ಕೆಜಿಎಫ್: ರೌಡಿ ಶೀಟರ್ ಕೊಲೆ ಪ್ರಕರಣವನ್ನು ಬೇಧಿಸಿರುವ ಕೆಜಿಎಫ್ ಪೊಲೀಸರು 48 ಗಂಟೆಗಳಲ್ಲಿ ನಾಲ್ವರನ್ನು ಬಂಧಿಸಿದ್ದಾರೆ. ಕೊಲೆಯಾದ ರೌಡಿ ಶೀಟರ್ ಪ್ರಿಯತಮೆ ಸೇರಿದಂತೆ ಇಬ್ಬರು ಬಾಲಪರಾಧಿಗಳು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.
ಮಾರ್ಚ್ 23 ರಂದು ರೌಡಿ ಶೀಟರ್ ಶಿವಕುಮಾರ್ ತನ್ನ 17 ವರ್ಷದ ಪ್ರೇಯಸಿಯೊಂದಿಗೆ ಭೋಜನಕ್ಕಾಗಿ ಕಾಮಸಮುದ್ರದ ಕಡೆಗೆ ಹೋಗುತ್ತಿದ್ದ, ಆ ವೇಳೆ, ಆಂಡರ್ಸನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಕೆಜಿಎಫ್- ಕಾಮಸಮುದ್ರಂ ರಸ್ತೆಯ ವೀರಪಕ್ಷಿಪುರಂ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ವ್ಯಕ್ತಿಗಳು ಶಿವಕುಮಾರ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು, ಗಾಯಗೊಂಡ ನಂತರ ಶಿವಕುಮಾರ್ ನಾಪತ್ತೆಯಾಗಿದ್ದ. ಅದಾದ ನಂತರ ಅಪ್ರಾಪ್ತ ಬಾಲಕಿಯೇ ಠಾಣೆಗೆ ತೆರಳಿ ಪೊಲೀಸರಿಗೆ ದೂರು ನೀಡಿದ್ದಳು.
ದೂರು ದಾಖಲಿಸಿಕೊಂಡ ಪೊಲೀಸರು ಆತನನ್ನು ಪತ್ತೆ ಮಾಡಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಪೊಲೀಸರು ಡ್ರೋನ್ ಕ್ಯಾಮೆರಾ ಬಳಸಿ ಹುಡುಕಾಟ ನಡೆಸಿದಾಗ, ಘಟನಾ ಸ್ಥಳದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಕಾಮಸಮುದ್ರಂ ಅರಣ್ಯ ವಲಯದಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಆತ ಮೃತಪಟ್ಟಿರುವುದು ಕಂಡುಬಂತು ಎಂದು ಕೆಜಿಎಫ್ ಎಸ್ ಪಿ ಶಾಂತರಾಜು ಹೇಳಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.
ಮತ್ತೆ ಪೊಲೀಸರು ಅಪ್ರಾಪ್ತೆಯನ್ನು ವಿಚಾರಣೆಗೊಳಪಡಿಸಿದಾಗ ಆಕೆ ವಿರೋಧಾಭಾಸದ ಹೇಳಿಕೆ ನೀಡಿದ್ದಳು, ಇದರಿಂದ ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಬ್ಬಿಟ್ಟಿದ್ದಾಳೆ.
ರೌಡಿಶೀಟರ್ ಶಿವಕುಮಾರ್ 17 ವರ್ಷದ ಅಪ್ರಾಪ್ತ ಬಾಲಕಿಯನ್ನು ಪ್ರೀತಿಸುತ್ತಿದ್ದ, 18 ವರ್ಷದ ತುಂಬಿದ ಮೇಲೆ ಮದುವೆಯಾಗಲು ನಿರ್ಧರಿಸಿದ್ದರು. ಈ ನಡುವೆ 17 ವರ್ಷದ ಹುಡುಗಿ ತನ್ನ ಸಹಪಾಠಿಯ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಇದಾದ ನಂತರ ಇಬ್ಬರು ಮದುವೆಯಾಗಲು ನಿರ್ಧರಿಸಿದರು. ಈ ವಿಷಯ ತಿಳಿದಿದ್ದ ಶಿವಕುಮಾರ್, ತನ್ನ ಪ್ರೇಯಸಿಯೊಂದಿಗಿನ ಸ್ನೇಹ ಕಳೆದುಕೊಳ್ಳುವಂತೆ ಅಪ್ರಾಪ್ತ ಬಾಲಕನಿಗೆ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ. ಈ ಸಂಬಂಧ ಶಿವಕುಮಾರ್ ಮತ್ತು ಅಪ್ರಾಪ್ತ ವಯಸ್ಕನ ನಡುವೆ ತೀವ್ರ ವಾಗ್ವಾದ ನಡೆದಿತ್ತು ಎಂದು ಶಾಂತರಾಜು ವಿವರಿಸಿದ್ದಾರೆ.
ತಮ್ಮ ಪ್ರೇಮಕ್ಕೆ ಅಡ್ಡಿಯಾಗಿದ್ದ ಶಿವಕುಮಾರ್ ನನ್ನು ಕೊಂದು ಜೀವನ ನಡೆಸಲು ಇಬ್ಬರು ಪೂರ್ವಯೋಜನೆ ರೂಪಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅದಕ್ಕಾರಿ ಇಬ್ಬರು ಪ್ಲಾನ್ ಮಾಡಿದ್ದರು. ಶಿವಕುಮಾರ್ ನನ್ನು ಊಟಕ್ಕೆ ಕರೆದೊಯ್ದ ಪ್ರೇಯಸಿ ಈ ಬಗ್ಗೆ ಆರೋಪಿಗಳಿಗೆ ಮಾಹಿತಿ ನೀಡಿದ್ದಳು. ಬಾಲಾಪರಾಧಿ, ಆತನ ಮತ್ತೊಬ್ಬ ಸ್ನೇಹಿತ ಬಾಲಾಪರಾಧಿ ಮತ್ತು ಚಾಂಪಿಯನ್ ರೀಫ್ ನಿವಾಸಿ ದೀಪಕ್ (19) ಎಂಬಾತನ ಜೊತೆ ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಸ್ಥಳದಿಂದ ತೆರಳಿದರು.
ಬಾಲಕಿ ಸೇರಿ ಮೂವರು ಬಾಲಾಪರಾಧಿಗಳನ್ನು ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ಮತ್ತು ಮತ್ತೊಬ್ಬನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. 48 ಗಂಟೆಗಳ ಒಳಗೆ ಅಪರಾಧವನ್ನು ಭೇದಿಸಿದ ತಂಡಕ್ಕೆ ನಗದು ಬಹುಮಾನ ನೀಡಲಾಗುವುದು ಎಂದು ಶಾಂತರಾಜು ಹೇಳಿದರು.