ಬೆಂಗಳೂರು: ತುಮಕೂರು-ಬೆಂಗಳೂರು ಮೆಟ್ರೋ ರೈಲು ಸಂಪರ್ಕ ರಾಜ್ಯ ರಾಜಧಾನಿ ಬೆಂಗಳೂರು ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಅವರು ಸೋಮವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ರಾಜಧಾನಿಯ ಮೇಲೆ ಹೆಚ್ಚುತ್ತಿರುವ ಒತ್ತಡವನ್ನು ಕಡಿಮೆ ಮಾಡಲು ಮತ್ತು ತುಮಕೂರಿನಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಉತ್ತೇಜಿಸಲು ಬೆಂಗಳೂರು ಮತ್ತು ತುಮಕೂರಿನ ನಡುವೆ ಮೆಟ್ರೋ ರೈಲು ಸಂಪರ್ಕದ ಅಗತ್ಯವಿದೆ ಎಂದು ಹೇಳಿದರು.
ಮುಖ್ಯಮಂತ್ರಿಯವರ ಮನವೊಲಿಸಿ, ಕಳೆದ ಬಜೆಟ್‌ನಲ್ಲಿ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಲು ಅವಕಾಶ ಕಲ್ಪಿಸಲಾಗಿತ್ತು. ಹೈದರಾಬಾದ್ ಕಂಪನಿ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಿದೆ. ಸಾಧಕ-ಬಾಧಕಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.
‘ತುಮಕೂರು ಮೆಟ್ರೊ ಯೋಜನೆ ಕುರಿತು ಬೆಂಗಳೂರಿನ ಇಬ್ಬರು ಸಂಸದರು ಅರ್ಥವಿಲ್ಲದ ಹೇಳಿಕೆ ನೀಡಿದ್ದಾರೆ. ತುಮಕೂರಿನಲ್ಲಿ 20 ಸಾವಿರ ಎಕರೆಯಲ್ಲಿ ಕೈಗಾರಿಕಾ ಪ್ರದೇಶವಿದೆ. ರಸ್ತೆ ಮೂಲಕ ತುಮಕೂರಿಗೆ ಹೋಗಲು ಎರಡು ಗಂಟೆ ಆಗುತ್ತಿದೆ. ಎರಡು ನಗರಗಳ ನಡುವಿನ ಮೆಟ್ರೋ ರೈಲುಗಳು ದೈನಂದಿನ ಪ್ರಯಾಣಿಕರಿಗೆ ಸಹಾಯ ಮಾಡುತ್ತವೆ. ಇದು ಬೆಂಗಳೂರಿನ ಮೇಲಿನ ಹೆಚ್ಚುತ್ತಿರುವ ಒತ್ತಡವನ್ನು ಸಹ ಕಡಿಮೆ ಮಾಡುತ್ತದೆ. ಸಂಸದರು ಅಂತಾರಾಷ್ಟ್ರೀಯ ವಿಚಾರ ತಿಳಿದಿದ್ದಾರೆ. ಟರ್ಕಿ, ಟೊಕಿಯೋದಲ್ಲಿ ಮೆಟ್ರೋ ಸಂಪರ್ಕವಿದೆ. ಒಂದು ಸಿಟಿಯಿಂದ ಮತ್ತೊಂದು ಸಿಟಿಗೆ ಸಂಪರ್ಕ ಕಲ್ಪಿಸಲು ಮೆಟ್ರೋ ಇದೆ. ಹೀಗಾಗಿ ನಾವು ಮೆಟ್ರೋನ ತಮಾಷೆಗೆ ಮಾಡಿದ್ದಲ್ಲ. ಅರ್ಥ ಮಾಡಿಕೊಂಡು ಹೇಳಿಕೆ ಕೊಡಬೇಕುನ ಎಂದರು.
ವಿ.ಸೋಮಣ್ಣ ಬೆಂಗಳೂರಿನಲ್ಲಿದ್ದವರೆ, ಅವರಿಗೆ ಚೆನ್ನಾಗಿ ಅರ್ಥ ಆಗಿದೆ. ನಾವು ತುಮಕೂರಿನವರಾಗಿ ನಮಗೆ ಮೆಟ್ರೋ ಬೇಕೇಬೇಕು. ಅಭಿವೃದ್ಧಿ ದೃಷ್ಟಿಯಿಂದ ಮೆಟ್ರೋ ಬೇಕು. ದುರುದ್ದೇಶದಿಂದ ನಮಗೆ ಅಲ್ಲ. ಒಂದು ವೇಳೆ ನೆಲಮಂಗಲದಲ್ಲಿ ಏರ್‌ಪೋರ್ಟ್ ಆದರೆ. ಹೆಚ್ಚು ಅನುಕೂಲ ಆಗುತ್ತದೆ. ಪಿಪಿಪಿ ಮಾಡೆಲ್‌ನಲ್ಲಿ ಅಂತ ಹೇಳಿದ್ದೇವೆ. 35 ವರ್ಷ ಲೀಸ್ ಕೊಡುತ್ತೇವೆ. ನಾವೇನು ಸರ್ಕಾರದಿಂದ ಹಣ ಕೊಡುತ್ತಿಲ್ಲ. ಅವರು ಹೂಡಿಕೆ ಮಾಡುತ್ತಾರೆ ಎಂದು ತಿಳಿಸಿದರು.
ಏತನ್ಮಧ್ಯೆ, ಸರ್ಕಾರದ ಪ್ರಸ್ತಾವನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದು, ಸರ್ಕಾರ ಮೊದಲು ಬೆಂಗಳೂರಿನಲ್ಲಿ ವಿಳಂಬವಾಗಿರುವ ಮೆಟ್ರೋ ಯೋಜನೆಯ ಕೆಲಸವನ್ನು ಪೂರ್ಣಗೊಳಿಸಲಿ ಎಂದು ಹೇಳಿದರು.