ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದ್ದು, ಈ ನಡುವಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಎಂಬುದು ಬರಿ ಹಾಳೆಗಳ ಮೇಲಿನ ಲೆಕ್ಕವಲ್ಲ, ರಾಜ್ಯದ ಏಳುಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ ಎನ್ನುವುದು ನನ್ನ ನಂಬಿಕೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಕಳೆದ ಕೆಲವು ದಿನಗಳಿಂದ ನಮ್ಮ ಸಂಪುಟದ ಸಚಿವರು, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು, ರೈತ, ಶೋಷಿತ, ಅಲ್ಪಸಂಖ್ಯಾತ, ಹಿಂದುಳಿದ ವರ್ಗಗಳ ಸಂಘಟನೆಗಳ ಮುಖಂಡರು ಹಾಗೂ ವಿವಿಧ ಧರ್ಮಗಳ ಗುರುಗಳೊಂದಿಗೆ ಸಭೆ ನಡೆಸಿ, ಪಕ್ಷಾತೀತವಾಗಿ ಸಮಾಜದ ಎಲ್ಲಾ ಜಾತಿ, ಜನಾಂಗ, ವರ್ಗದ ಜನರ ಆಶೋತ್ತರಗಳನ್ನು ಆಲಿಸಿ, ಅವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸುವ ಪ್ರಯತ್ನವನ್ನು ಈ ಬಜೆಟ್ ಮೂಲಕ ಮಾಡಿದ್ದೇನೆ.
ಬಜೆಟ್ ಎಂಬುದು ಬರಿ ಹಾಳೆಗಳ ಮೇಲಿನ ಲೆಕ್ಕವಲ್ಲ, ರಾಜ್ಯದ ಏಳುಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ ಎನ್ನುವುದು ನನ್ನ ನಂಬಿಕೆ. ನಾಡಿನ ಪ್ರತಿಯೊಬ್ಬ ಪ್ರಜೆಯನ್ನು ಸರ್ಕಾರದ ಯಾವುದಾದರೊಂದು ಯೋಜನೆಯ ಫಲಾನುಭವಿಯನ್ನಾಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಬಜೆಟ್ ಮೂಲಕ ಮಾಡಿದ್ದೇನೆ ಎನ್ನುವ ಭರವಸೆ ನನಗಿದೆ ಎಂದು ತಿಳಿಸಿದ್ದಾರೆ,
ಇನ್ನು ಈ ಬಾರಿಯ ಸಿದ್ದರಾಮಯ್ಯ ಅವರು 16ನೇ ಬಾರಿಗೆ ರಾಜ್ಯದ ಬಜೆಟ್ ಮಂಡನೆ ಮಾಡುತ್ತಿದ್ದು, ಈ ಬಾರಿಯ ಬಜೆಟ್ ಹಂಚಿಕೆ 4 ಲಕ್ಷ ಕೋಟಿ ತಲುಪುವ ನಿರೀಕ್ಷೆಯಿದೆ. ಕಳೆದ ಬಾರಿ (2024-25) 3.71 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಿದ್ದರು. ಇದರಲ್ಲಿ ಶೇಕಡಾ 62 ಮಾತ್ರ ಬಳಸಲಾಗಿದೆ ಎಂದು ಹೇಳಲಾಗುತ್ತಿದೆ.
ಸಿದ್ದರಾಮಯ್ಯ ಅವರು ಬಳಿಗ್ಗೆ 10.15ರ ಸುಮಾರಿಗೆ ಬಜೆಟ್ ಮಂಡನೆ ಮಾಡಲಿದ್ದು, ಸಿಎಂ ಅವರ ಕಾರ್ಯಕಲಾಪಗಳಪಟ್ಟಿಯಲ್ಲಿ ಬೆಳಗ್ಗೆ 10:15ಕ್ಕೆ ಬಜೆಟ್ ಮಂಡನೆ ಉಲ್ಲೇಖವಾಗಿದೆ.
ರಾಜ್ಯ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಮಾತಿನಂದೆ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದು, ಯೋಜನೆಗಳನ್ನು ಮುಂದುವರೆಸಬೇಕಾದ ಒತ್ತಡ ಸರ್ಕಾರದ ಮೇಲಿದೆ. ಬಜೆಟ್ ನಲ್ಲಿ ಗ್ಯಾರಂಟಿ ಯೋಜನೆಗಳಿಗು ಸರ್ಕಾರ ಹಣ ನೀಡಬೇಕಿದೆ.
ಗ್ಯಾರಂಟಿ ಜೊತೆಗೆ ರಾಜ್ಯದ ಆರ್ಥಿಕತೆಗೆ ಅಭಿವೃದ್ಧಿ ಗೆ ಸಾಮಾಜಿಕ ಏಳಿಗೆಗೆ ಕೊಡುಗೆ ನೀಡುವಂತ ಯೋಜನೆಗಳನ್ನು ಬಜೆಟ್ ನಲ್ಲಿ ಮಂಡಿಸಬೇಕಿದೆ. ರಾಜ್ಯದ ಆರ್ಥಿಕ ಸ್ಥಿತಿ ಗತಿ ಸರಿಯಿಲ್ಲದ ಹೊತ್ತಲ್ಲಿ ಸರ್ಕಾರ ಎಷ್ಟು ಮೊತ್ತದ ಹೊಸ ಸಾಲವನ್ನು ಮಾಡುತ್ತದೆಯೋ ಎಂಬ ಆತಂಕವೂ ಇದೆ.
ಹೊಸ ಜಿಲ್ಲೆ, ಹೊಸ ತಾಲೂಕುಗಳ ಘೋಷಣೆಯಾದರೆ ಅವುಗಳ ಅಭಿವೃದ್ಧಿಗೂ ಹಣ ನೀಡಬೇಕಿದೆ. ಸಮಸ್ಯೆಗಳ ಕೂಪದಲ್ಲಿ ಮುಳುಗಿಹೋಗಿ ಒದ್ದಾಡುತ್ತಿರುವ ರಾಜ್ಯದ ಜನರಿಗೆ ಹೊಸ ಅಭಿವೃದ್ಧಿ ಯೋಜನೆಗಳ ಸಿಂಚನವನ್ನು ಸಿದ್ದರಾಮಯ್ಯ ಮಾಡುತ್ತಾರಾ ಎನ್ನುವ ಕುತೂಹಲ ಮೂಡಿಸಿದೆ.