ಕಲಬುರಗಿ: ಕಲಬುರಗಿ ಜಿಲ್ಲಾಧಿಕಾರಿಯನ್ನು ನಿಂದಿಸಿದ ಹಾಗೂ ಪರಿಶಿಷ್ಟ ಜಾತಿಯವರಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕಿ, ಜಾತಿ ನಿಂದನೆ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರಿಗೆ ಕರ್ನಾಟಕ ಹೈಕೋರ್ಟ್ ಗುರುವಾರ ತಾತ್ಕಾಲಿಕ ರಿಲೀಫ್ ನೀಡಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ರದ್ದುಕೋರಿ ರವಿಕುಮಾರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚನೆ ನೀಡಿದೆ. ಅಲ್ಲದೇ ವಿಚಾರಣೆಗೆ ಸಹಕರಿಸಯವಂತೆ ರವಿಕುಮಾರ್ ಅವರಿಗೂ ಕೋರ್ಟ್ ಸೂಚಿಸಿದೆ.
ಕಲಬುರಗಿ ಜಿಲ್ಲಾಧಿಕಾರಿಯನ್ನು ನಿಂದಿಸಿದ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಪರಿಶಿಷ್ಟ ಜಾತಿಯವರಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪದಡಿ ರವಿಕುಮಾರ್ ಅವರ ವಿರುದ್ಧ ಕಳೆದ ಸೋಮವಾರ ಪ್ರಕರಣ ದಾಖಲಾಗಿದೆ.
ದತ್ತಾತ್ರೇಯ ಇಕ್ಕಳಕಿ ಅವರು ನೀಡಿದ ದೂರಿನ ಅನ್ವಯ ರವಿಕುಮಾರ್ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ(ಎಸ್‌ಸಿ–ಎಸ್‌ಟಿ) ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಮೇ 24 ರಂದು ಬಿಜೆಪಿಯ ”ಕಲಬುರಗಿ ಚಲೋ” ಪ್ರತಿಭಟನೆ ವೇಳೆ ಮಾತನಾಡಿದ್ದ ರವಿಕುಮಾರ್, ಜಿಲ್ಲಾಡಳಿತವು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಪ್ರಭಾವದಿಂದ ಕಾರ್ಯನಿರ್ವಹಿಸುತ್ತಿದೆ. ಕಲಬುರಗಿ ಡಿಸಿ ಕಚೇರಿಯೂ ತನ್ನ ಸ್ವಾತಂತ್ರ್ಯ ಕಳೆದುಕೊಂಡಿದೆ. ಡಿಸಿ ಮೇಡಂ ಅವರು ಪಾಕಿಸ್ತಾನದಿಂದ ಬಂದಿದ್ದಾರೋ ಅಥವಾ ಇಲ್ಲಿ ಐಎಎಸ್ ಅಧಿಕಾರಿಯೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದರು.