ಬಿಜೆಪಿಯಿಂದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ. ಶಿಸ್ತು ಸಮಿತಿ ನೀಡಿದ್ದ ಶೋಕಾಸ್ ನೋಟಿಸ್‌ಗೆ ಸರಿಯಾಗಿ ಉತ್ತರ ನೀಡದ ಕಾರಣ ಬಿಜೆಪಿ ಹೈಕಮಾಂಡ್ ಈ ನಿರ್ಧಾರವನ್ನು ಕೈಗೊಂಡಿದೆ.ತಕ್ಷಣವೇ ಈ ನಿರ್ಧಾರ ಜಾರಿಗೆ ಬಂದಿದೆ. ಬಿಜೆಪಿ ಶಿಸ್ತು ಸಮಿತಿ ಎರಡು ಬಾರಿ ನೋಟಿಸ್ ನೀಡಿತ್ತು. ಫೆ.10 ರಂದು ಶೋಕಾಸ್ ನೋಟಿಸ್‌ಗೆ ಯತ್ನಾಳ್ ಉತ್ತರ ನೀಡಿದ್ದರು. ಯತ್ನಾಳ್ ಉತ್ತರ, ಸ್ಪಷ್ಟನೆ ಒಪ್ಪದ ಕೇಂದ್ರ ಶಿಸ್ತು ಸಮಿತಿ ಇಂದು ಈ ನಿರ್ಧಾರ ಕೈಗೊಂಡಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧದ ಶಿಸ್ತುಕ್ರಮ ವರಿಷ್ಠರು ಸುದೀರ್ಘ ಅವಧಿಯಿಂದ ಸ್ಥಿತಿ-ಗತಿಗಳನ್ನು ಅವಲೋಕಿಸಿ ಅನಿವಾರ್ಯವಾಗಿ ತೆಗೆದುಕೊಂಡಿರುವ ಕ್ರಮವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಮಾ.25 ರಂದು ಎಸ್‌ಟಿ ಸೋಮಶೇಖರ್, ಶಿವರಾಮ್ ಹೆಬ್ಬಾರ್, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿಪಿ ಹರೀಶ್, ರೇಣುಕಾಚಾರ್ಯಗೆ ಶೋಕಾಸ್ ನೋಟಿಸ್ ನೀಡಿತ್ತು. ಹೈಕಮಾಂಡ್ ನಿರ್ಧಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯತ್ನಾಳ್ 'ಸತ್ಯವಂತರಿಗಿದು ಕಾಲವಲ್ಲ.. ಎಂಬ ಪುರಂದರ ದಾಸರ ಸಾಲುಗಳನ್ನು ಬರೆದು ತಪ್ಪ್ನನ್ನು .. ತಪ್ಪು ಎಂದು ತೋರಿಸಿದ್ದಕ್ಕೆ ' ನನಗೆ ಸಿಕ್ಕ ಪ್ರತಿಫಲವಿದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗ್ರೇಟರ್ ಬೆಂಗಳೂರು ಆಡಳಿತ ಮಸೂದೆಯನ್ನು ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದ್ದಾರೆ. ಸೂಕ್ತ ಸ್ಪಷ್ಟೀಕರಣಗಳೊಂದಿಗೆ ಮರು ಸಲ್ಲಿಸುವಂತೆ ರಾಜ್ಯಪಾಲರು ಸಲಹೆ ನೀಡಿದ್ದಾರೆ. ಇತ್ತೀಚಿನ ಅಧಿವೇಶನದಲ್ಲಿ ಈ ಮಸೂದೆಯನ್ನು ಎರಡೂ ಸದನಗಳಲ್ಲಿ ಅಂಗೀಕರಿಸಲಾಗಿದೆ. ಮುಂದಿನ ಪ್ರಕ್ರಿಯೆಗಳಿಗಿಂತ ಮೊದಲು ವಿವಿಧ ಪ್ರತಿನಿಧಿಗಳು ನೀಡಿದ ಜ್ಞಾಪಕ ಪತ್ರಗಳಲ್ಲಿ ವ್ಯಕ್ತವಾಗಿರುವ ಕಳವಳಗಳಿಗೆ ಸ್ಪಷ್ಟೀಕರಣ ನೀಡಬೇಕೆಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ. ಇದು ಕಾನೂನು ಮತ್ತು ಸಾರ್ವಜನಿಕ ಹಿತಾಸಕ್ತಿ ಸಮಸ್ಯೆಗಳನ್ನು ಒಳಗೊಂಡಿದೆ ಎಂದು ಗವರ್ನರ್ ತಿಳಿಸಿದ್ದಾರೆ.
BESCOM ಮತ್ತು ಇತರ ವಿದ್ಯುತ್ ಸರಬರಾಜು ಕಂಪನಿಗಳ ಸ್ಮಾರ್ಟ್ ಮೀಟರ್ ಟೆಂಡರ್ ಪ್ರಕ್ರಿಯೆಯಲ್ಲಿ 15,568 ಕೋಟಿ ರೂ.ಗಳ ಅಕ್ರಮ ನಡೆದಿದೆ ಎಂದು ಬಿಜೆಪಿ ನಾಯಕ ಸಿ.ಎನ್ ಅಶ್ವತ್ಥ ನಾರಾಯಣ್ ಆರೋಪಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಟೆಂಡರ್ ಪ್ರಕ್ರಿಯೆಯಲ್ಲಿ "ಪಕ್ಷಪಾತ ಮತ್ತು ಅಕ್ರಮಗಳನ್ನು" ಹೊಂದಿದೆ ಎಂದು ಆರೋಪಿಸಿರುವ ಅಶ್ವತ್ಥ್ ನಾರಾಯಣ, ಈ ಅಕ್ರಮದ ಪ್ರಮಾಣ ಇನ್ನೂ ದೊಡ್ಡದಾಗಿದೆ ಎಂದು ಹೇಳಿದ್ದಾರೆ. ಮತ್ತು ESCOMಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ (KERC) ನಿಯಮಗಳನ್ನು ಪಾಲಿಸಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಹೊರ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಸ್ಮಾರ್ಟ್ ಮೀಟರ್ ದುಬಾರಿ ಎಂಬ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಇಂಧನ ಸಚಿವ ಕೆ.ಜೆ ಜಾರ್ಜ್, ಬೇರೆ ರಾಜ್ಯಗಳು ಬಲ್ಕ್ ಆಗಿ ಮೀಟರ್ ಖರೀದಿಸುತ್ತವೆ. ಆದ ಕಾರಣ ಸ್ಮಾರ್ಟ್ ಮೀಟರ್ ದರ ಕಡಿಮೆ ಇದೆ. ಕೇಂದ್ರದ ಸಬ್ಸಿಡಿ ತೆಗೆದುಕೊಂಡಲ್ಲಿ 900 ರೂ ಕಡಿಮೆ ಆಗಲಿದೆ, ನಾವು ಕೇಂದ್ರ ಸರ್ಕಾರದ ಸ್ಕೀಂ ಪಡೆಯುತ್ತಿಲ್ಲ ಹೀಗಾಗಿ ಮೀಟರ್ ದರ ಹೆಚ್ಚಿದೆ, ಹೊಸ ಕನೆಕ್ಷನ್ ಗೆ ಮಾತ್ರ ಮೀಟರ್ ಪಡೆಯುತ್ತಿರುವುದರಿಂದ ದರ ಹೆಚ್ಚಿದೆ ಎಂದು ಜಾರ್ಜ್ ಹೇಳಿದ್ದಾರೆ.
ಆಹಾರ ಕಲಬೆರಕೆಯ ಆರೋಪ ಸಾಕಷ್ಟು ಕೇಳಿಬರುತ್ತಿರುವ ಹೊತ್ತಿನಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಐಸ್ ಕ್ರೀಂ ಮತ್ತು ತಂಪು ಪಾನೀಯ ಘಟಕಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ನಗರದ ಹಾಗೂ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಮಾಡಲಾಗಿದ್ದು, ಆಹಾರ ಇಲಾಖೆ ಅಧಿಕಾರಿಗಳು ಪನ್ನೀರ್ ಸೇರಿ ಇತರೆ ಆಹಾರ ಉತ್ಪನ್ನಗಳ ಸ್ಯಾಂಪಲ್ ಪಡೆದು ಟೆಸ್ಟ್ಗೆ ಒಳಪಡಿಸಲಾಗಿತ್ತು. ಈಗ ಅದರ ವರದಿ ಬಂದಿದ್ದು, ಪನ್ನೀರ್ನಲ್ಲಿ ಬ್ಯಾಕ್ಟೀರಿಯಾ ಅಂಶಗಳು ಪತ್ತೆಯಾಗಿರುವುದು ದೃಢವಾಗಿದೆ. ಇತ್ತೀಚೆಗೆ ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಬಳಸಿ ಇಡ್ಲಿ ಹಿಟ್ಟು ಬೇಯಿಸುವುದು, ಹಸಿರು ಬಣ್ಣ ಹಾಕಿಟ್ಟ ಬಟಾಣಿ ಕಾಳುಗಳು ತಿನ್ನಲು ಅಸುರಕ್ಷಿತ ಎಂದು ಆರೋಗ್ಯ ಇಲಾಖೆ ವರದಿ ನೀಡಿತ್ತು.
ಏಪ್ರಿಲ್ 1ರಿಂದ ಕರ್ನಾಟಕದಾದ್ಯಂತ ಟೋಲ್ ಸುಂಕ ಶೇ3 ರಿಂದ 5ರಷ್ಟು ಹೆಚ್ಚಾಗಲಿವೆ. ಈ ನಿಟ್ಟಿನಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಡಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ. ಬೆಲೆ ಏರಿಕೆ, ಹಣದುಬ್ಬರಕ್ಕೆ ಅನುಗುಣವಾಗಿ ವಾರ್ಷಿಕವಾಗಿ ಮಾಡುವ ದರ ಪರಿಷ್ಕರಣೆ ಪ್ರಕ್ರಿಯೆಯ ಭಾಗವಾಗಿ ಈಗ ಟೋಲ್ ಸುಂಕ ಹೆಚ್ಚಳಕ್ಕೆ ಎನ್ಎಚ್ಎಐ ಮುಂದಾಗಿದೆ. ರಾಜ್ಯದ 66 ಟೋಲ್ ಪ್ಲಾಜಾಗಳಲ್ಲಿ ಹೆಚ್ಚಿನ ಟೋಲ್ಗಳಿಗೆ ಪರಿಷ್ಕೃತ ದರಗಳು ಅನ್ವಯವಾಗಲಿವೆ.