ಪ್ರಹ್ಲಾದ್ ಜೋಶಿ 
ರಾಜ್ಯ

ಧಾರವಾಡ ಸೇರಿ ದೇಶದ ಐದು ಐಐಟಿಗಳ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅಸ್ತು

ಈ ಐದು ಪ್ರಮುಖ ಐಐಟಿಗಳಲ್ಲಿ 6500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗುವಂತೆ ಸೌಲಭ್ಯಗಳ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ.

ನವದೆಹಲಿ: ರಾಜ್ಯದ ಧಾರವಾಡ ಐಐಟಿ ಸೇರಿದಂತೆ ದೇಶದ ಐದು ಐಐಟಿಗಳಲ್ಲಿ 11,828.79 ಕೋಟಿ ರೂ. ವೆಚ್ಚದಲ್ಲಿ ಶೈಕ್ಷಣಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಅವರು ತಿಳಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ರಾಜ್ಯದ ಧಾರವಾಡ ಐಐಟಿ ಹಾಗೂ ಆಂಧ್ರಪ್ರದೇಶ ತಿರುಪತಿ ಐಐಟಿ, ಛತ್ತೀಸ್‌ಗಢದ ಭಿಲಾಯಿ ಐಐಟಿ, ಜಮ್ಮು-ಕಾಶ್ಮೀರದ ಜಮ್ಮು ಐಐಟಿ ಮತ್ತು ಕೇರಳದ ಪಾಲಕ್ಕಾಡ್‌ಗಳಲ್ಲಿ ಸ್ಥಾಪಿಸಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆಗಳ(ಐಐಟಿ) ಶೈಕ್ಷಣಿಕ ಮತ್ತು ಮೂಲಸೌಕರ್ಯ ಸಾಮರ್ಥ್ಯ ವಿಸ್ತರಣೆಗೆ ಅನುಮೋದನೆ ನೀಡಿತು ಎಂದು ಹೇಳಿದ್ದಾರೆ.

ಈ ಐದು ಪ್ರಮುಖ ಐಐಟಿಗಳಲ್ಲಿ 6500ಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗುವಂತೆ ಸೌಲಭ್ಯಗಳ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ, ಕೈಗಾರಿಕೆ-ಶೈಕ್ಷಣಿಕ ಸಂಪರ್ಕವನ್ನು ಬಲಪಡಿಸಲು ಐದು ಹೊಸ ಅತ್ಯಾಧುನಿಕ ಸಂಶೋಧನಾ ಪಾರ್ಕ್‌ಗಳು ಸಹ ಈ ಯೋಜನೆಯಲ್ಲಿ ಬರಲಿವೆ.

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಥಾಪಿಸಲಾದ ಐದು ಹೊಸ ಐಐಟಿಗಳ ಅಭಿವೃದ್ಧಿಗೆ "ಬಿʼ ಹಂತದ ಯೋಜನೆ ಇದಾಗಿದ್ದು, ಕೇಂದ್ರ ಸಂಪುಟದಿಂದ ಅನುಮೋದನೆ ಸಿಕ್ಕಿದೆ ಎಂದು ತಿಳಿಸಿದ್ದಾರೆ.

130 ಅಧ್ಯಾಪಕರ ಹುದ್ದೆ ಸೃಷ್ಟಿಗೆ ಅಸ್ತು

2025-26ರಿಂದ 2028-29ರವರೆಗಿನ ನಾಲ್ಕು ವರ್ಷಗಳ ಅವಧಿಯಲ್ಲಿ ಒಟ್ಟು 11,828.79 ಕೋಟಿ ರೂ. ವೆಚ್ಚದಲ್ಲಿ ಈ ಐಐಟಿಗಳಲ್ಲಿ ಅಭಿವೃದ್ಧಿ ಯೋಜನೆ ಕೈಗೊಳ್ಳಲಾಗುತ್ತಿದ್ದು, 130 ಅಧ್ಯಾಪಕರ ಹುದ್ದೆಗಳನ್ನು(ಪ್ರೊಫೆಸರ್ ಮಟ್ಟದಲ್ಲಿ ಅಂದರೆ ಹಂತ 14 ಮತ್ತು ಅದಕ್ಕಿಂತ ಹೆಚ್ಚಿನ) ಸೃಷ್ಟಿಸಲು ಸಂಪುಟ ಅನುಮೋದಿಸಿದೆ ಎಂದು ಜೋಶಿ ಹೇಳಿದ್ದಾರೆ.

ಅನುಷ್ಠಾನ ತಂತ್ರ ಮತ್ತು ಗುರಿಗಳು

ಮುಂದಿನ ನಾಲ್ಕು ವರ್ಷಗಳಲ್ಲಿ ಈ ಐಐಟಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯನ್ನು ಹಂತ ಹಂತವಾಗಿ ಹೆಚ್ಚಿಸಲಾಗುತ್ತದೆ. ಮೊದಲ ವರ್ಷದಲ್ಲಿ 1364 ವಿದ್ಯಾರ್ಥಿಗಳು, 2ನೇ ವರ್ಷದಲ್ಲಿ 1738, 3ನೇ ವರ್ಷದಲ್ಲಿ 1767 ಹಾಗೂ 4ನೇ ವರ್ಷದಲ್ಲಿ 1707 ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದ್ದು, ಒಟ್ಟಾರೆ 6500ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.

ಈ ಐದು ಐಐಟಿಗಳು ಪ್ರಸ್ತುತ 7,111 ವಿದ್ಯಾರ್ಥಿಗಳ ಸಂಖ್ಯೆಗೆ ಬದಲಾಗಿ 13,687 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಿವೆ. ಅಂದರೆ ವಿದ್ಯಾರ್ಥಿಗಳ ಸಂಖ್ಯೆ ಈಗಲೇ 6,576 ಹೆಚ್ಚಳವಾಗಲಿದೆ. ಒಟ್ಟು ಸೀಟುಗಳ ಸಂಖ್ಯೆಯಲ್ಲಿನ ಈ ಹೆಚ್ಚಳದೊಂದಿಗೆ ಹೆಚ್ಚುವರಿಯಾಗಿ 6,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರ್ಪಡೆಯಾಗುತ್ತಾರೆ. ಈ ಮೂಲಕ ದೇಶದ ಅತ್ಯಂತ ಪ್ರತಿಷ್ಠಿತ ಮತ್ತು ಬೇಡಿಕೆಯ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಆಕಾಂಕ್ಷೆಯನ್ನು ಪೂರೈಸಲು ಸಾಧ್ಯವಾಗಲಿದೆ ಎಂದು ಜೋಶಿ ತಿಳಿಸಿದ್ದಾರೆ.

ಕಳೆದ 10 ವರ್ಷಗಳಲ್ಲಿ 23 ಐಐಟಿಗಳಲ್ಲಿನ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 65,000 ದಿಂದ 1.35 ಲಕ್ಷಕ್ಕೆ ಏರಿದೆ. ಅಂದರೆ ಶೇ.100ರಷ್ಟು ಹೆಚ್ಚಾಗಿದೆ. 2014 ರ ನಂತರ ಪ್ರಾರಂಭವಾದ 5 ಐಐಟಿಗಳಲ್ಲಿ 6,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಲು ಹೆಚ್ಚುವರಿ ಮೂಲಸೌಕರ್ಯಗಳನ್ನು ರಚಿಸಲಾಗುವುದು. ಇದರಿಂದ ಪದವಿ ಪೂರ್ವ(ಯುಜಿ), ಸ್ನಾತಕೋತ್ತರ (ಪಿಜಿ) ಮತ್ತು ಪಿಎಚ್‌ಡಿ ಕಾರ್ಯಕ್ರಮಗಳನ್ನು ಒಟ್ಟುಗೂಡಿಸಿದರೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತದೆ ಎಂದರು.

ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿ

ಈ ಐದೂ ಐಐಟಿಗಳ ವಿಸ್ತರಣೆಯಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುವುದಲ್ಲದೆ, ಇದಕ್ಕೆ ಅನುಗುಣವಾಗಿ ಅಧ್ಯಾಪಕರು, ಆಡಳಿತ ಸಿಬ್ಬಂದಿ, ಸಂಶೋಧಕರು ಮತ್ತು ಸಹಾಯಕ ಸಿಬ್ಬಂದಿ ಸಂಖ್ಯೆ ಸಹ ಹೆಚ್ಚಾಗಲಿದೆ. ನೇರ ಉದ್ಯೋಗವನ್ನು ಸೃಷ್ಟಿಸಲಾಗುತ್ತದೆ. ಐಐಟಿ ಕ್ಯಾಂಪಸ್‌ಗಳ ವಿಸ್ತರಣೆ, ವಸತಿ, ಸಾರಿಗೆ, ಸೇವೆ ಹಾಗೂ ಸ್ಥಳೀಯ ಆರ್ಥಿಕತೆಯನ್ನೂ ಉತ್ತೇಜಿಸುತ್ತದೆ. ಐಐಟಿಗಳಿಂದ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರ ಸಂಖ್ಯೆ ಸಹ ಹೆಚ್ಚಾಗಿ ನಾವೀನ್ಯತೆ, ನವೋದ್ಯಮ ಪರಿಸರ ವ್ಯವಸ್ಥೆಗಳು ಮತ್ತಷ್ಟು ಉತ್ತೇಜನಗೊಳ್ಳುತ್ತವೆ. ವೈವಿಧ್ಯಮಯ ವಲಯಗಳಲ್ಲಿ ಉದ್ಯೋಗ ಸೃಷ್ಟಿಗೆ ಕೊಡುಗೆ ನೀಡುತ್ತವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಈ ಐದು ಹೊಸ ಐಐಟಿಗಳಲ್ಲಿ ಆಂಧ್ರಪ್ರದೇಶದ ತಿರುಪತಿ ಐಐಟಿ, ಕೇರಳದ ಪಾಲಕ್ಕಾಡ್), ಛತ್ತೀಸ್‌ಗಢದ ಭಿಲಾಯಿ, ಜಮ್ಮು-ಕಾಶ್ಮೀರದ ಜಮ್ಮು ಐಐಟಿ ಮತ್ತು ಕರ್ನಾಟಕದ ಧಾರವಾಡ ಐಐಟಿಗಳು 2015-16ರಲ್ಲಿ ಆರಂಭವಾಗಿದ್ದರೆ, ಉಳಿದ ಮೂರು 2016-17ರಲ್ಲಿ ಅವುಗಳ ತಾತ್ಕಾಲಿಕ ಕ್ಯಾಂಪಸ್‌ಗಳಿಂದ ಪ್ರಾರಂಭವಾದವುಗಳಾಗಿದ್ದು, ಈಗ ಶಾಶ್ವತ ಕ್ಯಾಂಪಸ್‌ಗಳಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

AI- ಚಾಲಿತ ಡಿಜಿಟಲೀಕರಣ, SIR ಕುರಿತು CECಗೆ ಐದನೇ ಪತ್ರ ಬರೆದ ಮಮತಾ ಬ್ಯಾನರ್ಜಿ

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

Indian Stock Market: 5 ದಿನಗಳ ಸತತ ಕುಸಿತಕ್ಕೆ ಕೊನೆಗೂ ಬ್ರೇಕ್, Sensex 301 ಅಂಕ ಏರಿಕೆ!

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

ಬಿಜೆಪಿ ನಿಯೋಗದಿಂದ ರಾಜ್ಯಪಾಲರ ಭೇಟಿ: 'ದ್ವೇಷ ಭಾಷಣ ತಡೆ' ಮಸೂದೆಗೆ ಅಂಕಿತ ಹಾಕದಂತೆ ಮನವಿ!

SCROLL FOR NEXT