ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಸಿಬ್ಬಂದಿ ಸಾಮಾಜಿಕ-ಆರ್ಥಿಕ ಸಮೀಕ್ಷೆಯಲ್ಲಿ ನಿರತರಾಗಿರುವುದರಿಂದ ನಗರದ ಹಲವಾರು ನಾಗರಿಕ ಯೋಜನೆಗಳು ವಿಳಂಬವಾಗಿದ್ದು, ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಇಲಾಖೆಯ (ಯುಡಿಡಿ) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು 5 ಪಾಲಿಕೆಗಳ ಆಯುಕ್ತರೊಂದಿಗೆ ಸೋಮವಾರ ಸಭೆ ನಡೆಸಿದರು.
ಪಾಲಿಕೆಯ ಸಿಬ್ಬಂದಿಗಳು ಸಮೀಕ್ಷೆಯಲ್ಲಿ ನಿರತರಾಗಿರುವುದರಿಂದ ಅಕ್ಟೋಬರ್‌ನಲ್ಲಿ ನಿಯಮಿತ ಸಭೆಗಳನ್ನು ಕರೆಯಲಾಗಿಲ್ಲ ಎಂದು ಗಿರಿನಾಥ್ ಅವರು ಹೇಳಿದ್ದಾರೆ.
ಕಾಮಗಾರಿ ಪ್ರಗತಿಯನ್ನು ಮೌಲ್ಯಮಾಪನ ಮಾಡಲು, ಸವಾಲುಗಳನ್ನು ಚರ್ಚಿಸಲು ಮತ್ತು ಜಿಬಿಎ ಅಡಿಯಲ್ಲಿ ವ್ಯವಸ್ಥೆಗಳನ್ನು ಸುಗಮಗೊಳಿಸಲು ಪಾಲಿಕೆಯ ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ದೆಹಲಿಯಲ್ಲಿ ನಿಯೋಗವೊಂದು ಸಮ್ಮೇಳನದಲ್ಲಿ ಭಾಗವಹಿಸುವುದರಿಂದ ನಗರ ಚಲನಶೀಲತೆ ಮತ್ತು ಮೆಗಾ ಮತ್ತು ಭವಿಷ್ಯದ ನಗರಗಳ ಯೋಜನೆಗಳ ಕುರಿತು ಅಧಿಕಾರಿಗಳಿಗೆ ವಿವರಿಸಲಾಗಿದೆ. ದೆಹಲಿಯಲ್ಲಿ ನಡೆಯುವ ಸಮ್ಮೇಳನವು ಯಾವುದೇ ಹಣದ ಬೇಡಿಕೆಯಲ್ಲದೆ, ಸಾರ್ವಜನಿಕ ಸಾರಿಗೆ, ಪ್ರಾದೇಶಿಕ ಕ್ಷಿಪ್ರ ಸಾರಿಗೆ, ಕ್ಲಸ್ಟರ್‌ಗಳು ಮತ್ತು ನಗರಗಳ ಕುರಿತು ಚರ್ಚೆ ನಡೆಸುವುದಾಗಿದೆ ಎಂದು ತಿಳಿಸಿದ್ದಾರೆ.
ನಗರದ ರಸ್ತೆಗುಂಡಿಗಳನ್ನು ಅಕ್ಟೋಬರ್ 31ರೊಳಗೆ ಮುಚ್ಚುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು, ಗಡುವಿನೊಳಗೆ ಸಮಸ್ಯೆ ಬಗೆಹರಿಸುವಲ್ಲಿ ಪಾಲಿಕೆ ವಿಫಲವಾಗಿದೆ. ಸಿಬ್ಬಂದಿಗಳು ಸಮೀಕ್ಷೆಯಲ್ಲಿ ತೊಡಗಿರುವುದರಿಂದ, ಆಗಾಗ್ಗೆ ಮಳೆಯಾಗುತ್ತಿರುವುದರಿಂದ ಕೆಲಸ ಪೂರ್ಣಗೊಂಡಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಏತನ್ಮಧ್ಯೆ ನಗರದ ಕಾಮಗಾರಿ ಹಾಗೂ ರಸ್ತೆ ಗುಂಡಿ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಉಪಮುಖ್ಯಮಂತ್ರಿ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಅವರು ಪ್ರತೀನಿತ್ಯ ಮೇಲ್ವಿಚಾರಣೆ ಮಾಡುತ್ತಿದ್ದಾರೆಂದು ಮೂಲಗಳು ತಿಳಿಸಿವೆ.