ಬೆಂಗಳೂರು: ಪಂಚ ಗ್ಯಾರಂಟಿ ಯೋಜನೆಗಳಿಂದ ಮತದಾರರ ಗಮನ ಸೆಳೆದು 2023ರ ವಿಧಾನಸಭೆ ಚುನಾವಣೆಯಲ್ಲಿ ಬಹುಮತ ಗಳಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷ ನಂತರ ಸಾಕಷ್ಟು ಟೀಕೆಗಳನ್ನು ವಿರೋಧ ಪಕ್ಷಗಳಿಂದ ಮತ್ತು ಜನರಿಂದ ಎದುರಿಸುತ್ತಾ ಬಂದಿದೆ.
ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಉಳಿದ ಅಬಿವೃದ್ಧಿ ಕೆಲಸಗಳು ಸರ್ಕಾರದಲ್ಲಿ ಆಗುತ್ತಿಲ್ಲ, ಸರ್ಕಾರಕ್ಕೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳಿವೆ. ಗ್ಯಾರಂಟಿ ಯೋಜನೆಯಿಂದ ಆರ್ಥಿಕ ಹೊರೆಯಾಗುತ್ತಿದೆ ಎಂಬುದನ್ನು ಸರ್ಕಾರದ ಸಚಿವರುಗಳೇ ಒಪ್ಪಿಕೊಂಡಿದ್ದಾರೆ. ಹೀಗಿರುವಾಗ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುತ್ತಿವೆಯಾ ಎಂಬ ಮಾತುಗಳು ಸಹ ಕೇಳಿಬರುತ್ತಿದೆ.
ಗ್ಯಾರಂಟಿ ಯೋಜನೆ ಸಮರ್ಥಿಸಿಕೊಂಡ ಸಿಎಂ
ಇಂದು ವಿಧಾನಸಭೆಯಲ್ಲಿ 16ನೇ ಬಾರಿ 2025-26ನೇ ಸಾಲಿನ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ ತಮ್ಮ ಸರ್ಕಾರದ ಜನಪ್ರಿಯ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಸಮಾಜದಲ್ಲಿ ಬಡವರ ನೋವನ್ನು ನಿವಾರಿಸುವ ಉದ್ದೇಶದಿಂದ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ, ಅವು ಜನತೆಗೆ "ಉಚಿತ ಉಡುಗೊರೆಗಳಲ್ಲ" ಎಂದು ಸಮರ್ಥಿಸಿಕೊಂಡಿದ್ದಾರೆ.
ಈ ಮೂಲಕ ಗ್ಯಾರಂಟಿ ಯೋಜನೆಗಳು ಸದ್ಯಕ್ಕೆ ಸ್ಥಗಿತವಾಗುವುದಿಲ್ಲ ಎಂಬ ಸೂಚನೆಯನ್ನು ಸಹ ಸಿದ್ದರಾಮಯ್ಯ ನೀಡಿದ್ದಾರೆ.
2024-25ನೇ ಸಾಲಿಗೆ ಗ್ಯಾರಂಟಿ ಯೋಜನೆಗಳಿಗೆ 51,034 ಕೋಟಿ ರೂಪಾಯಿಗಳನ್ನು ನಿಗದಿಪಡಿಸಿದ್ದೇವೆ, ಕಳೆದ ಎರಡು ಬಜೆಟ್‌ಗಳಲ್ಲಿ ನಾವು ಖಾತರಿಗಳನ್ನು GSDP ಯ ಶೇಕಡಾ 3ರಷ್ಟು ವಿವೇಚನಾಯುಕ್ತ ಹಣಕಾಸಿನ ಕೊರತೆ ಮಾನದಂಡ ಮತ್ತು ಸಾಲ-GSDP ಅನುಪಾತವು ಶೇಕಡಾ 25ರೊಳಗೆ ನಿರ್ವಹಿಸಿದ್ದೇವೆ ಎಂಬುದನ್ನು ಗಮನಿಸಬೇಕು ಎಂದು ಸಿಎಂ ಹೇಳಿದ್ದಾರೆ.