ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಚಿತ್ರನಟಿ ರನ್ಯಾ ಅವರ ಮಲತಂದೆ ಮತ್ತು ಹಿರಿಯ ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ಅವರ ಪಾತ್ರವಿದೆಯೇ ಎಂದು ತನಿಖೆ ಮಾಡಲು ರಾಜ್ಯ ಸರ್ಕಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರನ್ನು ನೇಮಿಸಿದೆ.
ರನ್ಯಾ ಅವರು ಹಿರಿಯ ಅಧಿಕಾರಿಗಳ ಶಿಷ್ಟಾಚಾರದ ಸವಲತ್ತುಗಳನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ರಾಜ್ಯ ಪೊಲೀಸರಿಂದ ಆಗಿರುವ ಆರೋಪದ ಬಗ್ಗೆ ಮಾರ್ಚ್ 10 ರಂದು ಸಿಐಡಿ ತನಿಖೆಗೆ ಆದೇಶಿಸಿದ್ದ ರಾಜ್ಯ ಸರ್ಕಾರ, ಮೊನ್ನೆ ಬುಧವಾರ ತನ್ನ ಆದೇಶವನ್ನು ಹಿಂತೆಗೆದುಕೊಂಡಿತು. ಗೌರವ್ ಗುಪ್ತಾ ತನಿಖೆ ನಡೆಸುವುದರಿಂದ ಸಿಐಡಿ ತನಿಖೆ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ. ಆದಾಗ್ಯೂ, ಸಿಐಡಿ ಅವರಿಗೆ ತನಿಖೆಯಲ್ಲಿ ಸಹಾಯ ಮಾಡುತ್ತದೆ.
ಮಾರ್ಚ್ 3 ರಂದು ದುಬೈನಿಂದ ಬೆಂಗಳೂರಿಗೆ ಆಗಮಿಸಿದ ರನ್ಯಾ ಅವರಿಂದ ಡಿಆರ್‌ಐ ಅಧಿಕಾರಿಗಳು 12.56 ಕೋಟಿ ರೂ. ಮೌಲ್ಯದ 14.2 ಕೆಜಿ ತೂಕದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದರು. ಇದಾದ ನಂತರ, ಅವರು ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ನಿವಾಸದ ಮೇಲೆ ದಾಳಿ ಮಾಡಿ ಚಿನ್ನಾಭರಣಗಳನ್ನು ವಶಪಡಿಸಿಕೊಂಡರು.
ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಮತ್ತು ಕೇಂದ್ರೀಯ ತನಿಖಾ ದಳ (CBI) ನಂತರ, ಜಾರಿ ನಿರ್ದೇಶನಾಲಯ (ED) ಸಹ ಇದೀಗ ಚಿನ್ನದ ಕಳ್ಳಸಾಗಣೆ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದೆ. ಈ ಸಂಬಂಧ ನಿನ್ನೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ರನ್ಯಾ ನಿವಾಸ ಸೇರಿದಂತೆ 8 ಕಡೆಗಳಲ್ಲಿ ದಾಳಿ ಮಾಡಿ ಶೋಧ ನಡೆಸಿದೆ.