ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿಹೋಗಿರುವ ಗ್ರಾಹಕರಿಗೆ ಸಿದ್ದರಾಮಯ್ಯ ಸರ್ಕಾರ ಇಂದು ಮತ್ತೆರೆಡು ಬಿಗ್ ಶಾಕ್ ನೀಡಿದೆ. ನಂದಿನಿ ಹಾಲಿನ ಜೊತೆಗೆ ಕರೆಂಟ್ ದರವನ್ನು ಹೆಚ್ಚಿಸಿದೆ. ನಂದಿನಿ ಪ್ಯಾಕೆಟ್ ಹಾಲಿನ ದರ ಪ್ರತಿಲೀಟರ್ ಗೆ 4 ರೂಪಾಯಿ ಹೆಚ್ಚಳ ಮಾಡಿದೆ. ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 4 ರೂಪಾಯಿ ಹೆಚ್ಚಿಸಿ ರಾಜ್ಯ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ. ಪರಿಷ್ಕೃತ ದರ ಏಪ್ರಿಲ್ 1ರಿಂದ ಅನ್ವಯವಾಗಿದೆ. ಟೋನ್ಡ್ ಹಾಲು ಒಂದು ಲೀಟರ್ 45 ರೂಪಾಯಿದ್ದು ಬೆಲೆ ಏರಿಕೆ ಬಳಿಕ 49 ರೂಪಾಯಿ ಆಗಲಿದೆ. ನೀಲಿ ಪ್ಯಾಕೆಟ್ ಹಾಲು 44 ರೂ.ದಿಂದ 48 ರೂ. ಏರಿಕೆ ಆರೆಂಜ್ ಪ್ಯಾಕೆಟ್ ಹಾಲು 54 ರೂಪಾಯಿಂದ 58 ರೂ. ಸಮೃದ್ಧಿ ಹಾಲಿನ ಪ್ಯಾಕೆಟ್: 56 ರೂ. ನಿಂದ 60 ರೂಪಾಯಿಗೆ ಏರಿಕೆಯಾಗಿದ್ದು ಇದೇ ವೇಳೆ ಪ್ರತಿ ಯೂನಿಟ್‌ಗೆ 36 ಪೈಸೆ ಹೆಚ್ಚಳ ಮಾಡಿ KERC ಇಂದು ಅಧಿಕೃತ ಆದೇಶ ಹೊರಡಿಸಿದ್ದು, ಪರಿಷ್ಕೃತ ವಿದ್ಯುತ್ ದರ ಏಪ್ರಿಲ್ 1ರಿಂದಲೇ ಅನ್ವಯವಾಗಲಿದೆ. ಯೂನಿಟ್‍ಗೆ 49 ಪೈಸೆ ಏರಿಕೆ ಮಾಡುವಂತೆ ಎಸ್ಕಾಂಗಳು ಕೆಇಆರ್‌ಸಿ ಪ್ರಸ್ತಾವನೆ ಸಲ್ಲಿಸಿದ್ದವು.
ರಾಜ್ಯ ರಾಜಕಾರಣದಲ್ಲಿ ಭಾರಿ ಸದ್ದು ಮಾಡಿದ್ದ ಹನಿಟ್ರ್ಯಾಪ್ ಪ್ರಕರಣವನ್ನು ಸಿಐಡಿ ತನಿಖೆಗೆ ಹಸ್ತಾಂತರಿಸಲಾಗಿದೆ. ವಿಧಾನಸಭೆಯಲ್ಲಿ ನನ್ನನ್ನು ಹನಿಟ್ರ್ಯಾಪ್ ಮಾಡುವ ಪ್ರಯತ್ನ ನಡೆದಿತ್ತು ಎಂದು ಸಚಿವ ಕೆಎನ್ ರಾಜಣ್ಣ ಆರೋಪಿಸಿದ್ದು ಇದು ಆಡಳಿತರೂಢ ಪಕ್ಷ ಹಾಗೂ ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು. ಇದೀಗ ರಾಜಣ್ಣ ಗೃಹ ಸಚಿವ ಡಾ.ಜಿ ಪರಮೇಶ್ವರ್ ಅವರನ್ನ ಭೇಟಿಯಾಗಿ ಮೂರು ಪುಟಗಳ ದೂರನ್ನು ಸಲ್ಲಿಸಿದ್ದರು. ಈ ದೂರಿನ ಅರ್ಜಿಯನ್ನು ಗೃಹ ಸಚಿವರು ಡಿಜಿಪಿಗೆ ರವಾನಿಸಿದ್ದು ಈ ದೂರಿನ ಆಧಾರದ ಮೇರೆಗೆ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಹನಿಟ್ರ್ಯಾಪ್ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿದ್ದಾರೆ. ಮತ್ತೊಂದೆಡೆ ನನ್ನ ಮೇಲೆ ಹನಿಟ್ರ್ಯಾಪ್ ಯತ್ನ ನಡೆದಿಲ್ಲ. ಬದಲಾಗಿ ಕೊಲೆ ಮಾಡಲು ಸುಪಾರಿ ನೀಡಲಾಗಿದೆ ಎಂದು ಸಚಿವ ಕೆಎನ್ ರಾಜಣ್ಣ ಅವರ ಪುತ್ರ ವಿಧಾನಪರಿಷತ್ ಸದಸ್ಯ ರಾಜೇಂದ್ರ ಗಂಭೀರ ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೆ ತೆರಳಿ ರಾಜೇಂದ್ರ ದೂರು ನೀಡಿದ್ದಾರೆ.
15 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕನ್ನಡದ ನಟಿ ರನ್ಯಾ ರಾವ್ ಜಾಮೀನು ಅರ್ಜಿಯನ್ನು ಸೆಷನ್ಸ್ ಕೋರ್ಟ್ ವಜಾಗೊಳಿಸಿದೆ. ಜಾಮೀನು ಕೋರಿ ನಟಿ ರನ್ಯಾ ರಾವ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ 64ನೇ ಸಿಸಿಹೆಚ್ ಕೋರ್ಟ್, ಅರ್ಜಿ ವಜಾಗೊಳಿಸಿ ಆದೇಶ ಹೊರಡಿಸಿದೆ. ಹೀಗಾಗಿ ರನ್ಯಾ ರಾವ್ ಈಗ ಜಾಮೀನು ಕೋರಿ ಹೈಕೋರ್ಟ್ ಮೆಟ್ಟಿಲೇರುವ ಸಾಧ್ಯತೆ ಇದೆ. ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಆರ್‌ಐ ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ. ಬಳ್ಳಾರಿ ಮೂಲದ ಚಿನ್ನದ ವ್ಯಾಪಾರಿ ಸಾಹಿಲ್ ಸಕಾರಿಯಾ ಜೈನ್ ಬಂಧಿತ ಆರೋಪಿ. ಇದರೊಂದಿಗೆ ಈ ಪ್ರಕರಣದಲ್ಲಿ ಮೂರನೇ ಆರೋಪಿಯ ಬಂಧನವಾಗಿದೆ.
ಕೇಂದ್ರ ಸರ್ಕಾರ 2024-25ರ ಆರ್ಥಿಕ ವರ್ಷದಲ್ಲಿ ಕರ್ನಾಟಕದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 15ನೇ ಹಣಕಾಸು ಆಯೋಗದ ಅನುದಾನದ ಎರಡನೇ ಕಂತನ್ನು ಬಿಡುಗಡೆ ಮಾಡಿದೆ. ಕರ್ನಾಟಕ ರಾಜ್ಯದಾದ್ಯಂತ ಗ್ರಾಮೀಣ ಸ್ಥಳೀಯ ಸಂಸ್ಥೆಗಳನ್ನು ಪ್ರೋತ್ಸಾಹಿಸಲು 5,375 ಅರ್ಹ ಗ್ರಾಮ ಪಂಚಾಯಿತಿಗಳಿಗೆ 404 ಕೋಟಿ ರೂಪಾಯಿಗಳ ಸಂಯೋಜಿತ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಈ ಅನುದಾನವು ಪಂಚಾಯತ್ ರಾಜ್ ಸಂಸ್ಥೆಗಳನ್ನು ಸಶಕ್ತಗೊಳಿಸಲಿದ್ದು, ಸಂವಿಧಾನದ ಹನ್ನೊಂದನೇ ಅನುಸೂಚಿಯಲ್ಲಿ ವಿವರಿಸಲಾದ 29 ವಿಷಯಗಳ ಅಡಿಯಲ್ಲಿ ಸ್ಥಳ-ನಿರ್ದಿಷ್ಟ ಅಗತ್ಯಗಳನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ.
ಒಳಮೀಸಲಾತಿ ಜಾರಿ ವಿಚಾರವಾಗಿ ನಡೆಯುತ್ತಿರುವ ಹೋರಾಟಗಳ ನಡುವೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ರಾಜ್ಯ ಸರ್ಕಾರಕಕ್ಕೆ ಮಧ್ಯಂತರ ವರದಿಯನ್ನು ಸಲ್ಲಿಸಿದೆ. ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸುವ 104 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೇವೆ. ಇದರಲ್ಲಿ ತರಾತುರಿ ಪ್ರಶ್ನೆ ಇಲ್ಲ. ಮಧ್ಯಂತರ ವರದಿ ಕೊಡಿ ಎಂದು ಸರ್ಕಾರ ನಮ್ಮನ್ನು ಕೇಳಲಿಲ್ಲ. ನಾವೇ ಸ್ವ ಇಚ್ಛೆಯಿಂದ ವರದಿಯನ್ನು ನೀಡಿದ್ದೇವೆ ಎಂದು ಸಮಿತಿ ಹೇಳಿದೆ.