ಕರ್ನಾಟಕ ವಿಧಾನಸಭೆ ಸದನದ ಕಾರ್ಯಕಲಾಪಕ್ಕೆ ಅಡ್ಡಿಪಡಿಸಿದ ವಿಪಕ್ಷ ಬಿಜೆಪಿಯ 18 ಶಾಸಕರನ್ನು ಅಮಾನತುಗೊಳಿಸಿ ಸ್ಪೀಕರ್ ಯು.ಟಿ ಖಾದರ್ ಆದೇಶ ಹೊರಡಿಸಿದ್ದಾರೆ. ಸ್ಪೀಕರ್ ಸ್ಥಾನದಲ್ಲಿ ಕುಳಿತ ಖಾದರ್ ನಿಮ್ಮನ್ನು ಕ್ಷಮಿಸಬಹುದು. ಆದರೆ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದವರನ್ನು ಕ್ಷಮಿಸಲು ಆಗಲ್ಲ ಎಂದು ಸ್ಪೀಕರ್ ವಿಧಾನಸಭೆ ಕಲಾಪದಿಂದ ಆರು ತಿಂಗಳುಗಳ ಕಾಲ 18 ಶಾಸಕರನ್ನು ಅಮಾನತುಗೊಳಿಸಿದ್ದಾರೆ. ಸ್ಪೀಕರ್ ಯುಟಿ ಖಾದರ್ ಅವರು ಸದನದಲ್ಲಿಅಮಾನತುಗೊಳಿಸಿದವರನ್ನು ಹೊರಹೋಗುವಂತೆ ಸೂಚನೆ ನೀಡಿದರು. ಅನಂತರ ಮಾರ್ಷಲ್ಸ್, ಒಬ್ಬೊಬ್ಬರನ್ನೇ ಎತ್ತಿಕೊಂಡು ಬಂದು ಹೊರಹಾಕಿದರು. ದೊಡ್ಡನಗೌಡ ಪಾಟೀಲ್, ಡಾ. ಅಶ್ವಥ್ ನಾರಾಯಣ, ಬೈರತಿ ಬಸವರಾಜ, ಡಾ. ಶೈಲೇಂದ್ರ ಬೆಲ್ದಾಳೆ, ಮುನಿರತ್ನ, ಧೀರಜ್ ಮುನಿರಾಜು, ಬಿ.ಪಿ. ಹರೀಶ್, ಡಾ. ಭರತ್ ಶೆಟ್ಟಿ, ಚಂದ್ರು ಲಮಾಣಿ, ಉಮಾನಾಥ ಕೋಟ್ಯಾನ್., ಸಿ.ಕೆ. ರಾಮಮೂರ್ತಿ. ಯಶಪಾಲ್ ಸುವರ್ಣ, ಬಿ. ಸುರೇಶ್ ಗೌಡ, ಶರಣು ಸಲಗಾರ್, ಚನ್ನಬಸಪ್ಪ, ಬಸವರಾಜ ಮತ್ತಿಮೂಡ., ಎಸ್. ಆರ್. ವಿಶ್ವನಾಥ್, ಎಂ.ಆರ್ ಪಾಟೀಲ್ ಅಮಾನತುಗೊಂಡ ಶಾಸಕರು. ಇನ್ನು ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿರುವುದರ ವಿರುದ್ಧ ಬಿಜೆಪಿ ಮತ್ತು ಮೈತ್ರಿ ಪಕ್ಷ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು.
ಇದಕ್ಕೂ ಮುನ್ನ ಇಂದು ಬೆಳಿಗ್ಗೆ, ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿರುವ ಹನಿಟ್ರ್ಯಾಪ್ ಹಾಗೂ ಮುಸ್ಲಿಂ ಮೀಸಲಾತಿ ವಿಚಾರಗಳು ವಿಧಾನಸಭೆ ಕಲಾಪದಲ್ಲಿ ಶುಕ್ರವಾರ ಹೈಡ್ರಾಮಾಕ್ಕೆ ಕಾರಣವಾಯಿತು. ಮುಸ್ಲಿಂ ಮೀಸಲಾತಿ ವಿಧೇಯಕದ ಕುರಿತು ಸರ್ಕಾರ ಚರ್ಚೆಗೆ ಮುಂದಾಯಿತು. ಇದೇ ವೇಳೆ ಬಿಜೆಪಿ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಲ್ಲದೆ, ವಿಧೇಯಕದ ಪ್ರತಿಗಳನ್ನು ಹರಿದು ಸ್ಪೀಕರ್ ಮೇಲೆ ಎಸೆಯುತ್ತಾ, 'ಹನಿಟ್ರ್ಯಾಪ್ ಸರ್ಕಾರ' ಎಂದು ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಸ್ಪೀಕರ್ ಸಹ ಶಾಸಕರು ತಾಳ್ಮೆ ವಹಿಸುವಂತೆ, ಕಲಾಪಕ್ಕೆ ಅಡ್ಡಿಪಡಿಸದಂತೆ ಮನವಿ ಮಾಡಿದರು. ಶಾಸಕರು ಪ್ರತಿಭಟನೆಯನ್ನು ಮುಂದುವರೆಸಿದ್ದವು.
ಮುಖ್ಯಮಂತ್ರಿ ಹಾಗೂ ಎಲ್ಲಾ ಶಾಸಕರಿಗೆ ವೇತನವನ್ನು ಶೇ.100ರಷ್ಟು ಹೆಚ್ಚಳ ಮಾಡುವ ವಿಧೇಯಕ ಇಂದು ರಾಜ್ಯ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಯಾವುದೇ ಚರ್ಚೆ ಇಲ್ಲದೆ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2025 ಮತ್ತು ರಾಜ್ಯ ವಿಧಾನಮಂಡಲ ಸದಸ್ಯರ ಸಂಬಳಗಳು, ಪಿಂಚಣಿಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2025 ಅಂಗೀಕಾರಗೊಂಡಿವೆ. ಇದರಿಂದ ಪ್ರತಿ ವರ್ಷ ಖಜಾನೆಗೆ ರೂ. 62 ಕೋಟಿ ಹೊರೆಯಾಗಲಿದೆ. ಇದೇ ವೇಳೆ ವಿರೋಧ ಪಕ್ಷದ ಬಿಜೆಪಿಯ ತೀವ್ರ ಪ್ರತಿಭಟನೆಯ ನಡುವೆಯೂ ವಿಧಾನಸಭೆಯು ಇಂದು ಸಾರ್ವಜನಿಕ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಶೇಕಡಾ 4ರಷ್ಟು ಮೀಸಲಾತಿ ನೀಡುವ ಮಸೂದೆಯನ್ನು ಅಂಗೀಕರಿಸಿದೆ.
ಬೆಂಗಳೂರಿನ ವೈಭವ್ ಹೋಟೆಲ್ನ ಸಪ್ಲೈಯರ್ ಅಬ್ದುಲ್ ರೆಹಮಾನ್ ಬ್ಯಾಗ್ನಲ್ಲಿ ಹ್ಯಾಂಡ್ ಗ್ರನೇಡ್ ಪತ್ತೆಯಾಗಿದ್ದು ಇದರಿಂದ ಆತಂಕಗೊಂಡ ಹೋಟೆಲ್ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಸಂಪಿಗೆಹಳ್ಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಗ್ರೆನೇಡ್ ಮತ್ತು ಸಪ್ಲೈಯರ್ ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆ ನಡೆಸಿದ್ದಾರೆ. ಬೆಂಗಳೂರಿನ ವೈಭವ್ ಹೋಟೆಲ್ ನಲ್ಲಿ ಅಬ್ದುಲ್ ರೆಹಮಾನ್ ಎಂಬಾತ ಸೆಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದನು. ತಾನು ಬೆಳ್ಳಹಳ್ಳಿಯ ನಿವಾಸಿ ಎಂದು ಅಬ್ದುಲ್ ಹೇಳಿಕೊಂಡಿದ್ದನು. ಆಧಾರ ಕಾರ್ಡ್ ವಿವರ ನೀಡಲು ವಿಳಂಬ ಮಾಡಿದ್ದರಿಂದ ಎಚ್ಚೆತ್ತ ಸಿಬ್ಬಂದಿ ಶೆಡ್ನಲ್ಲಿದ್ದ ರೆಹಮಾನ್ನ ಬ್ಯಾಗ್ ಚೆಕ್ ಮಾಡಿದಾಗ ಹ್ಯಾಂಡ್ ಗ್ರನೇಡ್ ಪತ್ತೆಯಾಗಿತ್ತು.
ಪಾಕಿಸ್ತಾನಕ್ಕೆ ರಹಸ್ಯವಾಗಿ ಭಾರತದ ಮಿಲಿಟರಿ ಮಾಹಿತಿಗಳನ್ನು ರವಾನೆ ಮಾಡುತ್ತಿದ್ದ ಆರೋಪದ ಮೇರೆಗೆ ಶಂಕಿತ ಪಾಕಿಸ್ತಾನ ಏಜೆಂಟ್ ನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ದೀಪರಾಜ್ ಚಂದ್ರ ಬಂಧಿತ ಆರೋಪಿಯಾಗಿದ್ದು ಬೆಂಗಳೂರಿನ ಬಿಇಎಲ್ನಲ್ಲಿ PIDC ಆಗಿ ಕೆಲಸ ಮಾಡುತ್ತಿದ್ದನು. ಬಿಇಎಲ್ನಲ್ಲಿನ ಮಹತ್ವದ ಮಾಹಿತಿಗಳನ್ನು ಪಾಕಿಸ್ತಾನಕ್ಕೆ ರವಾನೆ ಮಾಡುತ್ತಿದ್ದ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಗುಪ್ತಚರ ಇಲಾಖೆ, ಮಿಲಟರಿ ಇಂಟಲಿಜೆನ್ಸ್ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿವೆ. ಇದೀಗ ದೀಪ್ ರಾಜ್ ಚಂದ್ರ ನನ್ನು ಬಿಇಎಲ್ ಸಂಸ್ಥೆ ಅಮಾನತುಗೊಳಿಸಿದೆ.