ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಖಾಸಗಿ ಸಂಸ್ಥೆಗಳು ಯಾವುದೇ ಚಟುವಟಿಕೆ ನಡೆಸುವ ಮುನ್ನಾ ಪೂರ್ವಾನುಮತಿ ಪಡೆಯುವುದನ್ನು ಕಡ್ಡಾಯಗೊಳಿಸುವ ಸರ್ಕಾರದ ಆದೇಶದ ವಿರುದ್ಧ ಏಕಸದಸ್ಯ ನ್ಯಾಯಾಧೀಶರ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ಕಾಯ್ದಿರಿಸಿದೆ.
ಸರ್ಕಾರದ ಆದೇಶ ಪ್ರಾಥಮಿಕ ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅಕ್ಟೋಬರ್ 28 ರಂದು ಹೊರಡಿಸಿದ ಮಧ್ಯಂತರ ಆದೇಶದಲ್ಲಿ ಏಕಸದಸ್ಯ ನ್ಯಾಯಾಧೀಶರು ಹೇಳಿದ್ದರು. ಸರ್ಕಾರದ ಆದೇಶ ಉಲ್ಲಂಘಿಸಿ ನಡೆಯುವ ಯಾವುದೇ ಕಾರ್ಯಕ್ರಮ ಅಥವಾ ಮೆರವಣಿಗೆಯನ್ನು ಭಾರತೀಯ ನ್ಯಾಯ ಸಂಹಿತಾ (BNS) ನಿಬಂಧನೆಗಳ ಅಡಿಯಲ್ಲಿ "ಕಾನೂನುಬಾಹಿರ ಸಭೆ" ಎಂದು ಪರಿಗಣಿಸಲಾಗುತ್ತದೆ ಎಂದು ಸರ್ಕಾರ ಆದೇಶದಲ್ಲಿ ಹೇಳಲಾಗಿದೆ.
ಈ ಆದೇಶದಲ್ಲಿ ನಿರ್ದಿಷ್ಟವಾಗಿ RSS ಎಂದು ಹೇಳದಿದ್ದರೂ ಆದೇಶದ ನಿಬಂಧನೆಗಳು ಅದರ ಪಥ ಸಂಚನಲ ಸೇರಿದಂತೆ ಹಿಂದೂ ಬಲಪಂಥೀಯ ಸಂಘಟನೆಯ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಗುರಿ ಹೊಂದಿವೆ ಎಂದು ಹೇಳಲಾಗುತ್ತಿದೆ. ನ್ಯಾಯಮೂರ್ತಿ ಎಸ್ ಜಿ ಪಂಡಿತ್ ಮತ್ತು ನ್ಯಾಯಮೂರ್ತಿ ಗೀತಾ ಕೆ ಬಿ ಅವರಿದ್ದ ವಿಭಾಗೀಯ ಪೀಠದ ಮುಂದೆ ರಾಜ್ಯದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ (ಎಜಿ) ಶಶಿ ಕಿರಣ್ ಶೆಟ್ಟಿ, ಈ ಆದೇಶವು ಸರ್ಕಾರಿ ಆಸ್ತಿಯ ಮೇಲಿನ ಅತಿಕ್ರಮಣವನ್ನು ಕೇವಲ ಅಪರಾಧೀಕರಿಸಿದೆಯೇ ಹೊರತು ಮೂಲಭೂತ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಿಲ್ಲ ಎಂದು ವಾದಿಸಿದರು.
10 ಅಥವಾ ಅದಕ್ಕಿಂತಲೂ ಹೆಚ್ಚಿನ ಜನರು ಸೇರಿದರೆ ಅದು ಕಾನೂನುಬಾಹಿರವೇ? ಒಟ್ಟಿಗೆ ತೆರಳುವ ಸಾಮಾನ್ಯ ಜನರ ಮೇಲೂ ಸರ್ಕಾರದ ನಿರ್ಬಂಧ ಅನ್ವಯವಾಗುತ್ತದೆಯೇ ಎಂದು ನ್ಯಾಯಪೀಠ ಪ್ರಶ್ನಿಸಿತು. ಮೆರವಣಿಗೆಗಳು ಮತ್ತು ರ‍್ಯಾಲಿಗಳಿಗೆ ಮಾತ್ರ ನಿರ್ಬಂಧ ಸೀಮಿತವಾಗಿದ್ದು, ಅರ್ಜಿದಾರರು ಪೂರ್ವಾನುಮತಿ ಇಲ್ಲದೆ ಉದ್ಯಾನವನಗಳಲ್ಲಿ ಸಾರ್ವಜನಿಕ ಭಾಷಣಗಳನ್ನು ನಡೆಸಲು ಅವಕಾಶವಿಲ್ಲ ಎಂದು ಎಜಿ ಪ್ರತಿಕ್ರಿಯಿಸಿದರು.
"ನಾಳೆ 30 ಸಂಸ್ಥೆಗಳು ಒಂದು ಉದ್ಯಾನವನವನ್ನು ಆಕ್ರಮಿಸಿಕೊಂಡರೆ ಅದಕ್ಕೆ ಅನುಮತಿಸಲಾಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ನಾಗರಿಕರು ಅಂತಹ ಕಾರ್ಯಕ್ರಮಗಳಿಗಾಗಿ ನಗರದಲ್ಲಿ ಸಭಾಂಗಣಗಳು ಅಥವಾ ಫ್ರೀಡಂ ಪಾರ್ಕ್‌ನಂತಹ ಗೊತ್ತುಪಡಿಸಿದ ಸ್ಥಳಗಳನ್ನು ಬಳಸಬಹುದು ಎಂದು ಹೇಳಿದರು. ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿರುವ ಆದೇಶವು, ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ವಾದಿಸಿದರು. ಕಾನೂನುಬದ್ಧ ಮನವಿಗಳಿಗೆ ಇನ್ನೂ ಅನುಮತಿ ನೀಡಬಹುದು ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ನಿರ್ದೇಶನವನ್ನು ರೂಪಿಸಲಾಗಿದೆ ಎಂದು ಅವರು ಹೇಳಿದರು.
ಪ್ರತಿವಾದ ಮಂಡಿಸಿದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ, ಶಾಂತಿಯುತವಾಗಿ ಸಭೆ ಸೇರುವ ಹಕ್ಕನ್ನು ಸಂವಿಧಾನದ 19(1)(b) ವಿಧಿಯ ಅಡಿಯಲ್ಲಿ ರಕ್ಷಿಸಲಾಗಿದೆ. ಇದಕ್ಕಿಂತ ಸ್ವೇಚ್ಛೆಯ ಆದೇಶ ಇನ್ನೊಂದಿಲ್ಲ ಎಂದು ಆಕ್ಷೇಪಿಸಿದರು.
ಪ್ರತಿಯೊಂದು ಮೈದಾನ, ರಸ್ತೆ ನಮಗೆ ಸೇರಿರುವುದರಿಂದ ಅದನ್ನು ನಿರ್ಬಂಧಿಸುವ ಅಧಿಕಾರ ನಮಗೆ ಇದೆ ಎಂದು ಸರ್ಕಾರ ಹೇಳಲಾಗದು. ಉದ್ಯಾನಕ್ಕೆ ಹೋಗುವವರಿಗೆ ಅನುಮತಿ ಪಡೆಯಬೇಕು ಎಂದು ಸರ್ಕಾರ ಹೇಳಲಾಗದು. ಪೂರ್ವಾನುಮತಿ ಇಲ್ಲದೆ ಆಟದ ಮೈದಾನದಲ್ಲಿ ಕ್ರಿಕೆಟ್ ಆಡುವಂತಹ ದಿನನಿತ್ಯದ ಚಟುವಟಿಕೆಗಳನ್ನು ಇದು ಪರಿಣಾಮಕಾರಿಯಾಗಿ ಅಪರಾಧೀಕರಿಸುತ್ತದೆ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸುವ ವಿಚಾರ ನಗರ ಸ್ಥಳೀಯ ಸಂಸ್ಥೆಗಳಿಗೆ ಬರುತ್ತದೆ ಎಂದು ವಾದಿಸಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ನ್ಯಾಯಪೀಠ ತೀರ್ಪನ್ನು ಕಾಯ್ದಿರಿಸಿತು. ನವೆಂಬರ್ 17 ರಂದು ಮುಂದಿನ ವಿಚಾರಣೆಗೆ ನಿಗದಿಪಡಿಸಲಾಗಿದೆ.