ಡಿ.ಕೆ.ಶಿವಕುಮಾರ್ 
ರಾಜ್ಯ

ಚಾಮರಾಜನಗರ ಆಕ್ಸಿಜನ್ ದುರಂತ: ನ್ಯಾ. ಬಿ.ಎ ಪಾಟೀಲ್ ವರದಿ ತಿರಸ್ಕಾರ- ಡಿ.ಕೆ ಶಿವಕುಮಾರ್

ಚಾಮರಾಜನಗರ ದುರಂತ ನಡೆದ ವೇಳೆ ನಾನು ಹಾಗೂ ಸಿದ್ದರಾಮಯ್ಯ ಅವರು ಸ್ಥಳಕ್ಕೆ ತೆರಳಿ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದ್ದೆವು. ಮೃತರ ಕುಟುಂಬ ವರ್ಗದವರನ್ನು ಸಹ ಭೇಟಿ ಮಾಡಲಾಗಿತ್ತು.

ಬೆಂಗಳೂರು: ಕೋವಿಡ್ ಸಮಯದಲ್ಲಿ ನಡೆದಿದ್ದ ಚಾಮರಾಜನಗರ ಆಕ್ಸಿಜನ್ ದುರಂತದ ಬಗ್ಗೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಎ.ಪಾಟೀಲ್‌ ಏಕಸದಸ್ಯ ನ್ಯಾಯಾಂಗ ಆಯೋಗ ನೀಡಿದ್ದ ವರದಿಯನ್ನು ತಿರಸ್ಕರಿಸಿ ನ್ಯಾ.ಕುನ್ಹಾ ಅವರಿಗೆ ಮರು ತನಿಖೆಯ ಜವಾಬ್ದಾರಿ ನೀಡಲಾಗಿದೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ಸಚಿವ ಸಂಪುಟ ಉಪ ಸಮಿತಿ ಸಭೆ ನಂತರ ಮಾಧ್ಯಮದವರನ್ನು ಉದ್ದೇಶಿಸಿ ವಿಧಾನಸೌಧದಲ್ಲಿ ಬುಧವಾರ ಮಾತನಾಡಿದ ಅವರು, "ಚಾಮರಾಜನಗರ ದುರಂತ ನಡೆದ ವೇಳೆ ನಾನು ಹಾಗೂ ಸಿದ್ದರಾಮಯ್ಯ ಅವರು ಸ್ಥಳಕ್ಕೆ ತೆರಳಿ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದ್ದೆವು. ಮೃತರ ಕುಟುಂಬ ವರ್ಗದವರನ್ನು ಸಹ ಭೇಟಿ ಮಾಡಲಾಗಿತ್ತು. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಅವರು ಯಾರ್ಯಾರ ತಪ್ಪಿದೆ ಎಂದು ಹೇಳಿದ್ದರು" ಎಂದರು.

ವರದಿಯಲ್ಲಿ ಕುನ್ಹಾ ಅವರು ಹೆಸರಿಸಿರುವ ಹಿಂದಿನ ಆರೋಗ್ಯ ಸಚಿವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆಯೇ ಎಂದು ಕೇಳಿದಾಗ, "ಕೋವಿಡ್ ಅಕ್ರಮಗಳ ಬಗ್ಗೆ ಮೈಕೆಲ್ ಕುನ್ಹಾ ಅವರು ಅತ್ಯಂತ ಸಮಗ್ರವಾಗಿ ವರದಿಯನ್ನು ನೀಡಿದ್ದಾರೆ. ಅದನ್ನು ಕೂಲಂಕುಷವಾಗಿ ಅಧ್ಯಯನ ಮಾಡಬೇಕಾಗುತ್ತದೆ. ಇದರಲ್ಲಿ ಕಾನೂನು ಸಂಬಂಧಿತ, ಕ್ರಿಮಿನಲ್ ಸಂಬಂಧಿತ ವಿಚಾರಗಳನ್ನು ಗಮನಿಸಲು ಸಹಾಯ ತೆಗೆದುಕೊಳ್ಳಲಾಗುತ್ತಿದೆ" ಎಂದರು.

ಸುಮಾರು 29 ಜನ ಅಧಿಕಾರಿಗಳು ಸಮಿತಿ ನೀಡಿರುವ ನೋಟಿಸ್ ಗೆ ಉತ್ತರ ನೀಡಿಲ್ಲ. ಅವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು. ಕುನ್ಹಾ ಅವರು ವರದಿಯಲ್ಲಿ ಅನೇಕ ರಾಜಕಾರಣಿಗಳ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಇದರ ಬಗ್ಗೆ ನಮಗೂ ಅರಿವಿದೆ. ಸೂಕ್ತಕಾಲದಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಪ್ರತಿ 15 ದಿನಗಳಿಗೊಮ್ಮೆ ಉಪಸಮಿತಿ ಸಭೆ ನಡೆಸಬೇಕು ಎನ್ನುವ ತೀರ್ಮಾನಕ್ಕೆ ಬರಲಾಗಿದೆ. ಅಧಿಕಾರಿಗಳ ಕೊರತೆ ಇರುವ ಕಾರಣಕ್ಕೆ ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಸಮಿತಿಗೆ ನೇಮಕ ಮಾಡಿ ಅವರಿಗೂ ಕೆಲವು ಜವಾಬ್ದಾರಿಗಳನ್ನು ನೀಡಬೇಕು ಎಂದು ತೀರ್ಮಾನ ಮಾಡಲಾಗಿದೆ" ಎಂದರು.

ಆರೋಗ್ಯ ಇಲಾಖೆ ನಡೆಸುವುದು ಪ್ರತಿ ದಿನವೂ ಸವಾಲಿನಿಂದ ಕೂಡಿರುವ ಕೆಲಸ. ಇಲಾಖೆ ಅಡಿಯಲ್ಲಿ 70 ಮೆಡಿಕಲ್ ಕಾಲೇಜುಗಳು ಬರುತ್ತವೆ. ದಿನವು ಹೊಸ ಸವಾಲುಗಳು ಎದುರಾಗುತ್ತವೆ‌. ಆದ ಕಾರಣ ಒಂದಷ್ಟು ಜವಾಬ್ದಾರಿಗಳನ್ನು ಹಿರಿಯ ಅಧಿಕಾರಿಗಳಿಗೆ ನೀಡಲಾಗುವುದು" ಎಂದು ಹೇಳಿದರು.

ಕೋವಿಡ್ ಸಮಯದಲ್ಲಿ ಖರೀದಿ ಮಾಡಿದ ಅನೇಕ ವೈದ್ಯಕೀಯ ಉಪಕರಣಗಳು ಕೆಲಸ ಮಾಡುತ್ತಿಲ್ಲ. ಅಲ್ಲದೇ ದಿನಾಂಕ ಮುಗಿದಿರುವ ಅನೇಕ ಔಷಧಿಗಳ ಬಗ್ಗೆ ಕೇಳಿದಾಗ, "ನ್ಯಾ‌.ಕುನ್ಹಾ ಅವರ ವರದಿಯಲ್ಲಿ ಅನೇಕ ವಿಚಾರಗಳಿವೆ. ಆದರೂ ಸಮಿತಿಯವರು ಇದೆಲ್ಲವನ್ನು ನೇರವಾಗಿ ನೋಡಿ ಪ್ರಮಾಣಿಸಬೇಕು, ನಮಗೂ ಇದು ಅರ್ಥವಾಗಬೇಕು. ಇಡೀ ಸಮಿತಿಯ ಸದಸ್ಯರು ಔಷಧಿಗಳು, ಉಪಕರಣಗಳನ್ನು ವೀಕ್ಷಣೆ ಮಾಡುತ್ತಾರೆ. ಅನೇಕ ಕಡೆ ವೈದ್ಯಕೀಯ ಉಪಕರಣಗಳನ್ನು ಅಳವಡಿಸಿಲ್ಲ ಎಂದು ಹೇಳಲಾಗಿದೆ. ಹಾಗಾದರೆ ಅದು ಏನಾಗಿದೆ ಎಂದು ಪರಿಶೀಲನೆ ಮಾಡುತ್ತೇವೆ. ಒಂದಷ್ಟನ್ನು ಉಗ್ರಾಣಗಳಿಗೆ, ಜಿಲ್ಲಾ ಕೇಂದ್ರಗಳಿಗೆ ಕಳಿಸಲಾಗಿದೆ ಎನ್ನುವ ಮಾಹಿತಿಯಿದೆ. ಅದಕ್ಕೆ ಸಮಿತಿಯವರು ಜಿಲ್ಲಾ ಕೇಂದ್ರಗಳ ಆಸ್ಪತ್ರೆಗಳಲ್ಲಿ, ಬೆಂಗಳೂರಿನಲ್ಲೂ ಪರಿಶೀಲನೆ ನಡೆಸುತ್ತದೆ" ಎಂದರು.

ಕುಮಾರಸ್ವಾಮಿ ಹಾಗೂ ದೇವೇಗೌಡರನ್ನು ಸತೀಶ್ ಜಾರಕಿಹೊಳಿ ಅವರು ಭೇಟಿ ಮಾಡಿರುವ ಬಗ್ಗೆ ಕೇಳಿದಾಗ, "ನಾನು ಕಾಂಗ್ರೆಸ್ ಪಕ್ಷದ ವಕ್ತಾರ. ಕುಮಾರಸ್ವಾಮಿ ಹಾಗೂ ಸತೀಶ್ ಜಾರಕಿಹೊಳಿ ಅವರ ಬಳಿ ಈ ಬಗ್ಗೆ ಚರ್ಚೆ ಮಾಡಿದರೆ ಒಳ್ಳೆಯದು. ದೇಶ, ರಾಜ್ಯ, ವೈಯಕ್ತಿಕ ವಿಚಾರಗಳಿಗೆ ಭೇಟಿಯಾಗಿದ್ದರೋ ತಿಳಿದಿಲ್ಲ. ಇದರ ಬಗ್ಗೆ ಅವರನ್ನೇ ಕೇಳಿದರೆ ಬಹಳ ಉತ್ತಮ" ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಹೈಕಮಾಂಡ್ ತೀರ್ಮಾನಿಸಬೇಕು- ಸಿಎಂ ಸಿದ್ದರಾಮಯ್ಯ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

SCROLL FOR NEXT