ಬೆಂಗಳೂರು: ಲಂಚ ಕೊಡದೆ, ನ್ಯಾಯಾಲಯದಲ್ಲಿ ದಂಡ ಪಾವತಿಸಿದ್ದಕ್ಕಾಗಿ ನಗರದ ಪೊಲೀಸರು ಹಲ್ಲೆ ಮಾಡಿದ್ದಾರೆಂದು ಯುವಕನೊಬ್ಬ ಆರೋಪ ಮಾಡಿದ್ದು, ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.
ಮಾರ್ಚ್ 14ರ ರಾತ್ರಿ ವಿಜಯನಗರದ ಟೋಲ್‌ಗೇಟ್ ಬಳಿ ಪೊಲೀಸರು ‘ಡ್ರಿಂಕ್ ಆ್ಯಂಡ್ ಡ್ರೈವ್’ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಕಿರಣ್ (28) ಎಂಬುವವರ ಬೈಕ್ ತಡೆದಿರುವ ಪೊಲೀಸರು ತಪಾಸಣೆಗೆ ಮುಂದಾಗಿದ್ದಾರೆ. ಸವಾರ ಹಾಗೂ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಕೂಡ ಮದ್ಯದ ಅಮಲಿನಲ್ಲಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ದಂಡ ವಿಧಿಸಿದ್ದಾರೆ.
ನ್ಯಾಯಾಲಯಕ್ಕೆ ಹೋದರೆ 10,000 ರೂ.ದಂಡ ಕಟ್ಟಬೇಕಾಗುತ್ತದೆ, ಇಲ್ಲಿಯೇ 3,000 ರೂ. ಕೊಟ್ಟು ಹೋಗು ಎಂದು ಪೊಲೀಸರು ಹೇಳಿದ್ದರು. ಯುಪಿಐ ಮೂಲಕ ಪಾವತಿಸಲು ಮುಂದಾದಾಗ ನಗದು ರೂಪದಲ್ಲಿ ನೀಡುವಂತೆ ಹೇಳಿದರು. ಇದಕ್ಕೆ ನಿರಾಕರಿಸಲಾಗಿತ್ತು. ಬಳಿಕ ಪೊಲೀಸರು ಬೈಕ್ ನ್ನು ವಶಕ್ಕೆ ಪಡೆದು, ದಂಡದ ರಶೀದಿ ಕೊಟ್ಟರು.
ಮಾರನೆ ದಿನ ನ್ಯಾಯಾಲಯಕ್ಕೆ ತೆರಳಿ ದಂಡ ಪಾವತಿಸಲಾಗಿತ್ತು. ಬಳಿಕ, ಬೈಕ್ ಬಿಡಿಸಿಕೊಳ್ಳಲು ವಿಜಯನಗರ ಸಂಚಾರ ಪೊಲೀಸ್ ಠಾಣೆಗೆ ಹೋಗಲಾಗಿತ್ತು. ಈ ವೇಳೆ ಪೊಲೀಸರು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿದರು ಎಂದು ಯುವಕರು ಆರೋಪಿಸಿದ್ದಾರೆ.
ಪೊಲೀಸರ ಹಲ್ಲೆ ವೇಳೆ ಹಿಂಬದಿ ಸವಾರನಾಗಿದ್ದ ಈಶ್ವರ್ ಅವರು ಪ್ರಜ್ಞೆ ಕಳೆದುಕೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ.
ಈ ನಡುವೆ ಅಧಿಕಾರಿಯೊಬ್ಬರು ಆರೋಪವನ್ನು ನಿರಾಕರಿಸಿದ್ದು. ಬ್ರೀತ್‌ಅಲೈಸರ್ ಊದಲು ಸವಾರ ನಿರಾಕರಿಸಿದ್ದ. ಪರವಾನಗಿ ತೋರಿಸಲು ನಿರಾಕರಿಸಿದ್ದ. ಈ ವೇಳೆ ಮಾತಿನ ಚಕಮಕಿ ಆರಂಭವಾಗಿತ್ತು. ಬಳಿಕ ಇಬ್ಬರೂ ಯುವಕರು ತಮ್ಮ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿಕೊಂಡಿದ್ದರು. ಪರಿಸ್ಥಿತಿ ಕೈಮೀರುತ್ತಿದ್ದಂತೆಯೇ ಹೊಯ್ಸಳ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಯಿತು. ಮದ್ಯದ ಅಮಲಿನಲ್ಲಿ ವ್ಯಕ್ತಿ ಪ್ರಜ್ಞೆ ತಪ್ಪಿ ಬಿದ್ದಿದ್ದ, ಬಳಿಕ ಹೊಯ್ಸಳ ವಾಹನದಲ್ಲಿಯೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು ಎಂದು ಹೇಳಿದ್ದಾರೆ.
ನಂತರ ಬೈಕ್ ನ್ನು ವಶಪಡಿಸಿಕೊಳ್ಳಲಾಗಿತ್ತು. ನ್ಯಾಯಾಲಯದಲ್ಲಿ ದಂಡ ಪಾವತಿಸುವಂತೆ ಸೂಚಿಸಲಾಯಿತು. ಮರುದಿನ ನ್ಯಾಯಾಲಯದಲ್ಲಿ ದಂಡ ಪಾವತಿಸಿದ ನಂತರ, ಕಿರಣ್ ವಿಜಯನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಬಿಲ್ ಹಾಜರುಪಡಿಸಿದರು. ಅವರ ಬೈಕನ್ನು ಹಿಂತಿರುಗಿಸಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಗಳೆಲ್ಲವೂ ಸುಳ್ಳು. ಆಧಾರ ರಹಿತವಾಗಿವೆ. ನಮ್ಮ ಬಳಿ ಎಲ್ಲದಕ್ಕೂ ಸಾಕ್ಷ್ಯಾಧಾರಗಳಿವೆ. ಆರೋಪಗಳನ್ನು ಮಾಡುತ್ತಿರುವ ವ್ಯಕ್ತಿ ಈಶ್ವರ್ ಹಿಂಬದಿ ಸವಾರನಾಗಿದ್ದ. ಪ್ರಕರಣ ದಾಖಲಾಗಿರುವ ಸವಾರ ಕಿರಣ್ ಮೌನವಾಗಿದ್ದಾನೆ. ಸಂಚಾರ ಪೊಲೀಸರನ್ನು ಕೆಟ್ಟದಾಗಿ ತೋರಿಸಲು ಅವರು ಮಾಡಿದ ತಂತ್ರವಾಗಿದೆ. ಪೊಲೀಸರ ವಿರುದ್ಧ ಸುಳ್ಳು ಆರೋಪ ಮಾಡಿದ್ದಕ್ಕಾಗಿ ಕ್ರಿಮಿನಲ್ ಪ್ರಕರಣ ದಾಖಲಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.