ಕಿಚ್ಚ ಸುದೀಪ್ ನಟನೆಯ ಮಾಣಿಕ್ಯ ಚಿತ್ರದ ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಇದೀಗ ಸಿಬಿಐ ಎಂಟ್ರಿಕೊಟ್ಟಿದೆ. ಸಿಬಿಐ ಪ್ರಮುಖ ಅಂತರರಾಷ್ಟ್ರೀಯ ಚಿನ್ನದ ಕಳ್ಳಸಾಗಣೆ ಜಾಲದ ತನಿಖೆಯನ್ನು ಪ್ರಾರಂಭಿಸಿದೆ. ರನ್ಯಾ ರಾವ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) 2025ರ ಮಾರ್ಚ್ 4ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿತ್ತು. ಆಕೆ ದುಬೈನಿಂದ 14.8 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುತ್ತಿದ್ದಳು. ಈ ಚಿನ್ನದ ಮೌಲ್ಯ ಸುಮಾರು 12 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಮೂಲಗಳ ಪ್ರಕಾರ, ಈ ಕಳ್ಳಸಾಗಣೆ ಜಾಲವನ್ನು ಆಳವಾಗಿ ತನಿಖೆ ಮಾಡಲು ಮುಂಬೈ ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ಸಿಬಿಐ ತಂಡಗಳನ್ನು ನಿಯೋಜಿಸಲಾಗಿದೆ. ಈ ಸಂದರ್ಭದಲ್ಲಿ, ದೇಶೀಯ ಏಜೆಂಟರು ಮತ್ತು ಅಂತರರಾಷ್ಟ್ರೀಯ ಕಳ್ಳಸಾಗಣೆದಾರರ ನಡುವಿನ ಸಂಪರ್ಕವನ್ನು ಬಹಿರಂಗಪಡಿಸಲು ಪ್ರಯತ್ನಗಳು ನಡೆಯುತ್ತಿವೆ. ಏಕೆಂದರೆ ಈ ಜಾಲವು ಅತ್ಯಾಧುನಿಕ ವಿಧಾನಗಳನ್ನು ಬಳಸಿ ಕಾರ್ಯನಿರ್ವಹಿಸುತ್ತಿತ್ತು. ಅದರ ಮೂಲಕ ಅಪಾರ ಪ್ರಮಾಣದ ಚಿನ್ನವನ್ನು ಕಳ್ಳಸಾಗಣೆ ಮಾಡಿತ್ತಿತ್ತು.
ಕಳೆದ ಒಂದು ವರ್ಷದಲ್ಲಿ ರನ್ಯಾ ರಾವ್ ಸುಮಾರು 30 ಬಾರಿ ದುಬೈಗೆ ಹೋಗಿದ್ದರು. ಪ್ರತಿ ಬಾರಿಯೂ ಅವರು ಚಿನ್ನದ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಡಿಆರ್‌ಐ ಕಾರ್ಯಾಚರಣೆಯ ಸಮಯದಲ್ಲಿ, ಆಕೆಯಿಂದ 12.56 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇದಲ್ಲದೆ, ಅವರ ಮನೆಯಲ್ಲಿ ನಡೆದ ದಾಳಿಯ ಸಮಯದಲ್ಲಿ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಮತ್ತು 2.67 ಕೋಟಿ ರೂ. ನಗದು ಪತ್ತೆಯಾಗಿದ್ದು, ಒಟ್ಟಾರೆ ವಶಪಡಿಸಿಕೊಳ್ಳಲಾದ ಮೊತ್ತ 17.29 ಕೋಟಿ ರೂ.ಗಳಿಗೆ ತಲುಪಿದೆ.
ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮದ ಡಿಜಿಪಿ ರಾಮಚಂದ್ರ ರಾವ್ ಅವರ ಮಲಮಗಳು ರನ್ಯಾ ರಾವ್ ಬಂಧನದ ನಂತರ ಪ್ರಕರಣ ಹೆಚ್ಚು ಗಂಭೀರವಾಗಿದೆ. ಈ ಕಳ್ಳಸಾಗಣೆಯಲ್ಲಿ ಯಾವುದೇ ಕಾನೂನು ಅಧಿಕಾರಿ ಅಥವಾ ಅವರ ಕುಟುಂಬ ಭಾಗಿಯಾಗಿದೆಯೇ ಎಂಬುದರ ಬಗ್ಗೆಯೂ ತನಿಖಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ.
ತನಿಖೆಯಲ್ಲಿ ಸಿಬಿಐ ಭಾಗಿಯಾಗುವುದರಿಂದ ಈ ದಂಧೆಯಲ್ಲಿ ಭಾಗಿಯಾಗಿರುವ ಅಂತರರಾಷ್ಟ್ರೀಯ ಕಳ್ಳಸಾಗಣೆದಾರರನ್ನು ಪತ್ತೆಹಚ್ಚಲು ಅಧಿಕಾರಿಗಳಿಗೆ ಸಹಾಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ತನಿಖಾ ತಂಡಗಳನ್ನು ನಿಯೋಜಿಸಿ ಕಳ್ಳಸಾಗಣೆ ಗ್ಯಾಂಗ್‌ಗಳನ್ನು ಪತ್ತೆಹಚ್ಚಲು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಯಲು ಕಾರ್ಯತಂತ್ರಗಳನ್ನು ರೂಪಿಸಲಾಗುತ್ತಿದೆ. ಈ ಪ್ರಕರಣವನ್ನು 2020ರ ಕೇರಳ ಚಿನ್ನದ ಕಳ್ಳಸಾಗಣೆ ಪ್ರಕರಣಕ್ಕೂ ಸಂಬಂಧಿಸಲಾಗುತ್ತಿದೆ. ಇದರಲ್ಲಿ ರಾಜತಾಂತ್ರಿಕ ಮಾರ್ಗಗಳನ್ನು ದುರುಪಯೋಗಪಡಿಸಿಕೊಂಡು ಚಿನ್ನವನ್ನು ಕಳ್ಳಸಾಗಣೆ ಮಾಡಲಾಗಿದ್ದು, ಇದರಲ್ಲಿ ಅನೇಕ ಅಧಿಕಾರಿಗಳ ಶಾಮೀಲುದಾರಿಕೆ ಬೆಳಕಿಗೆ ಬಂದಿತ್ತು.