ಬೆಂಗಳೂರು: ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (NABARD) ಕರ್ನಾಟಕಕ್ಕೆ ತನ್ನ ಅಲ್ಪಾವಧಿಯ (ಋತುಮಾನ ಕೃಷಿ ಕಾರ್ಯಾಚರಣೆ) (ST-SAO) ಹಂಚಿಕೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕಡಿತ ಮಾಡಿದೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ನಿನ್ನೆ ವಿಧಾನ ಪರಿಷತ್ ನಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ನಬಾರ್ಡ್‌ನಿಂದ ಕರ್ನಾಟಕದ ಸಹಕಾರ ಕ್ಷೇತ್ರಕ್ಕೆ ಹಂಚಿಕೆಗಳ ಕುರಿತು ಕಾಂಗ್ರೆಸ್ ಎಂಎಲ್‌ಸಿ ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, 2024-25ನೇ ಸಾಲಿಗೆ ನಬಾರ್ಡ್ ಕರ್ನಾಟಕಕ್ಕೆ 3,236 ಕೋಟಿ ರೂಪಾಯಿ ಹಂಚಿಕೆ ಮಾಡಿದೆ. 2023-24ರಲ್ಲಿ, ಮಾಡಲಾದ ಹಂಚಿಕೆ ಹಣ 5,600 ಕೋಟಿ ರೂಪಾಯಿಗಳಷ್ಟಿತ್ತು. ಹಿಂದಿನ ಹಂಚಿಕೆಗೆ ಹೋಲಿಸಿದರೆ, 2,363 ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಿದೆ ಎಂದರು.
2024-25ರಲ್ಲಿ ಕೇವಲ 2,340 ಕೋಟಿ ರೂಪಾಯಿಗಳನ್ನು ಹಂಚಿಕೆ ಮಾಡಲಾಗಿತ್ತು. ರಾಜ್ಯ ಸರ್ಕಾರವು ಹೆಚ್ಚಿನ ಹಣವನ್ನು ಕೋರಿ ಪತ್ರ ಬರೆದ ನಂತರ, ಹೆಚ್ಚುವರಿಯಾಗಿ 896 ಕೋಟಿ ರೂಪಾಯಿಗಳನ್ನು ನೀಡಲಾಯಿತು ಎಂದು ರಾಜಣ್ಣ ಹೇಳಿದರು.
ಸಹಕಾರ ಕ್ಷೇತ್ರಕ್ಕೆ ಹಣಕಾಸು ಮಂಜೂರು ಮಾಡುವ ಪ್ರಮುಖ ಸಂಸ್ಥೆಗಳಲ್ಲಿ ನಬಾರ್ಡ್ ಕೂಡ ಒಂದು. ರಾಜ್ಯವು 9,200 ಕೋಟಿ ರೂಪಾಯಿಗಳ ಹಂಚಿಕೆಗೆ ಮನವಿ ಮಾಡಿತ್ತು. ಕೇಂದ್ರವು ನಬಾರ್ಡ್ ನಿಧಿಯನ್ನು ಕಡಿಮೆ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಬಾರ್ಡ್ ಕೃಷಿ ಸಾಲಗಳನ್ನು ಮರುಸ್ಥಾಪಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಕೋರಿದ್ದರು. ನಬಾರ್ಡ್ ಕರ್ನಾಟಕಕ್ಕೆ ಹೆಚ್ಚಿನ ಹಣವನ್ನು ಮಂಜೂರು ಮಾಡುತ್ತದೆ ಎಂಬ ಭರವಸೆ ಇದೆ ಎಂದು ಹೇಳಿದರು.