ಬೆಂಗಳೂರು: ಉತ್ತರ ಕರ್ನಾಟಕ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರಣಬಿಸಿಲು ತಾಂಡವಾಡುತ್ತಿದ್ದು ಬಿಸಲಿನಿಂದಾಗಿ ಜನರು ಬೆಂಡಗಿದ್ದಾರೆ. ಇದರ ಮಧ್ಯೆ ಇಂದು ಬೆಂಗಳೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಇಂದು ಸಂಜೆ ದಿಢೀರ್ ಮಳೆಯಾಗಿದ್ದು ತಂಪೆರೆದಿದೆ. ಬೆಂಗಳೂರಿನ ಮೇಖ್ರಿ ಸರ್ಕಲ್, ಸಂಜಯನಗರ, ಭೂಪಸಂದ್ರ, ಯಲಹಂಕ ಮತ್ತು ಹೆಬ್ಬಾಳ ಸುತ್ತಮುತ್ತ ಸೇರಿದಂತೆ ಹಲವೆಡೆ ಆಲಿಕಲ್ಲು ಸಹಿತ ಧಾರಾಕಾರ ಮಳೆ ಆಗಿದೆ. ಬೆಂಗಳೂರಿನಲ್ಲಿ ಅರ್ಧ ಗಂಟೆ ಸುರಿದ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ರಣ ಬಿಸಿಲಿನ ಮಧ್ಯೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ವರ್ಷದ ಮೊದಲ ಮಳೆ ಆಗುತ್ತಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಗುಡುಗು ಸಹಿತ ಮಳೆ ಆಗಿದೆ. ಕೋಲಾರ ನಗರ, ಶ್ರೀನಿವಾಸಪುರದಲ್ಲಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲೂ ಮಳೆಯಾಗಿದೆ.
ಕಸ್ತೂರಿ ನಗರ ಕಡೆಯಿಂದ ಎಂಎಂಟಿ ಜಂಕ್ಷನ್ (KR Pura) ಕಡೆಗೆ ಹೋಗುವ ಮಾರ್ಗದಲ್ಲಿ ಎಂಎಂಟಿ ಬಸ್ ನಿಲ್ದಾಣದ ಹತ್ತಿರ ಮಳೆ ನೀರು ನಿಂತಿರುವುದರಿಂದ ವೈಟ್‌ಫೀಲ್ಡ್, ಮಹದೇವಪುರ ಮತ್ತು ಕೆಆರ್ ಪುರ ಕಡೆಗೆ ಹೋಗುವ ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿದೆ.