ಬೆಂಗಳೂರು: ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಗುರುವಾರ 8ನೇ ದಿನಕ್ಕೆ ಕಾಲಿಟ್ಟಿದೆ.
ಈ ಮಧ್ಯೆ ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಬೆಳಗಾವಿಯಲ್ಲಿ ರೈತರ ಪ್ರತಿಭಟನೆ ಬಗ್ಗೆ ಸುದೀರ್ಘವಾಗಿ ಚರ್ಚೆ ಆಗಿದೆ. ಸಂಪುಟ ಸಭೆಗೂ ಮೊದಲು ಎಂಬಿ ಪಾಟೀಲ್ ಹಾಗೂ ಎಚ್ ಕೆ ಪಾಟೀಲ್ ಅವರಿಗೆ ರೈತರ ಜೊತೆಗೆ ಮಾತುಕತೆ ನಡೆಸಲು ಸೂಚಿಸಿದ್ದೆ. ಇಬ್ಬರು ಹೋಗಿ ಮಾತುಕತೆ ನಡೆಸಿದ್ದಾರೆ" ಎಂದು ವಿವರಿಸಿದರು.
ನಮ್ಮದು ರೈತರ ಪರವಾದ ಸರ್ಕಾರ. ಹೀಗಾಗಿ ರೈತರ ಪ್ರತಿಭಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಸಕ್ಕರೆ ಕಾರ್ಖಾನೆ ಮಾಲೀಕರಾಗಿದ್ದರಿಂದ ಅವರು ಪ್ರತಿಭಟನಾ ಸ್ಥಳಕ್ಕೆ ಹೋಗಿಲ್ಲ. ಬದಲಾಗಿ ಜಿಲ್ಲಾಧಿಕಾರಿ ಹಾಗೂ ಎಸ್ ಪಿ ಅವರು ಸ್ಥಳಕ್ಕೆ ಹೋಗಿ ರೈತರ ಜೊತೆಗೆ ಮಾತುಕತೆ ನಡೆಸಿದ್ದಾರೆ ಎಂದರು.
ಕಬ್ಬಿಗೆ ಎಫ್ ಆರ್ ಪಿ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಈ ವರ್ಷವೂ ಕಳೆದ ಮೇ 6 ರಂದು ಎಫ್ ಆರ್ ಪಿ ನಿಗದಿ ಮಾಡಲಾಗಿದೆ. 25-26 ನೇ ಸಾಲಿನಲ್ಲಿ 10.25 ಇಳುವರಿಗೆ 3550 ಪ್ರತಿ ಟನ್ ಗೆ ನಿಗದಿ ಮಾಡಲಾಗಿದೆ. ಇದರಲ್ಲಿ ಸಾರಿಗೆ, ಕಟಾವು ಒಳಗೊಂಡಿದೆ. ಇಳುವರಿ 9.5 ಕ್ಕಿಂತ ಕಡಿಮೆ ಇದ್ದರೆ 3290.50 ಕೊಡಬೇಕು ಎಂದು ಕೇಂದ್ರ ತೀರ್ಮಾನ ಮಾಡದೆ" ಎಂದು ವಿವರ ನೀಡಿದರು.
ಪ್ರಧಾನಿ ಭೇಟಿಗೆ ಪತ್ರ ಬರೆಯುತ್ತೇನೆ
ಎಫ್ ಆರ್ ಪಿ ನಿಗದಿ ಬಗ್ಗೆ ಚರ್ಚಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಭೇಟಿಗೆ ಸಮಯ ಕೇಳುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ನಾಳೆ ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೆಂಗಳೂರಿನ ಎಲ್ಲಾ ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ಕರೆದಿದ್ದೇನೆ. ಅಲ್ಲಿ ರೈತರ ಪ್ರತಿಭಟನೆ ಮತ್ತು ಹೆಚ್ಚಿನ ಎಫ್‌ಆರ್‌ಪಿ ಬೇಡಿಕೆಯ ಬಗ್ಗೆ ಚರ್ಚಿಸುತ್ತೇನೆ ಎಂದು ಸಿಎಂ ಹೇಳಿದರು.
ನಂತರ ಮಧ್ಯಾಹ್ನ 1.30 ಕ್ಕೆ ರೈತ ಮುಖಂಡರ ಸಭೆಯನ್ನು ಕರೆಯಲಾಗಿದೆ. ಪ್ರತಿಭಟನೆ ನಡೆಯುತ್ತಿರುವ ಜಿಲ್ಲೆಯ ರೈತ ಮುಖಂಡರನ್ನೂ ಸಭೆಗೆ ಆಹ್ವಾನಿಸಲಾಗಿದೆ. ಸಭೆಯ ನಂತರ ಪ್ರಧಾನಿ ಮೋದಿಗೆ ಪತ್ರ ಬರೆಯುತ್ತೇನೆ. ಭೇಟಿಗೆ ಅವಕಾಶ ಕೊಡಬೇಕು ಎಂದು ಕೋರುತ್ತೇನೆ. ಸಮಯ ನೀಡಿದರೆ ಪ್ರಧಾನಿಯನ್ನು ನೇರವಾಗಿ ಭೇಟಿ ಮಾಡಿ ಅವರಿಗೆ ರೈತರ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ ಚರ್ಚಿಸುತ್ತೇನೆ ಎಂದರು.
ಕಳೆದ ವರ್ಷ ಇಡೀ ದೇಶಕ್ಕೆ ಕೇವಲ 10 ಲಕ್ಷ ಮೆಟ್ರಿಕ್ ಟನ್ ರಫ್ತು ಮಾಡಲು ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಕರ್ನಾಟಕವೊಂದರಲ್ಲೆ 41 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಾಗಿತ್ತು. ಈ ಕಾರಣದಿಂದಲೂ ರೈತರಿಗೆ ಸಮಸ್ಯೆಯಾಗುತ್ತಿದೆ. ಎಥೆನಾಲ್ ವಿಚಾರದಲ್ಲೂ ಸಹ ಕೇಂದ್ರ ಸರ್ಕಾರವು ತಾರತಮ್ಯ ಧೋರಣೆಯನ್ನು ಅನುಸರಿಸುತ್ತಿದೆ ಎಂದರು.
ಕರ್ನಾಟಕದಲ್ಲಿ 270 ಕೋಟಿ ಲೀಟರ್ ಎಥೆನಾಲ್ ಉತ್ಪಾದನಾ ಸಾಮರ್ಥ್ಯ ಇದ್ದರೂ ಸಹ 2024-25 ರಲ್ಲಿ 47 ಕೋಟಿ ಲೀಟರ್‌ಗಳನ್ನು ತೈಲ ಕಂಪನಿಗಳಿಗೆ ಖರೀದಿ ಮಾಡಲು ಹಂಚಿಕೆ ಮಾಡಲಾಗಿದೆ. ಇದು ಕೇಂದ್ರವು ಕರ್ನಾಟಕದ ರೈತರೊಂದಿಗೆ ಆಡುತ್ತಿರುವ ಆಟಕ್ಕೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ರಾಜ್ಯ ಸರ್ಕಾರವು 11 ಸ್ಥಳಗಳಲ್ಲಿ ಭೌತಿಕ ತೂಕದ ಯಂತ್ರಗಳನ್ನು ಸ್ಥಾಪಿಸಲು ನಿರ್ಧರಿಸಿದೆ ಮತ್ತು ಎಂಟು ಸ್ಥಳಗಳಿಗೆ ಟೆಂಡರ್‌ಗಳನ್ನು ಕರೆದಿದೆ. ಇದಲ್ಲದೆ, ಅಳತೆ, ಕೊಯ್ಲು ಮತ್ತು ಬಿಲ್ಲಿಂಗ್ ಪರೀಕ್ಷೆಗಾಗಿ ಸಮಿತಿಯನ್ನು ರಚಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಪ್ರತಿಪಕ್ಷ ಬಿಜೆಪಿ ವಿರುದ್ಧ ಸಿಎಂ ಕಿಡಿ
ರೈತರ ಮುಗ್ಧತೆಯನ್ನು ವಿರೋಧ ಪಕ್ಷದವರು ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ರೈತರು ಯಾವುದೇ ಕಾರಣಕ್ಕೂ ರೈತ ದ್ರೋಹಿಯಾದ ಬಿಜೆಪಿಯವರ ಮರಳು ಮಾತುಗಳಿಗೆ ಬಲಿಯಾಗಬಾರದು. ನಮ್ಮ ಸರ್ಕಾರವು ಮಾತುಕತೆಯಲ್ಲಿ ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆಗಳಲ್ಲಿ ನಂಬಿಕೆ ಇಟ್ಟುಕೊಂಡಿದೆ ಮತ್ತು ನಿರಂತರವಾಗಿ ರೈತ ಪರವಾದ ತೀರ್ಮಾನಗಳನ್ನು ಕೈಗೊಳ್ಳುತ್ತಾ ಬಂದಿದೆ ಎಂದರು.