ಕೊಪ್ಪಳದಲ್ಲಿ ಇಸ್ರೇಲಿ ಮಹಿಳೆ ಮತ್ತು ಸ್ಥಳೀಯ ಮಹಿಳೆ ಮೇಲಿನ ಹಲ್ಲೆ, ಅತ್ಯಾಚಾರ ಪ್ರಕರಣ ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ರಾಜ್ಯದ ಪ್ರವಾಸಿ ತಾಣಗಳಲ್ಲಿ ಪೊಲೀಸ್ ಪಹರೆಯನ್ನು ಬಿಗಿಗೊಳಿಸಲು ತೀರ್ಮಾನಿಸಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಅನಧಿಕೃತ ಹೋಂ ಸ್ಟೇಗಳಿದ್ದರೆ ಅವುಗಳನ್ನು ಪರಿಶೀಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುವ ಅವರು ಅತ್ಯಾಚಾರ, ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ, ರಾಜ್ಯ ಸರ್ಕಾರ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಆದರೆ ಪ್ರವಾಸಿ ತಾಣಗಳಲ್ಲಿ ಇಂತಹ ಘಟನೆಗಳು ನಡೆಯಬಾರದಿತ್ತು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಹಾಸನದಲ್ಲಿ ಪಾಳು ಬಿದ್ದಿದ್ದ ಕಟ್ಟಡ ಕುಸಿದುಬಿದ್ದು ಮೂವರು ಸಾವನ್ನಪ್ಪಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ಮೂವರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಜೀರ್ ಹಾಗೂ ಅಮರನಾಥ್ ಮೃತಪಟ್ಟಿದ್ದು ಮತೋರ್ವರ ಗುರುತು ಪತ್ತೆಯಾಗಿಲ್ಲ. ಇನ್ನು ಘಟನೆಯಲ್ಲಿ ಇಬ್ಬರು ಮಹಿಳೆಯರಿಗೆ ಸಹ ಗಂಭೀರಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸತ್ಯನಾರಾಯಣ ಎಂಬುವರಿಗೆ ಸೇರಿದ್ದ ಎಂಟು ಅಂಗಡಿಗಳಿದ್ದ ಹಳೆಯ ಕಟ್ಟಡ ಇದಾಗಿದ್ದು ಇದರಲ್ಲಿ ಅಂಗಡಿಗಳಿದ್ದವು. ಹೀಗಾಗಿ ನಜೀರ್ ಹಾಗೂ ಅಮರನಾಥ್ ಹಣ್ಣು ಖರೀದಿ ಮಾಡಲು ಬಂದಿದ್ದರು. ಈ ವೇಳೆ ಕಟ್ಟಡ ಕುಸಿದುಬಿದ್ದಿದೆ. ಕಟ್ಟಡದ ಅವಶೇಷದಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬೇಲೂರು ಪೊಲೀಸರು ಹಾಗೂ ಅಗ್ನಿಶಾಮಕ ದಳ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಲಾರಿ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭವಿಸಿ ಐವರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ತಾಲೂಕಿನ ಸಿಬಾರ ಗ್ರಾಮದ ಬಳಿ ಇಂದು ಬೆಳಗ್ಗೆ ಸಂಭವಿಸಿದೆ.
ಮತ್ತೊಂದೆಡೆ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಕಾರು ಹೊತ್ತಿ ಉರಿದು ಇಬ್ಬರು ಸಜೀವ ದಹನವಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗೋಪಲ್ಲಿ ಗೇಟ್ ಬಳಿ ನಡೆದಿದೆ. ಆಂಧ್ರ ಪ್ರದೇಶ ಮೂಲದ ಧನಂಜಯ ರೆಡ್ಡಿ ಕಲಾವತಿ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಇನ್ನುಳಿದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಭೀಕರ ಅಪಘಾತದಲ್ಲಿ ಕಾರು ಬೆಂಕಿಯಿಂದ ಹೊತ್ತಿ ಉರಿದಿದ್ದರೆ, ಬಸ್ ಪಲ್ಟಿಯಾಗಿ ಉರುಳಿ ಬಿದ್ದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಖಾಸಗಿ ಬಸ್ನಲ್ಲಿ ಪ್ರಯಾಣಿಕರೆಲ್ಲರೂ ಸುರಕ್ಷಿತವಾಗಿದ್ದಾರೆ.
2023-24ನೇ ಸಾಲಿನ ರಾಷ್ಟ್ರೀಯ ಸಾರ್ವಜನಿಕ ಸಾರಿಗೆ ಪ್ರಶಸ್ತಿಗಳಲ್ಲಿ ಮೂರು ಪ್ರಶಸ್ತಿಗಳನ್ನು KSRTC ಗೆದ್ದಿದೆ. ಅಶ್ವಮೇಧ ಬ್ರ್ಯಾಂಡಿಂಗ್, ಉದ್ಯೋಗ ಕಲ್ಯಾಣ ಯೋಜನೆಗಳು ಮತ್ತು ಗಣಕೀಕರಣ ಉಪಕ್ರಮಗಳಿಗೆ ಈ ಪ್ರಶಸ್ತಿಗಳು ಲಭಿಸಿವೆ. ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 26 ವರ್ಷಗಳ ಸೇವೆ ಸಲ್ಲಿಸಿದ ಚಾಲಕ-ನಿರ್ವಾಹಕಿಯೊಬ್ಬರನ್ನು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗೌರವಿಸಲಾಯಿತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಒಕ್ಕೂಟ (ASRTU)ದ ವ್ಯಾಪ್ತಿಯಲ್ಲಿ ದೇಶದ 62 ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು ಸದಸ್ಯತ್ವವನ್ನು ಹೊಂದಿದೆ.
ಬೆಂಗಳೂರು ಸಮೀಪ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗೆ ನೆಲಮಂಗಲ–ಕುಣಿಗಲ್ ರಸ್ತೆ ಮತ್ತು ಕನಕಪುರ ರಸ್ತೆಯಲ್ಲಿ ಎರಡು ಸ್ಥಳಗಳನ್ನು ಗುರುತಿಸಿ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕಳುಹಿಸಿದ್ದೇವೆ’ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಣಿಗಲ್ ರಸ್ತೆ ಮತ್ತು ಕನಕಪುರ ರಸ್ತೆ ಎರಡೂ ಸ್ಥಳಗಳು ಬೆಂಗಳೂರು ಕೇಂದ್ರ ಸ್ಥಾನದಿಂದ 50 ಕಿ.ಮೀ.ದೂರದಲ್ಲಿವೆ. ನೆಲಮಂಗಲ–ಹಾಸನ ಹೆದ್ದಾರಿ ಜಂಕ್ಷನ್‌ನಿಂದ 10 ಕಿ.ಮೀ. ದೂರದಲ್ಲಿ ಒಂದು ಸ್ಥಳ, ಕನಕಪುರ ರಸ್ತೆ–ನೈಸ್ ರಸ್ತೆ ಜಂಕ್ಷನ್‌ನಿಂದ 10 ಕಿ.ಮೀ. ದೂರದಲ್ಲಿ ಇನ್ನೊಂದು ಸ್ಥಳ ಗುರುತಿಸಲಾಗಿದೆ ಎಂದು ಹೇಳಿದರು. ಈ ಎರಡೂ ರಸ್ತೆಗಳು ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳ ಸಮೀಪ ಇವೆ ಇಲ್ಲವೇ ಅವಕ್ಕೆ ಹೊಂದಿಕೊಂಡಿವೆ. ಅಲ್ಲದೆ, ಈಗಾಗಲೇ ಇರುವ ಮೆಟ್ರೊ ಜಾಲದ ಕೊನೆಯ ನಿಲ್ದಾಣಗಳಗೆ ಕೆಲವೇ ಕಿ.ಮೀ. ಅಂತರದಲ್ಲಿವೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ಎರಡು ಸ್ಥಳಗಳನ್ನು ಗುರುತಿಸಿದ್ದೇವೆ ಎಂದು ತಿಳಿಸಿದ್ದಾರೆ.