ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಕೊಲೆ ಕುರಿತ ಯುಟ್ಯೂಬರ್ ಸಮೀರ್ ಎಂಡಿ ಅವರ ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ. ವ್ಯಾಪಕ ಮೆಚ್ಚುಗೆಯೊಂದಿಗೆ ಪರ ಹಾಗೂ ವಿರೋಧ ಅಭಿಪ್ರಾಯಗಳು ಕೇಳಿಬರುತ್ತಿದ್ದು, ಚರ್ಚೆಗೆ ಗ್ರಾಸವಾಗಿದೆ.
ಊರಿಗೆ ದೊಡ್ಡವರೆ ಕೊಲೆ ಮಾಡಿದವರಾ?
ಇಲ್ಲಿಯವರೆಗೂ ಯುಟ್ಯೂಬ್ ನಲ್ಲಿ ಸುಮಾರು ಒಂದೂವರೆ ಕೋಟಿ ವೀಕ್ಷಣೆ ಕಾಣುವ ಮೂಲಕ ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ. ಫೆಬ್ರವರಿ 27 ರಂದು ಅಪ್ ಲೋಡ್ ಆಗಿರುವ 'ಊರಿಗೆ ದೊಡ್ಡವರೆ ಕೊಲೆ ಮಾಡಿದವರಾ? ಎಂಬ ಟೈಟಲ್ ನ ಈ ವಿಡಿಯೋ ಇಲ್ಲಿಯವರೆಗೂ 14,934,195 ವೀಕ್ಷಣೆ ಕಂಡಿದ್ದು, 1.1 ಮಿಲಿಯನ್ ಗೂ ಅಧಿಕ ಲೈಕ್ ಮತ್ತು ಸಹಸ್ರಾರು ಕಾಮೆಂಟ್ ಗಳು ಬರುತ್ತಿವೆ.
ಸಮೀರ್ ಗೆ ಜೀವ ಬೆದರಿಕೆ: ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪರ ಹಾಗೂ ವಿರುದ್ಧ ಅಭಿಪ್ರಾಯಗಳು ಕೇಳಿಬರುತ್ತಿವೆ. ಸಾಮಾಜಿಕ ಮಾಧ್ಯಮದಲ್ಲಿ ಸಮೀರ್ ಎಂಡಿ ಅವರ ವೈಯಕ್ತಿಕ ಮಾಹಿತಿ ಮತ್ತು ವಿಳಾಸ ಲೀಕ್ ಆದ ಮೇಲೆ ಜೀವ ಬೆದರಿಕೆ ಕರೆಗಳು ಬರುತ್ತಿರುವುದಾಗಿ ಅವರೇ ಯೂ ಟ್ಯೂಬ್ ಲೈವ್ ನಲ್ಲಿ ತಿಳಿಸಿದ್ದಾರೆ. ಕೂಡಲೇ ಅವರು ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ತಂಡದ ಸದಸ್ಯರನ್ನು ಸಂಪರ್ಕಿಸಿದ್ದು, ಅವರು ವಕೀಲರ ನೆರವು ನೀಡಿದ್ದಾರೆ. ಮತ್ತೋರ್ವ ಹೋರಾಟಗಾರ ಗಿರೀಶ್ ಮಟ್ಟನವರ್ ಮನೆಗೆ ಬಂದು ಬೆಂಬಲ ವ್ಯಕ್ತಪಡಿಸಿರುವುದಾಗಿ ಎಂದು ಅವರು ತಿಳಿಸಿದ್ದಾರೆ.
ಜನಾ ಬೆಂಬಲ, ಆಕ್ರೋಶ: ಸಾಮಾಜಿಕ ಜಾಲತಾಣಗಳಲ್ಲಿ ನಾನಾ ಸಂಘಟನೆಗಳು, ಯೂ ಟ್ಯೂಬರ್ ಗಳು ಸಮೀರ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ಹೊಗಳಿಕೆಯ ಮಾತುಗಳನ್ನಾಡುತ್ತಾ ಸೌಜನ್ಯ ಕೊಲೆಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಮತ್ತೆ ಕೆಲವರು ಈ ವಿಚಾರದಲ್ಲಿ ಸುಖಾ ಸುಮ್ಮನೆ ಧರ್ಮಸ್ಥಳ ದೇವಾಲಯವನ್ನು ಎಳೆದು ತರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಡಿಯೋ ಕುರಿತು ಎಡಿಜಿಪಿ ಎಲ್ಲಾ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೆಜಿಎಫ್ ಹಾಗೂ ರೈಲ್ವೇಸ್ ಸೇರಿದಂತೆ ಎಲ್ಲರಿಗೂ ಫ್ಯಾಕ್ಸ್ ಸಂದೇಶ ಕಳುಹಿಸಿದ್ದು, ಈ ವಿಷಯವನ್ನು ತಮ್ಮ ಘಟಕಗಳಲ್ಲಿರುವ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಮೂಲಕ ಮೇಲಾಧಿಕಾರಿಗಳ ಗಮನಕ್ಕೆ ತರುವಲ್ಲಿ ವಿಫಲರಾಗಿರುವುದಾಗಿ ತಿಳಿಸಿದ್ದಾರೆ.
ಈ ವಿಷಯ ಕುರಿತಂತೆ ಸಾರ್ವಜನಿಕರಲ್ಲಿ ಪರ, ವಿರೋಧ ಅಭಿಪ್ರಾಯಗಳು ಉಂಟಾಗಿ ಸಮಾಜದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗುವ ಸಂಭವಯಿದೆ. ಆದ್ದರಿಂದ ಘಟಕಾಧಿಕಾರಿಗಳು ಕೂಡಲೇ ಕಾರ್ಯ ಪ್ರವೃತ್ತರಾಗಿ ನಿಮ್ಮ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ಗಳನ್ನು ಚುರುಕುಗೊಳಿಸುವುದು ಹಾಗೂ ಈ ಕುರಿತಂತೆ ಕೈಗೊಂಡ ಕ್ರಮದ ಬಗ್ಗೆ ಎಡಿಜಿಪಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗಕ್ಕೆ ಮಾಹಿತಿ ನೀಡುವುದು ಎಂದು ಫ್ಯಾಕ್ಸ್ ಸಂದೇಶದಲ್ಲಿ ಬರೆಯಲಾಗಿದೆ.