ಬೆಂಗಳೂರು: ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ಬೇಗೆ ದಿನೇ ದಿನೆ ಹೆಚ್ಚುತ್ತಿದೆ. ಬಿಸಿಲ ಝಳ ತಾಳಲಾರದ ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದು, ಎಳನೀರಿನ ಬೆಲೆ ಕೇಳಿ ಹೌಹಾರುವಂತಾಗಿದೆ.
ಎಳನೀರು ವರ್ಷಪೂರ್ತಿಯೂ ಬಹುತೇಕರ ನೆಚ್ಚಿನ ಪಾನೀಯ. ಅದರಲ್ಲೂ ಬಿಸಿಲಿನ ಬೇಗೆಯಿಂದ ಪಾರಾಗಲು ಜನರು ಆರೋಗ್ಯಯುತ ಎಳನೀರು ಸೇವಿಸುತ್ತಾರೆ. ಆದರೆ, ಎಳನೀರು ಪೂರೈಕೆಯಲ್ಲಿ ವಿಳಂಬದಿಂದಾಗಿ ಬೆಲೆ ಗಗನಕ್ಕೇರಿದೆ. ಅನಿವಾರ್ಯವಾಗಿ ಕೇಳಿದಷ್ಟು ಹಣ ನೀಡಿ ಸೇವಿಸುವಂತಾಗಿದೆ.
ಒಂದು ಎಳನೀರಿಗೆ 50 ರೂ. ಇದ್ದ ಬೆಲೆ ಈಗ 70 ರೂ.ಬಂದು ತಲುಪಿದ್ದು, ದಾಹ ತೀರಿಸುತ್ತಿದ್ದ ನೈಸರ್ಗಿಕ ಪಾನೀಯದ ಬೆಲೆ ಏಕದಮ್ ಏರಿರುವುದು ಜನರಿಗೆ ಹೊರೆಯಾಗುತ್ತಿದೆ. ಬಿಸಿಲಿನ ಜಳ ಹೆಚ್ಚುತ್ತಿರುವುದರಿಂದ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಕೂಡ ಹೆಚ್ಚುತ್ತಿದೆ.
25 ರಿಂದ 40 ರೂ.ಗಳ ಅಗ್ಗದ ದರದ ಎಳನೀರನ್ನು ಆಯ್ಕೆ ಮಾಡುವವರು, ಒಂದು ಬಾಯಿಗೆ ಸಿಗುವಷ್ಟು ನೀರು ಸಿಗುವುದಿಲ್ಲ. ಕಾಯಿ ಕೂಡ ಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ವಾರಗಳ ಹಿಂದೆ ಎಳನೀರಿನ ಬೆಲೆ 35-40 ರೂ ಗಳಷ್ಟಿತ್ತು. ಈಗ ಶೇ.50ರಷ್ಟು ಏರಿಕೆಯಾಗಿದೆ. ಎಳನೀರಿನಲ್ಲಿ ನೀರಿನ ಪ್ರಮಾಣ ಕೂಡ ಕಡಿಮೆಯಾಗಿದೆ ಎಂದು ಚಾಮರಾಜಪೇಟೆಯ ನಿವಾಸಿ ಪುರುಷೋತ್ತಮ ಶಿವ ಎಂಬುವವರು ಹೇಳಿದ್ದಾರೆ.
ಎಳನೀರಿನ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಮಜ್ಜಿಗೆ, ಹಣ್ಣಿನ ಜ್ಯೂಸ್, ನಿಂಬೆ ಹಣ್ಣಿನ ಜ್ಯೂಸ್ ಹಾಗೂ ಕತ್ತರಿಸಿದ ಹಣ್ಣಗಳನ್ನು ಸೇವನೆ ಮಾಡುತ್ತಿದ್ದೇನೆ. ಇವುಗಳ ಬೆಲೆ ರೂ.30 ಇದೆ ಎಂದು ಶಿವ ಎಂಬುವವರು ಹೇಳಿದ್ದಾರೆ.
ಬೇಸಿಗೆಯ ತಿಂಗಳುಗಳಲ್ಲಿ ಬೆಲೆಗಳು ಏರುವುದು, ಮಳೆಗಾಲದಲ್ಲಿ ಇಳಿಕೆಯಾಗುವುದು ಸಾಮಾನ್ಯ. ಈ ವರ್ಷ ಏಳನೀರಿಗೆ ಬೇಡಿಕೆ ಹೆಚ್ಚಾಗಿದ್ದು, ಪೂರೈಕೆ ಕಡಿಮೆಯಾಗಿದೆ ಎಂದು ಮಾರಾಟಗಾರರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ನಮಗೆ ಸಿಗುವ ಹೆಚ್ಚಿನ ಎಳನೀರು ಮದ್ದೂರು, ಮಳವಳ್ಳಿ, ರಾಮನಗರ, ಮಂಡ್ಯ, ಹಾಸನ ಮತ್ತು ತುಮಕೂರಿನಿಂದ ಬರುತ್ತವೆ. ತಮಿಳುನಾಡಿನ ಕೆಲವು ಭಾಗಗಳಿಂದಲೂ ಕಾಯಿಗಳು ಬರುತ್ತವೆ. ಆದರೆ ಬೆಂಗಳೂರಿನಲ್ಲಿ ಅವುಗಳ ಪೂರೈಕೆ ಕಡಿಮೆಯಾಗಿದೆ ಎಂದು ಚಾಮರಾಜಪೇಟೆಯ ವ್ಯಾಪಾರಿಯೊಬ್ಬರು ಹೇಳಿದ್ದಾರೆ.
ಬೆಲೆ ಏರಿಕೆಗೆ ಇಳುವರಿ ಕಡಿಮೆಯಾಗಿರುವುದೂ ಕೂಡ ಒಂದು ಕಾರಣ. ಬೆಂಗಳೂರಿನಲ್ಲಿ ಕೊರತೆಗೆ ಉತ್ತರ ಭಾರತದ ಕೆಲವು ಭಾಗಗಳಿಗೆ ಸರಬರಾಜು ಮಾಡಲಾಗುತ್ತಿರುವುದು ಕಾರಣವಾಗಿದೆ ಎಂದು ತಿಳಿಸಿದ್ದಾರೆ.
ಬೆಲೆ ಏರಿಕೆಯಿಂದಾಗಿ ಗ್ರಾಹಕರು ಈಗ ಎಳನೀರಿಗಿಂತ ಹಣ್ಣುಗಳನ್ನು ಇಷ್ಟಪಡುತ್ತಿದ್ದಾರೆ. ಕಲ್ಲಂಗಡಿ ಹಣ್ಣಿನ ಮಾರಾಟ ಹೆಚ್ಚಾಗಿದೆ ಎಂದು ಮತ್ತೊಬ್ಬ ವ್ಯಾಪಾರಿ ಹೇಳಿದ್ದಾರೆ.