ಬೆಂಗಳೂರು: ನಗರದಲ್ಲಿ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ತನ್ನ ಮಿತಿಯೊಳಗಿನ 1,287 ಉದ್ಯಾನವನಗಳಿಗೆ ಒಳಚರಂಡಿ ಸಂಸ್ಕರಣಾ ಘಟಕಗಳಿಂದ (ಎಸ್‌ಟಿಪಿ) ಸಂಸ್ಕರಿಸಿದ ನೀರು ಬಳಕೆ ಮಾಡಲು ನಿರ್ಧರಿಸಿದ್ದು, ಇದಕ್ಕಾಗಿ 300 ಟ್ರ್ಯಾಕ್ಟರ್‌ಗಳನ್ನು ನಿಯೋಜನೆ ಮಾಡಿದೆ.
ಸಮಸ್ಯೆಯನ್ನು ನಿಭಾಯಿಸಲು ಜನವರಿಯಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿತ್ು ಎಂದು ಬಿಬಿಎಂಪಿ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ಚಂದ್ರಶೇಖರ್ ಅವರು ಹೇಳಿದ್ದಾರೆ.
ಮಾರ್ಚ್ ಆರಂಭದಲ್ಲಿಯೇ ಪಾಲಿಕೆ ವ್ಯಾಪ್ತಿಯ ಉದ್ಯಾನವನಗಳ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಹೀಗಾಗಿ ಸಂಸ್ಕರಿಸಿದ ನೀರನ್ನು ಮರ-ಗಿಡಗಳಿಗೆ ಬಳಕೆ ಮಾಡಲು ಟ್ರ್ಯಾಕ್ಟರ್ ಗಳ ನಿಯೋಜಿಸಲು ನಿರ್ಧರಿಸಿದ್ದೇವೆಂದು ತಿಳಿಸಿದರು.
ಬೈರಸಂದ್ರ, ನಾಯಂಡಹಳ್ಳಿ, ಜೆಸಿ ರಸ್ತೆ, ಹೆಬ್ಬಾಳ, ನಾಗಸಂದ್ರ ಮತ್ತು ಮಹದೇವಪುರದಲ್ಲಿರುವ ಎಸ್‌ಟಿಪಿಗಳಿಂದ ಪ್ರತಿದಿನ 30-40 ಟ್ರ್ಯಾಕ್ಟರ್ ಗಳ ಮೂಲಕ (ಪ್ರತಿ ಟ್ರ್ಯಾಕ್ಟರ್ 6,000 ಲೀಟರ್ ಸಂಸ್ಕರಿಸಿದ ನೀರನ್ನು ಸಾಗಿಸಲಿದೆ) ನೀರನ್ನು ಸಂಗ್ರಹಿಸಲಾಗುತ್ತಿದ್ದು, ಈ ವ್ಯವಸ್ಥೆಯು ಮೇ ಅಂತ್ಯದವರೆಗೆ ಅಥವಾ ಮಳೆಗಾಲ ಪ್ರಾರಂಭವಾಗುವವರೆಗೆ ಮುಂದುವರಿಯಲಿದೆ ಎಂದು ಹೇಳಿದರು.
ಹೆಚ್ಚುವರಿಯಾಗಿ, ಸುಮಾರು 400 ಉದ್ಯಾನವನಗಳಲ್ಲಿ, ಯುನೈಟೆಡ್ ವೇ ಬೆಂಗಳೂರು ಎಂಬ ಸರ್ಕಾರೇತರ ಸಂಸ್ಥೆಯು 1,000 ಮಳೆನೀರು ಇಂಗು ಗುಂಡಿಗಳನ್ನು ಸ್ಥಾಪಿಸಿದೆ, ಇದು ಟ್ರ್ಯಾಕ್ಟರ್ ನೀರು ಸರಬರಾಜಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿದೆ ಎಂದು ತಿಳಿಸಿದ್ದಾರೆ.
BWSSB ಅಧಿಕಾರಿಯೊಬ್ಬರು ಮಾತನಾಡಿ, ಮಂಡಳಿಯು 1,000 ಲೀಟರ್ ಸಂಸ್ಕರಿಸಿದ ನೀರಿಗೆ 20 ರೂ. ಶುಲ್ಕ ವಿಧಿಸುತ್ತದೆ ಎಂದು ಹೇಳಿದರು.
ನೀರಿನ ಸಂರಕ್ಷಣೆಗೆ ಸಹಾಯ ಮಾಡಲು ಬೇಸಿಗೆಯಲ್ಲಿ ನಿವಾಸಿಗಳು ಸಂಸ್ಕರಿಸಿದ ನೀರನ್ನು ದ್ವಿತೀಯ ಉದ್ದೇಶಗಳಿಗಾಗಿ ಬಳಸಬೇಕೆಂದು ಮಂಡಳಿ ಮನವಿ ಮಾಡಿದೆ ಎಂದು ತಿಳಿಸಿದರು.