ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ 5 ಕೆ.ಜಿ. ಅಕ್ಕಿ ಬದಲು ಇಂದಿರಾ ಆಹಾರ ಕಿಟ್ ಘೋಷಿಸಿದ್ದ ಸರ್ಕಾರ, ಅದರಲ್ಲಿ ನೀಡಲು ಉದ್ದೇಶಿಸಿದ್ದ ಆಹಾರ ಧಾನ್ಯಗಳನ್ನು ಪರಿಷ್ಕರಣೆ ಮಾಡಿದೆ.
ಗುರುವಾರ ನಡೆದ ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಂಡಿದ್ದು, ‘ಇಂದಿರಾ ಪೌಷ್ಟಿಕ ಆಹಾರ ಕಿಟ್’ ಬದಲು ಇಂದಿರಾ ಕಿಟ್ ಎಂದು ತೀರ್ಮಾನಿಸಿದೆ. ಅಲ್ಲದೆ, ಕಿಟ್‌ನಲ್ಲಿ ಇರಬೇಕಿದ್ದ ಹೆಸರುಕಾಳಿನ ಬದಲು ಹೆಚ್ಚುವರಿ ತೊಗರಿಬೇಳೆ ನೀಡಲು ನಿರ್ಧರಿಸಿದೆ.
ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ಬಿಪಿಎಲ್ ಮತ್ತು ಅಂತ್ಯೋದಯ ಅನ್ನ ಕಾರ್ಡುದಾರರಿಗೆ ತಲಾ 5 ಕೆ.ಜಿ. ಕೊಡುವ ಅನ್ನಭಾಗ್ಯ ಯೋಜನೆಗೆ ರಾಜ್ಯ ಸರ್ಕಾರವು 6,426 ಕೋಟಿ ರೂ. ಅನುದಾನ ನಿಗದಿಪಡಿಸಿತ್ತು. ಅಕ್ಕಿಯ ಬದಲು ತೊಗರಿಬೇಳೆ, ಹೆಸರುಕಾಳು, ಅಡುಗೆ ಎಣ್ಣೆ, ಸಕ್ಕರೆ, ಉಪ್ಪು ಒಳಗೊಂಡ ಇಂದಿರಾ ಕಿಟ್‌ನ್ನು 6,119 ಕೋಟಿ ರೂ.ನಲ್ಲಿ ಕೊಡಲು ನಿರ್ಧರಿಸಿದ್ದೆವು.
ಇದರಿಂದ 307 ಕೋಟಿ ರೂ. ಉಳಿಸಿದಂತೆಯೂ ಆಗಿತ್ತು. ರಾಜ್ಯದ ತೊಗರಿ ಬೆಳೆಗಾರರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಮತ್ತು ಪಡಿತರ ಚೀಟಿದಾರರಿಗೆ ಹೆಚ್ಚಿನ ಪ್ರೋಟಿನ್‌ಯುಕ್ತ ಆಹಾರ ಧಾನ್ಯ ಒದಗಿಸಲು ಹೆಸರುಕಾಳಿನ ವೆಚ್ಚದ ಪ್ರಮಾಣಕ್ಕೆ ಅನುಗುಣವಾಗಿ ಹೆಚ್ಚುವರಿಯಾಗಿ ತೊಗರಿಬೇಳೆಯನ್ನೇ ವಿತರಿಸುವ ನಿರ್ಧಾರಕ್ಕೆ ಬರಲಾಗಿದೆ ಎಂದರು.
ಈ ಹಿಂದೆ ಇಂದಿರಾ ಕಿಟ್‌ನಲ್ಲಿ 1 ಕೆ.ಜಿ. ತೊಗರಿಬೇಳೆ, 1 ಕೆ.ಜಿ. ಹೆಸರುಕಾಳು, 1 ಲೀಟರ್ ಅಡುಗೆ ಎಣ್ಣೆ, 1 ಕೆ.ಜಿ. ಸಕ್ಕರೆ, 1 ಕೆ.ಜಿ. ಉಪ್ಪು ಕೊಡಲು ನಿರ್ಧರಿಸಿತ್ತು. ಇದೀಗ 1 ಹೆಸರುಕಾಳಿನ ಬದಲು 1 ಮತ್ತು 2 ಸದಸ್ಯರಿರುವ ಕುಟುಂಬಕ್ಕೆ ಕಾಲು ಕೆ.ಜಿ. ಹೆಚ್ಚುವರಿ ತೊಗರಿಬೇಳೆ, 3 ಮತ್ತು 4 ಸದಸ್ಯರಿರುವ ಕುಟುಂಬಕ್ಕೆ ಅರ್ಧ ಕೆ.ಜಿ. ಹೆಚ್ಚುವರಿ ತೊಗರಿಬೇಳೆ, 5ಕ್ಕೂ ಹೆಚ್ಚು ಸದಸ್ಯರಿರುವ ಕುಟುಂಬಕ್ಕೆ ಮುಕ್ಕಾಲು ಕೆ.ಜಿ. ಹೆಚ್ಚುವರಿ ತೊಗರಿಬೇಳೆ ವಿತರಣೆ ಮಾಡಲಾಗುತ್ತದೆ.
ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಇತರೆ ಸಚಿವರು ಉತ್ತರ ಕರ್ನಾಟಕ ಭಾಗದಲ್ಲಿ ತೊಗರಿ ಪ್ರಮುಖ ಬೆಳೆಯಾಗಿರುವುದರಿಂದ ರೈತರ ಹಿತ ಕಾಪಾಡಲು ಹೆಸರುಕಾಳಿನ ಬದಲಿಗೆ ತೊಗರಿಬೇಳೆ ನೀಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ.
ಹೆಸರುಕಾಳಿಗಾಗಿ ನಿಗದಿಪಡಿಸಿದ್ದ ವೆಚ್ಚದಲ್ಲೇ ತೊಗರಿಬೇಳೆಯನ್ನು ಖರೀದಿಸಿ ವಿತರಿಸಲಾಗುವುದು. ಹಾಗಾಗಿ ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೆಚ್ಚುವರಿ ಹೊರೆ ಬೀಳುವುದಿಲ್ಲ. ಈ ಹಿಂದೆ ಅನುಮೋದಿಸಲಾದ 6119.52 ಕೋಟಿ ರೂ. ವೆಚ್ಚದಲ್ಲೇ ಪರಿಷ್ಕೃತ ಇಂದಿರಾ ಫುಡ್ಕಿಟ್ ನೀಡಲಾಗುವುದು.