ಬೆಂಗಳೂರು: ನಗರದ ಅತ್ತಿಗುಪ್ಪೆ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಭದ್ರತಾ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಪ್ರಯಾಣಿಕರು ಪರದಾಡಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಭದ್ರತಾ ಸಿಬ್ಬಂದಿಗಳು ನಿಗದಿತ ಸಮಯಕ್ಕೂ ಮುನ್ನವೇ ನಮ್ಮ ಮೆಟ್ರೋ ಪ್ರವೇಶ ದ್ವಾರವನ್ನು ಮುಚ್ಚಿದ್ದು, ಸಿಬ್ಬಂದಿಗಳ ಬೇಜವಾಬ್ದಾರಿ ವರ್ತನೆಗೆ ಪ್ರಯಾಣಿಕರು ತೀವ್ರವಾಗಿ ಕಿಡಿಕಾರಿದ್ದಾರೆ.
ಘಟನೆ ವೇಳೆ ಪ್ರಯಾಣಿಕರೊಬ್ಬರು ಸಿಬ್ಬಂದಿಯ ಜೊತೆ ವಾಗ್ವಾದ ನಡೆಸಿದ್ದು, ಈ ಕುರಿತ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಮಂದಿ ಮೆಟ್ರೋ ಸಿಬ್ಬಂದಿಗಳ ವಿರುದ್ಧ ಕಿಡಿಕಾರಿದ್ದಾರೆ.
ರಾತ್ರಿ 10 ಗಂಟೆ ಸುಮಾರಿಗೆ ರಂಜಿತ್ ಎನ್ನುವ ಪ್ರಯಾಣಿಕರು ಅತ್ತಿಗುಪ್ಪೆ ಮೆಟ್ರೋದಿಂದ ಇಂದಿರಾನಗರಕ್ಕೆ ತೆರಳಬೇಕಿತ್ತು. ಆದರೆ, ಮೆಟ್ರೋ ನಿಲ್ದಾಣದ ಗೇಟ್ ‘ಎ’ ಭಾಗದಲ್ಲಿ ಭದ್ರತಾ ಸಿಬ್ಬಂದಿ ಸ್ಕ್ಯಾನರ್ ತೆರವುಗೊಳಿಸಿ, ಗೇಟ್ ಮುಚ್ಚಿದ್ದು, ಒಳ ಪ್ರವೇಶಕ್ಕೆ ನಿರಾಕರಿಸಿದ್ದಾರೆ.
ಅವಧಿ ಮುಗಿಯುವ ಮೊದಲು ಪ್ರವೇಶ ನಿರಾಕರಣೆ ಮಾಡಿದ ಬಗ್ಗೆ ರಂಜಿತ್ ಪ್ರಶ್ನಿಸಿದಾಗ ಭದ್ರತಾ ಸಿಬ್ಬಂದಿ, ಪ್ರೋಟೋಕಾಲ್ ಪ್ರಕಾರ, ಕಾರ್ಯಾಚರಣೆಯ ನಿಯಮಗಳನ್ನು ಉಲ್ಲೇಖಿಸಿಸಿದ್ದಾರೆ. ನಗರದ ಮೆಟ್ರೋ ನಿಲ್ದಾಣಗಳಲ್ಲಿ ರಾತ್ರಿ 10 ಗಂಟೆಗೆ ಒಂದ ಪ್ರವೇಶ ದ್ವಾರವನ್ನು ಹೊರತುಪಡಿಸಿ ಎಲ್ಲಾ ಪ್ರವೇಶದ್ವಾರಗಳನ್ನು ಮುಚ್ಚಲಾಗುತ್ತದೆ ಎಂದು ಹೇಳಿದ್ದಾರೆ. ಈ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ. ಸ್ಥಳದಲ್ಲಿದ್ದ ಇತರ ಪ್ರಯಾಣಿಕರೂ ಸಹ ಭದ್ರತಾ ಸಿಬ್ಬಂದಿಯ ವರ್ತನೆಗೆ ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ.
ಕೆಲವರು ಮೆಟ್ರೋ ಸಿಬ್ಬಂದಿಗಳ ದುರ್ವರ್ತನೆ ವಿರುದ್ಧ ಕಿಡಿಕಾರಿದ್ದಾರೆ. 45 ನಿಮಿಷಗಳಿಗಿಂತ ಮುಂಚಿತವಾಗಿ ಪ್ರವೇಶ ನಿರ್ಬಂಧಿಸಿದರೆ ರಾತ್ರಿ 11 ಗಂಟೆಯವರೆಗೆ ಮೆಟ್ರೋ ತೆರೆದಿರುತ್ತದೆ ಎಂದು ಏಕೆ ಜಾಹೀರಾತು ನೀಡುತ್ತೀರಿ ಎಂದು ಪ್ರಶ್ನಿಸಿದ್ದಾರೆ.
ಹಲವು ನಿಲ್ದಾಣಗಳಲ್ಲಿ, ರಾತ್ರಿ 10 ಗಂಟೆಯ ನಂತರ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವುದರಿಂದ, ಸಂಪನ್ಮೂಲಗಳ ವ್ಯರ್ಥವನ್ನು ತಪ್ಪಿಸಲು ಬಹು ಪ್ರವೇಶದ್ವಾರಗಳನ್ನು ಬಂದ್ ಮಾಡಿ, ಒಂದು ದ್ವಾರವನ್ನು ಮಾತ್ರ ತೆರೆಯಲಾಗಿರುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಗಮನಗಳು ತೆರೆದಿರುತ್ತವೆ. ಸಾಂಕ್ರಾಮಿಕ ರೋಗದಿಂದಲೂ ಈ ವ್ಯವಸ್ಥೆ ಜಾರಿಯಲ್ಲಿದೆ ಎಂದು ಮತ್ತೊಬ್ಬ ಎಕ್ಸ್ ಬಳಕೆದಾರ ಲಿಂಗರಾಜು ಬಿ ಅವರು ಹೇಳಿದ್ದಾರೆ.
ಆದಾಗ್ಯೂ, ಮಹಿಳಾ ಹಕ್ಕುಗಳ ಕಾರ್ಯಕರ್ತೆ ಬೃಂದಾ ಅಡಿಗೆ ಅವರು ಸಿಬ್ಬಂದಿಯ ನಡವಳಿಕೆಯನ್ನು ದುರಹಂಕಾರ ಎಂದು ಕರೆದಿದ್ದಾರೆ.
ಮೆಟ್ರೋ ಸೇವೆಗಳನ್ನು ಪ್ರಯಾಣಿಕರಿಗಾಗಿ ನಡೆಸಲಾಗುತ್ತಿದೆಯೇ ಅಥವಾ ಉದ್ಯೋಗಿಗಳ ಅನುಕೂಲಕ್ಕಾಗಿ ನಡೆಸಲಾಗುತ್ತಿದೆಯೇ ಎಂದು ಪ್ರಶ್ನಿಸಿದ್ದಾರೆ.
ಈ ಪೋಸ್ಟ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಟ್ಯಾಗ್ ಮಾಡಿರುವ ಅವರು, ಮೆಟ್ರೋ ಸಿಬ್ಬಂದಿಗೆ ಮರು ತರಬೇತಿ ನೀಡಬೇಕು, ಅಗತ್ಯವಿದ್ದರೆ ಕೆಲಸದ ಸಮಯವನ್ನು ಪರಿಷ್ಕರಿಸಬೇಕು ಮತ್ತು ಕೊನೆಯ ರೈಲು ಬರುವವರೆಗೆ ಎಲ್ಲಾ ನಿಲ್ದಾಣದ ಪ್ರವೇಶದ್ವಾರಗಳು ತೆರೆದಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.