ಬೆಂಗಳೂರು: ಭ್ರಷ್ಟಾಚಾರ ಪ್ರಕರಣದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳು ಸೇರಿದಂತೆ ಪ್ರಮುಖ ಆರೋಪಿಗಳನ್ನು ಬಂಧಿಸಲು ವಿಫಲವಾದ ಲೋಕಾಯುಕ್ತ ಪೊಲೀಸರನ್ನು ಲೋಕಾಯುಕ್ತ ಪ್ರಕರಣಗಳ ವಿಶೇಷ ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದ್ದು, ನಾಲ್ವರು ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದೆ.
ಏಪ್ರಿಲ್ 1, 2025 ರಂದು ಭ್ರಷ್ಟಾಚಾರ ಪ್ರಕರಣ ದಾಖಲಾಗಿದ್ದು, ಪ್ರಕರಣದಲ್ಲಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದ ಎ ವಿ ಕುಮಾರ್ ಮೊದಲ ಆರೋಪಿಯಾಗಿದ್ದಾರೆ. ಅವರ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾನ್‌ಸ್ಟೆಬಲ್‌ಗಳು ಎರಡನೇ ಮತ್ತು ಐದನೇ ಆರೋಪಿಗಳಾಗಿದ್ದಾರೆ. ಮೂರನೇ ಮತ್ತು ನಾಲ್ಕನೇ ಆರೋಪಿಗಳು ಕುಮಾರ್ ಅವರ ಸಂಬಂಧಿಕರು. ಆರನೇ ಮತ್ತು ಏಳನೇ ಆರೋಪಿಗಳು ಖಾಸಗಿ ವ್ಯಕ್ತಿಗಳಾಗಿದ್ದಾರೆ.
ಚನ್ನೇಗೌಡ ಕೆ ಕೆ, ಸಿವಿಲ್ ಗುತ್ತಿಗೆದಾರರಾಗಿದ್ದು, 6ನೇ ಆರೋಪಿಯೊಂದಿಗಿನ ತನ್ನ ಹಣಕಾಸಿನ ವಿವಾದವನ್ನು 27.50 ಲಕ್ಷ ರೂ.ಗೆ ಇತ್ಯರ್ಥಪಡಿಸಲು ಕುಮಾರ್ ಅವರು ಒತ್ತಡ ಹೇರಿದ್ದು, ಇದಕ್ಕೆ ಒಪ್ಪದಿದ್ದರೆ ರೌಡಿಶೀಟ್ ತೆರೆದು ಜೈಲಿಗೆ ಕಳುಹಿಸುವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ದೂರುದಾರರಾಗಿರುವ ಚನ್ನೇಗೌಡ ಅವರಿಗೆ ಶ್ರೀಗಂಧದ ಕಾವಲ್‌ನಲ್ಲಿರುವ 3.50 ಕೋಟಿ ರೂ. ಮೌಲ್ಯದ ಮನೆಯನ್ನು ತನ್ನ ಸಂಬಂಧಿ, ಮೂರನೇ ಆರೋಪಿ ಗವಿಗೌಡ ಅವರ ಹೆಸರಿನಲ್ಲಿ 2.05 ಕೋಟಿ ರೂ.ಗೆ ಮಾರಾಟ ಮಾಡುವಂತೆ ಒತ್ತಾಯಿಸಿದ್ದು, ದೂರುದಾರರ ಬ್ಯಾಂಕ್ ಖಾತೆ ಸಂಖ್ಯೆಯನ್ನು ಬಲವಂತವಾಗಿ ತೆಗೆದುಕೊಂಡು, ಗವಿಗೌಡ ಅವರ ಬ್ಯಾಂಕ್ ಖಾತೆಯಿಂದ 4,00,500 ರೂ.ಗಳನ್ನು ವರ್ಗಾಯಿಸಿದ್ದಾರೆಂದು ತಿಳಿಸಲಾಗಿದೆ.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯ, ಈ ಅಪರಾಧದ ಹಿಂದೆ ಉನ್ನತ ಶ್ರೇಣಿಯ ಪೊಲೀಸ್ ಅಧಿಕಾರಿಗಳ ಪಾತ್ರ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಪ್ರಕರಣ ದಾಖಲಾದ ದಿನೇ ಲೋಕಾಯುಕ್ತ ಪೊಲೀಸರು ಇತರ ಆರೋಪಿಗಳನ್ನು ವಶಕ್ಕೆ ಪಡೆದು, ಯಾವುದೇ ವಿಚಾರಣೆಯಿಲ್ಲದೆ ಬಿಎನ್‌ಎಸ್‌ಎಸ್‌ನ ಸೆಕ್ಷನ್ 35(5) ಅಡಿಯಲ್ಲಿ ನೋಟಿಸ್ ನೀಡುವ ನೆಪದಲ್ಲಿ ಅವರನ್ನು ಬಿಡುಗಡೆ ಮಾಡಿರುವುದು ಕಂಡುಬಂದಿದೆ ಎಂದು ಹೇಳಿದ್ದು, ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಇತರ ಆರೋಪಿಗಳು ನೋಟಿಸ್ ಜಾರಿ ಮಾಡಿದರೂ ತನಿಖಾ ಸಂಸ್ಥೆಯೊಂದಿಗೆ ಸಹಕರಿಸುತ್ತಿಲ್ಲ ಎಂಬ ಸಾರ್ವಜನಿಕ ಅಭಿಯೋಜಕರ ವಾದವನ್ನು ಉಲ್ಲೇಖಿಸಿಸಿ, ಆರೋಪಿಗಳಾದ ಸೋಮಶೇಖರ್ ಆರಾಧ್ಯ, ಎ ವಿ ದಿನೇಶ್, ಕೌಶಿಕ್ ಎಸ್ ಮತ್ತು ಉತ್ತಮ್ ಎನ್ ಅವರ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದೆ.