ಸಿಎಂ ಸಿದ್ದರಾಮಯ್ಯ  
ರಾಜ್ಯ

ಅನುದಾನ ಘೋಷಣೆಯಾಗಿದ್ದರೂ ಬಿಡುಗಡೆಯಾಗಿಲ್ಲ: ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ

15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಅನ್ವಯ ತೆರಿಗೆ ಹಂಚಿಕೆಯಲ್ಲಿ ಅತಿ ಹೆಚ್ಚು ನಷ್ಟವನ್ನು ಅನುಭವಿಸಿದ ರಾಜ್ಯ ಕರ್ನಾಟಕ.

ಬೆಂಗಳೂರು: ಅನುದಾನ ಬಿಡುಗಡೆ ಹಾಗೂ ತೆರಿಗೆ ಹಂಚಿಕೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ವಿಧಾನಸಭೆ ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿಗಳು, ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

15ನೇ ಹಣಕಾಸು ಆಯೋಗದ ಶಿಫಾರಸ್ಸಿನ ಅನ್ವಯ ತೆರಿಗೆ ಹಂಚಿಕೆಯಲ್ಲಿ ಅತಿ ಹೆಚ್ಚು ನಷ್ಟವನ್ನು ಅನುಭವಿಸಿದ ರಾಜ್ಯ ಕರ್ನಾಟಕ. 14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ಶಿಫಾರಸ್ಸು ಮಾಡಿದ್ದ ತೆರಿಗೆ ಪಾಲು ಶೇ. 4.713 ರಿಂದ, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇ.3.647ಕ್ಕೆ ಇಳಿಕೆಯಾಯಿತು. ಇದರಿಂದಾಗಿ ರಾಜ್ಯದ ತೆರಿಗೆ ಹಂಚಿಕೆಯು ಶೇ.23ರಷ್ಟು ಕುಸಿತವಾಗಿ, ರಾಜ್ಯವು ವಾರ್ಷಿಕ ಅಂದಾಜು 12 ಸಾವಿರ ಕೋಟಿ ರೂ. ನಷ್ಟ ಅನುಭವಿಸಬೇಕಾಯಿತು.

ಅಲ್ಲದೇ, 15ನೇ ಹಣಕಾಸು ಆಯೋಗವು ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ 5,495 ಕೋಟಿ ರೂ.ಗಳ ವಿಶೇಷ ಅನುದಾನ, ಬೆಂಗಳೂರಿನಲ್ಲಿ ಕೆರೆಗಳ ಸಂರಕ್ಷಣೆಗಾಗಿ 3,000 ಕೋಟಿ ರೂ. ಮತ್ತು ಪೆರಿಫೆರಲ್ ರಿಂಗ್ ರಸ್ತೆ ಅಭಿವೃದ್ಧಿಗೆ 3,000 ಕೋಟಿ ರೂ. ಸೇರಿ ಒಟ್ಟು 11,495 ಕೋಟಿ ರೂ.ಗಳನ್ನು ತನ್ನ ವರದಿಯಲ್ಲಿ ಶಿಫಾರಸ್ಸು ಮಾಡಿತು. ಆದರೆ, ಕೇಂದ್ರ ಸರ್ಕಾರ ಈ ಅನುದಾನವನ್ನು ಬಿಡುಗಡೆ ಮಾಡಿಲ್ಲ. 2023-24ನೇ ಸಾಲಿನ ಕೇಂದ್ರ ಸರ್ಕಾರದ ಆಯವ್ಯಯ ಭಾಷಣದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಘೋಷಿಸಿತ್ತು. ಆದರೆ, ಕೇಂದ್ರ ಸರ್ಕಾರವು ಈವರೆಗೂ ಯಾವುದೇ ಅನುದಾನ ಬಿಡುಗಡೆ ಮಾಡಿರುವುದಿಲ್ಲ ಎಂದು ಹೇಳಿದರು.

ರಾಜ್ಯಗಳಿಗೆ ತೆರಿಗೆ ಹಂಚಿಕೆಯನ್ನು ಹೆಚ್ಚಿಸುವ ಬಗ್ಗೆ 16ನೇ ಹಣಕಾಸು ಆಯೋಗದ ಮುಂದೆ ರಾಜ್ಯವು ಪ್ರಬಲವಾಗಿ ತನ್ನ ವಾದವನ್ನು ಪ್ರತಿಪಾದಿಸಿದೆ. ಆರೋಗ್ಯಕರ ಮತ್ತು ಸಾಮರಸ್ಯದ ಆರ್ಥಿಕ ಒಕ್ಕೂಟ ರೂಪಿಸಲು ರಾಜ್ಯಗಳಿಗೆ ನೀಡುವ ತೆರಿಗೆ ಪಾಲನ್ನು ಸಮಾನತೆ ಮತ್ತು ದಕ್ಷತೆಯನ್ನು ಆಧರಿಸಿ ಹಂಚಿಕೆ ಮಾಡುವಂತೆ ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಿದೆ. ಬಲಿಷ್ಠ ಆರ್ಥಿಕತೆ ಹೊಂದಿರುವ ರಾಜ್ಯಗಳು ಬಡ ರಾಜ್ಯಗಳಿಗೆ ನೆರವಾಗಲು ಬದ್ಧರಾಗಿದ್ದರೂ, ಅದು ತನ್ನ ನಾಗರೀಕರ ಹಿತ ಕಾಯುವಲ್ಲಿ ಅಥವಾ ಆರ್ಥಿಕ ಪ್ರಗತಿಗೆ ಕುಂದುಂಟು ಮಾಡುವಂತಿರಬಾರದು. ಆದಾಯ-ಅಂತರ ಮತ್ತು ತಲಾ ಆದಾಯ ನಿರ್ಧರಿಸುವ ಮಾನದಂಡಗಳಲ್ಲಿಯೂ ಲೋಪಗಳಿರುವ ಹಿನ್ನೆಲೆಯಲ್ಲಿ, ಈ ಮಾನದಂಡಗಳಿಗೆ ಕಡಿಮೆ ಅಂಕ ನೀಡುವಂತೆ ಮನವಿ ಮಾಡಿದ್ದೇವೆ.

ಕರ್ನಾಟಕ ರಾಜ್ಯವು, ಸುಸ್ಥಿರ ಋಣ ನಿರ್ವಹಣೆ ಮತ್ತು ವಿತ್ತೀಯ ಶಿಸ್ತು ಪಾಲಿಸುವ ಮೂಲಕ ವಿತ್ತೀಯ ಹೊಣೆಗಾರಿಕೆಯನ್ನು ಉತ್ತಮವಾಗಿ ನಿಭಾಯಿಸಿದೆ. ನಮ್ಮ ರಾಜ್ಯದಲ್ಲಿ ವಿತ್ತೀಯ ಹೊಣೆಗಾರಿಕೆ ಅಧಿನಿಯಮವನ್ನು ಕೇಂದ್ರ ಸರ್ಕಾರವು ಅನುಷ್ಠಾನಕ್ಕೆ ತರುವ ಮುನ್ನವೇ ಜಾರಿಗೆ ತರಲಾಯಿತು. ಅಲ್ಲದೆ, ರಾಜ್ಯದ ಒಟ್ಟು ಹೊಣೆಗಾರಿಕೆಗಳಲ್ಲಿ ಆಯವ್ಯಯದ ಹೊರಗಿನ ಸಾಲಗಳನ್ನು ಪರಿಗಣಿಸಿದ ಮೊದಲ ರಾಜ್ಯ ಕರ್ನಾಟಕ. ಆದಾಗ್ಯೂ, ಜಿ.ಎಸ್.ಟಿ ಜಾರಿಯಿಂದ ರಾಜ್ಯಕ್ಕೆ ಆದ ರಾಜಸ್ವ ನಷ್ಟವನ್ನು ಸಂಪೂರ್ಣವಾಗಿ ಸರಿದೂಗಿಸಲು ಕೇಂದ್ರ ಸರ್ಕಾರ ವಿಫಲವಾದ ಕಾರಣ ಮತ್ತು ಕೇಂದ್ರ ಸರ್ಕಾರ ವಿಧಿಸುವ ಸೆಸ್‌ಗಳು ಮತ್ತು ಸರ್‌ಚಾರ್ಜ್ಗಳನ್ನು ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆ ಪಾಲಿನಲ್ಲಿ ಪರಿಗಣಿಸದಿರುವುದರಿಂದ ಹಾಗೂ 15ನೇ ಹಣಕಾಸು ಆಯೋಗದ ಶಿಫಾರಸ್ಸಿನನ್ವಯ ರಾಜ್ಯದ ತೆರಿಗೆ ಪಾಲು ಕಡಿಮೆಯಾದ ಕಾರಣ ರಾಜ್ಯವು ವಿತ್ತೀಯ ಸವಾಲುಗಳನ್ನು ಎದುರಿಸುವಂತಾಯಿತು ಎಂದು ತಿಳಿಸಿದರು.

ಕರ್ನಾಟಕದ ಆರ್ಥಿಕತೆಯಲ್ಲಿ ಸೇವಾ ವಲಯದ ಕೊಡುಗೆಯೂ ಪ್ರಮುಖವಾಗಿದ್ದು, ಒಟ್ಟು ಮೌಲ್ಯವರ್ಧನೆಯಲ್ಲಿ ಸೇವಾ ವಲಯಗಳ ಪಾಲು ಶೇ.66 ರಷ್ಟಿದೆ. 2024-25ನೇ ಸಾಲಿಗೆ ರಾಜ್ಯದಲ್ಲಿ ಸೇವಾ ವಲಯವು ಗಣನೀಯವಾಗಿ ಬೆಳವಣಿಗೆಯಾಗಿದ್ದು, ಶೇ.8.9ರಷ್ಟು ಬೆಳವಣಿಗೆ ದಾಖಲಿಸುವ ಮೂಲಕ ದೇಶದ ಆರ್ಥಿಕತೆಯಲ್ಲಿನ ಸೇವಾ ವಲಯದ ಬೆಳವಣಿಗೆ ಶೇ.7.2ಕ್ಕಿಂತ ಹೆಚ್ಚಾಗಿದೆ. ಆರ್ಥಿಕ ಬೆಳವಣಿಗೆ ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಜಿಸಲು ಸರ್ಕಾರವು ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಜೈವಿಕ ತಂತ್ರಜ್ಞಾನ ಸೇರಿದಂತೆ ಕೈಗಾರಿಕೆ ಮತ್ತು ಸೇವಾ ವಲಯದಲ್ಲಿ ಹಲವು ನೀತಿಗಳನ್ನು ಜಾರಿಗೆ ತಂದಿದೆ. ಈ ನೀತಿಗಳು ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸುವುದರ ಜೊತೆಗೆ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಗಳನ್ನು ಉತ್ತೇಜಿಸಲಿವೆ.

ಸರ್ಕಾರವು ಜಾರಿಗೆ ತಂದಿರುವ ಈ ನೀತಿಗಳಿಂದ ರಾಜ್ಯದಲ್ಲಿ ಅಂದಾಜು 1 ಲಕ್ಷ ಕೋಟಿ ರೂ. ಹೂಡಿಕೆಯನ್ನು ನಿರೀಕ್ಷಿಸಲಾಗಿದೆ. ಈ ಉದ್ದೇಶಕ್ಕೆ ಸರ್ಕಾರವು 13,500 ಕೋಟಿ ರೂ. ಸಹಾಯಧನ ಮತ್ತು ಆರ್ಥಿಕ ನೆರವು ನೀಡಲು ಸಹಮತಿಸಿದೆ. ನಮ್ಮ ಸರ್ಕಾರವು ಆರ್ಥಿಕತೆಯ ಬೆಳವಣಿಗೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು, 2024-25ರ ಡಿಸೆಂಬರ್ ಅಂತ್ಯದವರೆಗೆ 4.4 ಬಿಲಿಯನ್ ಡಾಲರ್ ಮೌಲ್ಯದ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ದೇಶದಲ್ಲಿಯೇ ಮೂರನೇ ಸ್ಥಾನದಲ್ಲಿದೆ ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT