ಬೆಳಗಾವಿ: ಕನ್ನಡ ರಾಜ್ಯೋತ್ಸವ ಮೆರವಣಿಗೆ ವೇಳೆ ಕುಂದಾನಗರಿ ಬೆಳಗಾವಿಯಲ್ಲಿ ಶನಿವಾರ ಆತಂಕಕಾರಿ ಘಟನೆಯೊಂದು ನಡೆದಿದೆ. ಮೆರವಣಿಗೆ ಗುಂಪಿನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಐವರಿಗೆ ಚಾಕು ಇರಿದಿದ್ದಾರೆ.
ಮೆರವಣಿಗೆ ಗುಂಪಿನಲ್ಲಿ ಏಕಾಏಕಿ ಬಂದ ದುಷ್ಕರ್ಮಿಗಳು ಮನಬಂದಂತೆ ಐವರಿಗೆ ಚಾಕು ಇರಿದಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಗರದ ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಬಳಿ ಘಟನೆ ನಡೆದಿದೆ. ಭುವನೇಶ್ವರಿ ಮೂರ್ತಿ ಮೆರವಣಿಗೆ ಮಾಡುತ್ತಾ ಯುವಕರ ಗುಂಪು ನೃತ್ಯ ಮಾಡುತ್ತಿತ್ತು. ಏಕಾಏಕಿ ಗುಂಪಿಗೆ ನುಗ್ಗಿದ ಕೆಲವರು ಜನಸಂದಣಿಯಲ್ಲೇ ಚಾಕು ಹಾಗೂ ಜಂಬೆಗಳಿಂದ ಚುಚ್ಚಿದರು. ಯುವಕರು ನೆಲಕ್ಕೆ ಬಿದ್ದು ರಕ್ತಸ್ರಾವದಿಂದ ಒದ್ದಾಡುತ್ತಿದ್ದಂತೆಯೇ ಸ್ಥಳದಿಂದ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಗಾಯಗೊಂಡವರನ್ನು ಗುರುನಾಥ ವಕ್ಕುಂದ, ಸಚಿನ್ ಕಾಂಬಳೆ, ಲೋಕೇಶ್ ಬೆಟಗೇರಿ, ಮಹೇಶ್ ವಿನಾಯಕ ಹಾಗೂ ನಜೀರ್ ಪಠಾಣ್ ಎಂದು ಗುರುತಿಸಲಾಗಿದೆ. ತಲೆ, ಹೊಟ್ಟೆ, ಬೆನ್ನು ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ಚಾಕು ಇರಿತದಿಂದ ಗಾಯಗಳಾಗಿವೆ.
ಕೂಡಲೇ ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ. ನಗರ ಪೊಲೀಸ್ ಆಯುಕ್ತ ಭೂಷಣ ಭೊರಸೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.