ಬೆಂಗಳೂರು: ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಚರ್ಚಿಸಲು ಸರ್ಕಾರ ವಿಶೇಷ ಸಂಪುಟ ಸಭೆ ನಡೆಸಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಬುಧವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಯಮಿತ ಸಂಪುಟ ಸಭೆಯಲ್ಲಿ ಸಿಗುವ ಅರ್ಧ ಗಂಟೆ ಅಥವಾ 10 ನಿಮಿಷಗಳಲ್ಲಿ ಸಮೀಕ್ಷೆ ಕುರಿತು ಚರ್ಚೆ ನಡೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಸರ್ಕಾರ ವಿಶೇಷ ಸಂಪುಟ ಸಭೆ ನಡೆಸಲಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಸಮೀಕ್ಷೆ ಕುರಿತು ತಮ್ಮ ಅಭಿಪ್ರಾಯವನ್ನು ಲಿಖಿತವಾಗಿ ನೀಡುವಂತೆ ಸಚಿವರಿಗೆ ಸೂಚನೆ ನೀಡಿದ್ದರು. 11 ಸಚಿವರು ತಮ್ಮ ಅಭಿಪ್ರಾಯಗಳನ್ನು ಸಲ್ಲಿಸಿದ್ದಾರೆ. ಉಳಿದ ಎಲ್ಲಾ ಸಚಿವರು ತಮ್ಮ ಅಭಿಪ್ರಾಯವನ್ನು ನೀಡಿದ ನಂತರ ವಿಶೇಷ ಸಂಪುಟ ಸಭೆ ನಡೆಸಿ, ಅಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಪರಿಶಿಷ್ಟ ಜಾತಿ ಸಮುದಾಯಗಳ ಆಂತರಿಕ ಮೀಸಲಾತಿ ಸಮೀಕ್ಷೆ ಕುರಿತು ಮಾತನಾಡಿ, ಎಸ್‌ಸಿಗಳಿಗೆ ಆಂತರಿಕ ಮೀಸಲಾತಿಗಾಗಿ ಸಮೀಕ್ಷೆಯನ್ನು ಪೂರ್ಣಗೊಳಿಸಲು ಇನ್ನೂ ಒಂದು ತಿಂಗಳ ಸಮಯಾವಕಾಶ ಕೋರಿ ಕೆಲವು ನಾಯಕರು ಸಂಪರ್ಕಿಸಿದ್ದಾರೆ. ಸಮೀಕ್ಷೆ ನಡೆಸುತ್ತಿರುವ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರಿಗೂ ಮನವಿ ಸಲ್ಲಿಸಲು ನಾನು ಅವರಿಗೆ ಸೂಚಿಸಿದ್ದೇನೆ. ಮೇ 23 ರವರೆಗೆ ಆಂತರಿಕ ಮೀಸಲಾತಿ ಸಮೀಕ್ಷೆ ನಡೆಯಲಿದೆ ಎಂದು ತಿಳಿಸಿದರು.
ಸಮೀಕ್ಷೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ ಎಂಬ ವರದಿ ಕುರಿತು ಮಾತನಾಡಿ, ಅದರ ಬಗ್ಗೆ ನನಗೆ ತಿಳಿದಿಲ್ಲ ಎಂದರು.
ಸಮೀಕ್ಷೆಗಾಗಿ ಶಿಕ್ಷಕರು ನನ್ನ ಮನೆಗೆ ಬಂದಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ಸಮೀಕ್ಷೆ ಪರಿಣಾಮಕಾರಿಯಾಗಿ ನಡೆಯುತ್ತಿದೆ. ನಗರ ಪ್ರದೇಶಗಳಲ್ಲಿ ಕೆಲವು ನ್ಯೂನತೆಗಳಿರಬಹುದು ಎಂದು ಹೇಳಿದರು.
ಬಿಜೆಪಿಯ ತಿರಂಗ ಯಾತ್ರೆಯ ಕುರಿತು ಮಾತನಾಡಿ, ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಮಸ್ಯೆ ರಾಷ್ಟ್ರೀಯ ಭದ್ರತೆಯ ಕುರಿತಾಗಿ ಆಗಿದೆ. ಇದನ್ನು ರಾಜಕೀಯಗೊಳಿಸುವ ಅಗತ್ಯವಿಲ್ಲ. ಕಾಂಗ್ರೆಸ್ ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡಿದ್ದು, ನಾವೂ ಕೂಡ ಬೆಂಗಳೂರಿನಲ್ಲಿ ತಿರಂಗ ಯಾತ್ರೆ ನಡೆಸಿದ್ದೇವೆ. ಇದು ಯಾವುದೇ ಪಕ್ಷಕ್ಕೆ ಸೀಮಿತವಾಗಿಲ್ಲ. ನಾವು ನಡೆಸಿದ ತಿರಂಗ ಯಾತ್ರೆಯಲ್ಲಿ ರಾಜಕೀಯ ಅಥವಾ ಸಿದ್ಧಾಂತಗಳಿಗೆ ಒತ್ತು ನೀಡಲಿಲ್ಲ. ಆದರೆ, ಬಿಜೆಪಿ ಮಾಡುತ್ತಿದೆ ಎಂದರು.