವಸ್ಥಾಪಕ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ. ರೂಪಾ ಅವರು ತಮ್ಮ ಅನುಪಸ್ಥಿತಿಯಲ್ಲಿ ಇಬ್ಬರು ಕಿರಿಯ ಪೊಲೀಸ್ ಅಧಿಕಾರಿಗಳ ಮೂಲಕ ನಿಯಂತ್ರಣ ಕೊಠಡಿಯಿಂದ ಕೀ ತೆಗೆದುಕೊಂಡು ತಮ್ಮ ಕಚೇರಿ ಪ್ರವೇಶಿಸಿದ್ದಾರೆ ಎಂದು ವರ್ತಿಕಾ ಕಟಿಯಾರ್ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಲಿಖಿತ ದೂರು ನೀಡಿದ್ದರು.
ಬೆಂಗಳೂರು ಅರಮನೆ ಮೈದಾನದ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವ ಉದ್ದೇಶದ ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ಮಸೂದೆ 2025 ಸೇರಿ ಒಟ್ಟು ಐದು ಮಸೂದೆಗಳನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ಬಳ್ಳಾರಿ ಮತ್ತು ಜಯಮಹಲ್ ರಸ್ತೆ ಅಗಲೀಕರಣಕ್ಕಾಗಿ ಬೆಂಗಳೂರು ಅರಮನೆ ಮೈದಾನದ 15.39 ಎಕರೆ ಜಾಗ ಸ್ವಾಧೀನಕ್ಕೆ ಬದಲಾಗಿ ಮೈಸೂರು ರಾಜ ಮನೆತದ ವಾರಸುದಾರರಿಗೆ ರೂ.3014 ಕೋಟಿ ಟಿಡಿಆರ್ ಪರಿಹಾರ ನೀಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರದ ಈ ಮಸೂದೆ ಮಹತ್ವ ಪಡೆದುಕೊಂಡಿದೆ. ಕರ್ನಾಟಕ ಲೇವಾದೇವಿದಾರರ (ತಿದ್ದುಪಡಿ) ಮಸೂದೆ 2025,ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ 2025, ಕರ್ನಾಟಕ ಗಿರವಿದಾರರ (ತಿದ್ದುಪಡಿ) ಮಸೂದೆ 2025, ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ, ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ ತಿದ್ದುಪಡಿ ಮಸೂದೆ 2025 ಮಂಡನೆಯಾದ ಇತರ ಮಸೂದೆಗಳಾಗಿವೆ.
ರಾಜ್ಯ ಸರ್ಕಾರ SCP-TSP ಅನುದಾನ ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ ಬಿಜೆಪಿ ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು ಮತ್ತು ಇದು ದಲಿತ ವಿರೋಧಿ ಸರ್ಕಾರ ಎಂದು ಟೀಕಿಸಿದೆ. ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, “ಗ್ಯಾರಂಟಿಗಳನ್ನು ಸರಿಯಾಗಿ ಜಾರಿಗೊಳಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ನಿಗದಿಪಡಿಸಿದ ಹಣವನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ ಮತ್ತು ದುಷ್ಟ ಕಾಂಗ್ರೆಸ್ ಸರ್ಕಾರವನ್ನು ಎಚ್ಚರಿಸಬೇಕಾಗಿದೆ ಎಂದು ಹೇಳಿದ್ದಾರೆ.
ಪೀಣ್ಯ ಪ್ಲಾಂಟೇಷನ್ ಮತ್ತು ಜಾರಕಬಂಡೆ ಕಾವಲು ಪ್ರದೇಶದಲ್ಲಿ ಪ್ರಸ್ತುತ ಭಾರತೀಯ ವಾಯುಪಡೆ ವಶದಲ್ಲಿರುವ 444.12 ಎಕರೆ ಅರಣ್ಯ ಭೂಮಿಯನ್ನು ನಿಯಮಾನುಸಾರ ಮರು ವಶಕ್ಕೆ ಪಡೆಯುವಂತೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಾಯುಪಡೆಗೆ 1987ರಲ್ಲಿ 570 ಎಕರೆ ಭೂಮಿಯನ್ನು ಸರ್ಕಾರ ಮಂಜೂರು ಮಾಡಿತ್ತು. ಈ ಪೈಕಿ ಅರಣ್ಯ ಎಂದು ಅಧಿಸೂಚನೆ ಆಗಿರುವ 452 ಎಕರೆ ಮಂಜೂರಾತಿ ರದ್ದುಪಡಿಸಿ, 2017ರಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಆದರೂ ಭಾರತೀಯ ವಾಯು ಪಡೆ ಮಾ. 1ರಂದು ಅನುಮತಿ ಪಡೆಯದೆ ಅಕ್ರಮವಾಗಿ ನಿರ್ಮಾಣ ಕಾಮಗಾರಿ ಆರಂಭಿಸಿತ್ತು.