ಬೆಂಗಳೂರು: ನಗರದಲ್ಲಿ ಪರಿಶಿಷ್ಟ ಜಾತಿ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳಿಗೆ ಗಣತಿದಾರರನ್ನು ನಿಯೋಜಿಸಿ, ಸಮೀಕ್ಷಾ ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪರಿಶಿಷ್ಟ ಜಾತಿ ಸಮೀಕ್ಷೆಗೆ ಸಂಬಂಧಿಸಿದ ಭಾನುವಾರ ನಡೆದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ಎಂಟು ವಲಯಗಳ ವಲಯ ಆಯುಕ್ತರು ಪ್ರತಿದಿನವೂ ಸಮೀಕ್ಷೆ ಕಾರ್ಯವನ್ನು ಮೇಲ್ವಿಚಾರಣೆ ಮಾಡಬೇಕು, ವಿಸ್ತೃತ ಸಮಯದೊಳಗೆ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.
ಸರ್ಕಾರ ಸಮೀಕ್ಷೆ ಅವಧಿಯಲ್ಲಿ ಮೇ 17 ರಿಂದ 25ರವರೆಗೆ ವಿಸ್ತರಣೆ ಮಾಡಲಾಗಿದ್ದು, ಈ ಅವಧಿಯಲ್ಲಿ ಸಮೀಕ್ಷೆ ಕಾರ್ಯ ಪೂರ್ಣಗೊಳ್ಳಬೇಕು ಎಂದು ತಿಳಿಸಿದರು.
ಸಮೀಕ್ಷೆಯ ಬಿಬಿಎಂಪಿಯ ಸಮನ್ವಯ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಕಲ್ಯಾಣ ವಿಭಾಗದ ವಿಶೇಷ ಆಯುಕ್ತ ಸುರಳರ್‌ವಿಕಾಸ್ ಕಿಶೋರ್ ಮಾತನಾಡಿ, ಸಮೀಕ್ಷಾ ಕಾರ್ಯ ಕಡಿಮೆಯಾಗುತ್ತಿರುವ ಕಡೆಗಳಲ್ಲಿ ಹೆಚ್ಚುವರಿ ಗಣತಿದಾರರನ್ನು ನಿಯೋಜಿಸಿಕೊಂಡು ತ್ವರಿತವಾಗಿ ಸಮೀಕ್ಷಾ ಕಾರ್ಯವನ್ನು ಪೂರ್ಣಗೊಳಿಸುವಂತೆ ಹೇಳಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಸಮಗ್ರ ಸಮೀಕ್ಷಾ ಕಾರ್ಯದಲ್ಲಿ ನಾಗರಿಕರು ಸಕ್ರಿಯವಾಗಿ ಪಾಲ್ಗೊಳ್ಳುವ ಉದ್ದೇಶದಿಂದ ನಗರದ 8 ವಲಯಗಳಲ್ಲಿ ಬೀದಿ ನಾಟಕ, ಧ್ವನಿವರ್ಧಕ ಹಾಗೂ ಕರಪತ್ರಗಳನ್ನು ಹಂಚುವ ಮುಖಾಂತರ ಅರಿವು ಮೂಡಿಸುವ ಕಾರ್ಯಗಳು ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ಸರ್ಕಾರ, ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 8 ವಲಯಗಳಲ್ಲಿ ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ ಕಾರ್ಯವು ಮೇ 5 ರಿಂದ 23ನೇ ಮೇ 2025 ರವೆರೆಗೆ ನಡೆಯಲಿದೆ. ಅದರಂತೆ, ಪಾಲಿಕೆ ಸಮನ್ವಯ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಕಲ್ಯಾಣ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರ ನೇತೃತ್ವದಲ್ಲಿ, ಪರಿಷಿಷ್ಟ ಜಾತಿ ಸಮುದಾಯದವರು ಸಮೀಕ್ಷಾ ಕಾರ್ಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಮೇ 15 ರಿಂದ ಮೇ 20 ರವರೆಗೆ 6 ದಿನಗಳ ಕಾಲ ಎಲ್ಲಾ 8 ವಲಯಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.