ತುಮಕೂರಿನ ಮೂಲಕ ರಾಮನಗರಕ್ಕೆ ಹೇಮಾವತಿ ನೀರು ಹರಿಸುವ ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿಗೆ ತುಮಕೂರಿನಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಹೆದ್ದಾರಿ ರಸ್ತೆ ತಡೆದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿಟ್ಟೂರು ಬಳಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಹೇಮಾವತಿ ಲಿಂಕ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಮಾಗಡಿ, ರಾಮನಗರಕ್ಕೆ ಹೋದರೆ ತುಮಕೂರು ಜನರಿಗೆ ಅನ್ಯಾಯವಾಗಲಿದೆ. ಇದೊಂದು ಅವೈಜ್ಞಾನಿಕ ಕಾಮಗಾರಿ. ಕೂಡಲೇ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಬೃಹತ್ ಹೋರಾಟಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಗುಬ್ಬಿ ತಹಶೀಲ್ದಾರ್ ಬಿ.ಆರತಿ ಅವರು ಮೇ 31ರ ಬೆಳಿಗ್ಗೆ 6 ಗಂಟೆಯಿಂದ ಜೂನ್ 1ರ ಬೆಳಿಗ್ಗೆ 6 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಆದರೆ ನಿಷೇಧಾಜ್ಞೆ ದಿಕ್ಕರಿಸಿ ರೈತರು, ಮುಖಂಡರು ಹೋರಾಟ ತೀವ್ರಗೊಳಿಸಿದ್ದು, ಘಟನೆಯಲ್ಲಿ ತುಮಕೂರು ಎಸ್ ಪಿ ಗೆ ಕಲ್ಲೇಟು ತಗುಲಿದೆ. ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಯೋಜನೆಗೆ ಅಡ್ಡಿಪಡಿಸುವ ಕೆಲಸ ಮಾಡಬಾರದು, ನಾನು ಜಿಲ್ಲಾ ಉಸ್ತುವಾರಿ ಸಚಿವ ಪರಮೇಶ್ವರ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು. ಇದು ರಾಜಕೀಯ ಪ್ರೇರಿತ ಪ್ರತಿಭಟನೆ. ಈಗಾಗಲೆ 40% ಕೆಲಸ ಪೂರ್ಣಗೊಂಡಿದೆ. ಕಾಮಗಾರಿ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರಂತರ ಭಾರಿ ಮಳೆಯಾಗುತ್ತಿರುವುದರಿಂದ ನೇತ್ರಾವತಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಂಟ್ವಾಳ ತಾಲ್ಲೂಕಿನ ತಗ್ಗು ಪ್ರದೇಶಗಳ ಜನರನ್ನು ಸ್ಥಳಾಂತರಿಸಲಾಗಿದೆ. ನೇತ್ರಾವತಿ ನದಿ ನೀರಿನ ಅಪಾಯದ ಮಟ್ಟ 8.5 ಮೀಟರ್ ಆಗಿದ್ದು, ಇಂದು ಬೆಳಗ್ಗೆ 7.6 ಮೀಟರ್ ಎತ್ತರದಲ್ಲಿ ನೀರು ಹರಿಯುತ್ತಿದೆ. ಪಾಣೆ ಮಂಗಳೂರು ಪುರಸಭೆಯ 24ನೇ ವಾರ್ಡ್ ನ ಆಲಡ್ಕಪಡ್ಪುವಿನಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಈ ಹಿನ್ನೆಲೆಯಲ್ಲಿ ಅಲ್ಲಿದ್ದ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಕರಾವಳಿ ಪ್ರದೇಶದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವಿಗೀಡಾದವರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದ್ದಾರೆ.
SSLCಯಲ್ಲಿ ಶೇ 60ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಜಿಲ್ಲೆಗಳ DDPIಗಳಿಗೆ ನೋಟಿಸ್ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇಂದು ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಸಿಇಒಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಫಲಿತಾಂಶ ಕಡಿಮೆ ಬರುವುದಕ್ಕೆ ಶಿಕ್ಷಕರ, ಸಿಬ್ಬಂದಿ ಕೊರತೆ ಎಂದು ಇಲ್ಲ ಸಲ್ಲದ ನೆಪ ಹೇಳಬೇಡಿ ಎಂದು ತಿಳಿಸಿದ್ದು,ಶೇ 60 ಕ್ಕಿಂತ ಕಡಿಮೆ ಫಲಿತಾಂಶ ಪಡೆದಿರುವ ಜಿಲ್ಲೆಗಳ ಡಿಡಿಪಿಐಗಳಿಗೆ ನೋಟಿಸ್ ನೀಡಬೇಕು, ಕೊಟ್ಟ ಉತ್ತರ ಸಮರ್ಪಕ ಅನ್ನಿಸದಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಜಿಲ್ಲೆಗಳು ಪ್ರತಿ ವರ್ಷ ಅಪೌಷ್ಟಿಕತೆ ಪ್ರಮಾಣವನ್ನು ಕನಿಷ್ಠ ಶೇ.1 ರಷ್ಟು ಕಡಿಮೆ ಮಾಡಲು ಕ್ರಮ ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಹುಕ್ಕಾ ಬಾರ್‌ಗಳನ್ನು ಸಂಪೂರ್ಣವಾಗಿ ನಿಷೇಧಿಸಿರುವ ರಾಜ್ಯ ಸರ್ಕಾರ ತಂಬಾಕು ಉತ್ಪನ್ನಗಳನ್ನು ಖರೀದಿಸುವ ಕಾನೂನುಬದ್ಧ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಏರಿಕೆ ಮಾಡಿದೆ. ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮ ಅಧಿನಿಯಮ ತಿದ್ದುಪಡಿ 2024ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ. ಈ ಕಾಯ್ದೆಯ ಮೂಲಕ ಯಾವುದೇ ಶಿಕ್ಷಣ ಸಂಸ್ಥೆಯ 100 ಮೀಟರ್ ಸುತ್ತಳತೆಯೊಳಗಿನ ಪ್ರದೇಶದೊಳಗೆ, ಪ್ಯಾಕ್ ಅಥವಾ ಒಂಟಿ ಕಡ್ಡಿಯಾಗಿ ಸಿಗರೇಟ್ ಮಾರಾಟವನ್ನು ನಿಷೇಧಿಸಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿ ತಂಬಾಕು ಬಳಸುವ, ಧೂಮಪಾನ ಮಾಡುವ, ತಂಬಾಕು ಉಗಿಯುವ ವ್ಯಕ್ತಿಗಳಿಗೆ 1,000 ರೂ ದಂಡ ವಿಧಿಸಲಾಗುತ್ತದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಸಿನಿಮಾ ಶೂಟಿಂಗ್‌ಗಾಗಿ ವಿದೇಶಕ್ಕೆ ತೆರಳಲು ಕೋರ್ಟ್ ಅನುಮತಿ ನೀಡಿದೆ. ಅರ್ಜಿಯ ವಿಚಾರಣೆ ನಡೆಸಿದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಬುಧವಾರ ಆದೇಶವನ್ನು ಕಾಯ್ದಿರಿಸಿತ್ತು. ಜುಲೈ 1 ರಿಂದ ಜುಲೈ 27 ರವರೆಗೆ ಸಿನಿಮಾ ಚಿತ್ರೀಕರಣಕ್ಕಾಗಿ ವಿದೇಶ ಪ್ರವಾಸ ಮಾಡಲು ದರ್ಶನ್ ಗೆ ಅನುಮತಿ ನೀಡಿದೆ. ವಿಶೇಷ ಸರ್ಕಾರಿ ಅಭಿಯೋಜಕರು, ನಟ ಅರ್ಜಿಯನ್ನು ಬಲವಾಗಿ ವಿರೋಧಿಸಿದ್ದರು.