ಸಂಗ್ರಹ ಚಿತ್ರ 
ರಾಜ್ಯ

ರಾಜ್ಯಕ್ಕೆ ವಕ್ಕರಿಸಿದೆ ಮತ್ತೊಂದು ವೈರಸ್: ಮಾರಣಾಂತಿಕ ಸೋಂಕಿಗೆ ಬೆಕ್ಕುಗಳು ಬಲಿ; ಏನಿದು FPV?

ರಾಯಚೂರಿ‌ನ ಪಶು ಪಾಲಿಕ್ಲಿನಿಕ್​ನಲ್ಲಿ ದಾಖಲಾಗಿದ್ದ ಒಟ್ಟು 67 ಬೆಕ್ಕುಗಳ ಪೈಕಿ 38 ಬೆಕ್ಕುಗಳು ಮೃತಪಟ್ಟಿವೆ.

ರಾಯಚೂರು: ಹಕ್ಕಿ ಜ್ವರ ಭೀತಿ ನಡುವಲ್ಲೇ ರಾಜ್ಯದಲ್ಲಿ ಮತ್ತೊಂದು ವೈರಸ್ ಭೀತಿ ಶುರುವಾಗಿದೆ. ಬೆಕ್ಕುಗಳಲ್ಲಿ ಮಾರಣಾಂತಿಕ ಎಫ್​ಪಿವಿ ವೈರಸ್ (Feline panleukopenia virus) ಸೋಂಕು ಹರಡುತ್ತಿದ್ದು, ಇದು ಆತಂಕವನ್ನು ಹೆಚ್ಚಿಸಿದೆ.

ರಾಯಚೂರಿ‌ನ ಪಶು ಪಾಲಿಕ್ಲಿನಿಕ್​ನಲ್ಲಿ ದಾಖಲಾಗಿದ್ದ ಒಟ್ಟು 67 ಬೆಕ್ಕುಗಳ ಪೈಕಿ 38 ಬೆಕ್ಕುಗಳು ಮೃತಪಟ್ಟಿವೆ. ರಾಯಚೂರಿನಲ್ಲಿ ಕಳೆದ ಒಂದು ತಿಂಗಳಿನಲ್ಲಿ ನೂರಕ್ಕೂ ಹೆಚ್ಚು ಬೆಕ್ಕುಗಳನ್ನು ಬಲಿಯಾಗಿದ್ದು, 150ಕ್ಕೂ ಹೆಚ್ಚು ಬೆಕ್ಕುಗಳಲ್ಲಿ ವೈರಸ್ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಈ ಸೋಂಕು ತಗುಲಿದ ಬೆಕ್ಕು ಬದುಕುಳಿಯುವುದು ತೀರಾ ಕಡಿಮೆ. ಸೋಂಕು ತಗುಲಿದ ಕೆಲವೇ ದಿನದಲ್ಲಿ ಬೆಕ್ಕುಗಳು ಸಾವನ್ನಪ್ಪುತ್ತಿವೆ. ಅಲ್ಲದೆ, ಈ ಸೋಂಕು ಒಂದು ಬೆಕ್ಕಿನಿಂದ ಮತ್ತೊಂದು ಬೆಕ್ಕಿಗೆ ವೇಗವಾಗಿ ಹರಡುತ್ತಿದ್ದು ಸಾರ್ವಜನಿಕರಿಗೆ ಈ ಸೋಂಕು ತಗುಲುವ ಆತಂಕ ಶುರುವಾಗಿದೆ.

ಈ ವೈರಸ್ ಅದೆಷ್ಟು ವೇಗವಾಗಿ ಹರಡುತ್ತಿದೆ ಅಂದರೆ ಒಂದು ಬೆಕ್ಕಿಗೆ ಸೋಂಕು ಹರಡಿದರೆ ಅದರ ಸುತ್ತಲು ಇರುವ ಬೆಕ್ಕುಗಳಿಗೂ ಕೆಲವೇ ನಿಮಿಷದಲ್ಲಿ ಸೊಂಕು ತಗಲುತ್ತಿದೆ. ಜೊತೆಗೆ ಕೆಲಸವೇ ದಿನಗಳಲ್ಲಿ ಸೋಂಕು ತಗುಲಿದ ಬೆಕ್ಕುಗಳು ಸಾವನ್ನಪ್ಪುತ್ತಿವೆ. ಈ ಸೋಂಕಿಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ರೋಗ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ನಿಡಲಾಗುತ್ತಿದೆ.

ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಹಿರಿಯ ಪಶುವೈದ್ಯಾಧಿಕಾರಿ ಡಾ. ಎಂ.ಡಿ. ಶೋಯೆಬ್, ರಾಜ್ಯದ ಹಲವು ಭಾಗಗಳಲ್ಲಿ ಬೆಕ್ಕುಗಳು FP ವೈರಸ್‌ನಿಂದ ಸೋಂಕಿಗೆ ಒಳಗಾಗಿರುವುದು ನಿಜ. ರಾಯಚೂರು ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಬೆಕ್ಕುಗಳಲ್ಲಿ FPV ಸೋಂಕು ರೋಗಲಕ್ಷಣವಾಗಿ ದೃಢಪಟ್ಟಿದೆ. ಆದರೆ ಈಗ ಸೋಂಕು ಕಡಿಮೆಯಾಗಿದೆ ಎಂದು ಹೇಳಿದ್ದಾರೆ.

ಏನಿದು ಎಫ್‌ಪಿವಿ?

ಫೆಲೈನ್ ಪ್ಯಾನ್ಲ್ಯುಕೋಪೆನಿಯಾ ವೈರಸ್ (FPV) ಪಾರ್ವೊವೈರಸ್‌ನಿಂದ ಉಂಟಾಗುವ ಬೆಕ್ಕುಗಳಲ್ಲಿ ಕಂಡುಬರುವ ವೈರಲ್ ಸೋಂಕು. ಈ ವೈರಸ್ ಮೇಲ್ಮೈಯಲ್ಲಿ ದೀರ್ಘಕಾಲದವರೆಗೆ ಬದುಕಬಲ್ಲದು. ಅಲ್ಲದೆ, ಎಫ್‌ಪಿವಿ ಹೆಚ್ಚು ಮಾರಣಾಂತಿಕವಾಗಿದೆ. ಆದರೆ. ಇದರಿಂದ ಮನುಷ್ಯರಿಗಾಗಲಿ ಅಥವಾ ನಾಯಿಗಳಿಗಾಗಲಿ ತೊಂದರೆ ಇಲ್ಲ.

ಈ ರೋಗ ಬೆಕ್ಕುಗಳಿಗೆ ಬಹುಬೇಗ ಹರಡುತ್ತದೆ. ಈ ವೈರಸ್ ಸೋಂಕಿತ ಬೆಕ್ಕಿನ ದೈಹಿಕ ತ್ಯಾಜ್ಯ, ದೇಹದ ದ್ರವ, ಹಾಸಿಗೆ ಅಥವಾ ಆಹಾರದ ಸಂಪರ್ಕದ ಮೂಲಕ ಹರಡುತ್ತದೆ. ಸಾಕುಪ್ರಾಣಿ ಮಾಲೀಕರ ಬಟ್ಟೆ ಮತ್ತು ಬೂಟುಗಳ ಮೇಲೆ ಬದುಕುವ ಈ ವೈರಸ್ ಒಂದು ಬೆಕ್ಕಿನಿಂದ ಮತ್ತೊಂದು ಬೆಕ್ಕಿಗೆ ವೇಗವಾಗಿ ಹರಡುತ್ತದೆ. ಇದರಿಂದ ಮನುಷ್ಯರಿಗೆ ಯಾವುದೇ ತೊಂದರೆ ಇಲ್ಲ ಎಂದು ತಿಳಿದುಬಂದಿದೆ.

ವೈರಸ್ ಲಕ್ಷಣಗಳೇನು?

ಬೆಕ್ಕಿನಲ್ಲಿ ಹೆಚ್ಚಿನ ಜ್ವರ, ವಾಂತಿ, ಅತಿಸಾರ (ಹೆಚ್ಚಾಗಿ ರಕ್ತಸಿಕ್ತವಾಗಿ), ಹಸಿವಿನ ಕೊರತೆ, ಅನೋರೆಕ್ಸಿಯಾ ಮತ್ತು ನಿರ್ಜಲೀಕರಣದ ಲಕ್ಷಣಗಳು ಕಾಣಿಸುತ್ತಿದ್ದು, ಕೊನೆಗೆ ಸಾವನ್ನಪ್ಪುತ್ತಿವೆ. ಇದು ಬೆಕ್ಕು ಹೊರತುಪಡಿಸಿ ಇತರ ಪ್ರಾಣಿಗಳಿಗೆ ಅಥವಾ ಮನುಷ್ಯರಿಗೆ ಹರಡುವ ರೋಗವಲ್ಲ. ಆದರೂ ಮುನ್ನೆಚ್ಚರಿಕೆ ವಹಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಎಫ್‌ಪಿವಿ ಬೆಕ್ಕಿನ ಬಿಳಿ ರಕ್ತ ಕಣಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಹಾನಿ ಮಾಡುತ್ತದೆ. ಅಲ್ಲದೆ, ಜಠರಗರುಳಿನ ಒಳಪದರದ ಮೇಲೆ ದಾಳಿ ಮಾಡುತ್ತದೆ. ಆಂತರಿಕ ಉರಿಯೂತ, ನೋವು ಮತ್ತು ರಕ್ತಸ್ರಾವವನ್ನು ಉಂಟುಮಾಡುತ್ತದೆ. ಗರ್ಭಿಣಿ ಬೆಕ್ಕುಗಳ ಮರಿಗಳಿಗೂ ಈ ವೈರಸ್ ಹರಡಬಹುದು. ಆದ್ದರಿಂದ ಗರ್ಭಿಣಿ ಬೆಕ್ಕುಗಳಿಗೆ ತಮ್ಮ ಸಂತತಿಗೆ FPV ಹರಡುವುದನ್ನು ತಡೆಯಲು ಮಾಲೀಕರು ನಿಯಮಿತವಾಗಿ ಲಸಿಕೆ ಹಾಕಿಸಬೇಕೆಂದು ಶಿಫಾರಸು ಮಾಡಲಾಗಿದೆ. ನಿಯಮಿತ ಲಸಿಕೆಯೊಂದಿಗೆ ಈ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟಬಹುದು.

ರೋಗ ಲಕ್ಷಣ ಪತ್ತೆ ಹೇಗೆ?

ಬೆಕ್ಕುಗಳಿಗೆ ಸೋಂಕು ತಗುಲಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಲು ಬೆಕ್ಕುಗಳ ನಡವಳಿಕೆ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯನ್ನು ಗಮನಿಸಬೇಕಾಗುತ್ತದೆ. ಬೆಕ್ಕುಗಳಿಗೆ ಟ್ರೈಕ್ಯಾಟ್, ಫೆಲಿಜೆನ್ ಅಥವಾ ಫೆಲೋಸೆಲ್ ಲಸಿಕೆಯನ್ನು ನೀಡಬೇಕು. ಆದರೆ, ಸಾಕುಪ್ರಾಣಿಗಳ ಮಾಲೀಕರು ಲಸಿಕೆಯನ್ನು ಸ್ವತಃ ನೀಡಬಾರದು. ಬದಲಿಗೆ ಆಯಾ ಪ್ರದೇಶಗಳ ಅರ್ಹ ಪಶುವೈದ್ಯರ ಸಹಾಯವನ್ನು ಪಡೆಯಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಬ್ರಾಹ್ಮಣನೊಬ್ಬ ತನ್ನ ಮಗಳನ್ನು ನನ್ನ ಮಗನಿಗೆ ದಾನ ಮಾಡುವವರೆಗೆ ಮೀಸಲಾತಿ ಮುಂದುವರೆಯಲಿ: IAS ಅಧಿಕಾರಿ ವಿವಾದಾತ್ಮಕ ಹೇಳಿಕೆ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಫೈಟ್: ಮಲ್ಲಿಕಾರ್ಜುನ ಖರ್ಗೆಗೆ ಪ್ರಾಫಿಟ್; CM ಹುದ್ದೆ ನೀಡುವಂತೆ ಸೋನಿಯಾಗೆ ದಲಿತ ನಾಯಕರ ಪತ್ರ!

SCROLL FOR NEXT