ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳ ಮೊಬೈಲ್ ಬಳಕೆ ವಿಚಾರಕ್ಕೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಗರಂ ಆಗಿದ್ದಾರೆ. ಜೈಲು ಅಧಿಕಾರಿಗಳ ವಿರುದ್ಧ ಕಿಡಿಕಾರಿರುವ ಗೃಹ ಸಚಿವ ಇಂತ ನಾನ್ಸೆನ್ ಗಳನ್ನ ಸಹಿಸಲ್ಲ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ಪದೇಪದೇ ಜೈಲಿನಲ್ಲಿ ಹೀಗಾಗುತ್ತದೆ. ಈ ಹಿಂದೆಯೂ ಕ್ರಮ ತೆಗೆದುಕೊಂಡಿದ್ದೆವು. ಈ ಬಗ್ಗೆ ಕಾರಗೃಹ ಎಡಿಜಿಪಿ ದಯಾನಂದ್ ಜತೆ ಮಾತನಾಡಿದ್ದೇನೆ. ಪದೇ ಇದೇ ಇದು ನಡೆಯುತ್ತಿದೆ. ಯಾರು ತಪ್ಪಿತಸ್ತರೋ ಅವರ ವಿರುದ್ಧ ಕ್ರಮ ಆಗಲೇಬೇಕು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು ದಯಾನಂದ್ ಅವರಿಂದ ವರದಿ ಕೇಳಿದ್ದೇನೆ. ದಯಾನಂದ್ ಅವರು ವರದಿ ಕೊಟ್ಟ ಮೇಲೆ ಪರಿಶೀಲನೆ ನಡೆಸುತ್ತೇವೆ. ಕೇವಲ ಉಗ್ರನ ಕೈಯಲ್ಲಿ ಮಾತ್ರವಲ್ಲ, ಯಾರ ಕೈಯಲ್ಲೂ ಮೊಬೈಲ್ ಇರಬಾರದು. ತುರ್ತಾಗಿ ನಾನೇ ಅಧಿಕಾರಿಗಳ ಸಭೆ ನಡೆಸಿ ಲೋಪದೋಷಗಳಿಗೆ ಸಂಬಂಧಿದಂತೆ ಚರ್ಚೆ ನಡೆಸುತ್ತೇನೆ ಎಂದರು.
ಆರ್‌ಎಸ್‌ಎಸ್ ನೋಂದಣಿಯಾಗಿಲ್ಲ ಎಂಬ ಚರ್ಚೆ ನಡೆಯುತ್ತಿರುವ ಕಾಂಗ್ರೆಸ್ ನಾಯಕರ ವಿರುದ್ಧ RSS ಮುಖ್ಯಸ್ಥ ಮೋಹನ್ ಭಾಗವತ್ ವಾಗ್ದಾಳಿ ನಡೆಸಿದರು. ಆರ್‌ಎಸ್‌ಎಸ್ ಶತಮಾನೋತ್ಸವ ಹಿನ್ನೆಲೆ ಬೆಂಗಳೂರಿನ ಹೊಸಕೆರೆಹಳ್ಳಿಯ PES ಕಾಲೇಜು ಸಭಾಂಗಣದಲ್ಲಿ ನಿನ್ನೆ ಮೋಹನ್ ಭಾಗವತ್ ಮಾಡನಾಡಿದ್ದರು. 'ನಮ್ಮ ಹೋರಾಟ ಬ್ರಿಟೀಷರ ವಿರುದ್ಧ ಇತ್ತು. ದೇಶಕ್ಕೆ ಸ್ವಾತಂತ್ರ‍್ಯ ಬಂದ ನಂತರ ಸಂಘಗಳನ್ನು ನೋಂದಣಿ ಮಾಡಬೇಕೆಂದು ಭಾರತ ಸರ್ಕಾರ ಕಡ್ಡಾಯಗೊಳಿಸಲಿಲ್ಲ. ನಮ್ಮನ್ನು ಸಾಮಾನ್ಯ ನಂಬಿಕೆಗಳನ್ನು ಹಂಚಿಕೊಳ್ಳುವ ಮತ್ತು ಸ್ವಯಂಪ್ರೇರಣೆಯಿಂದ ಒಟ್ಟಾಗಿ ಕೆಲಸ ಮಾಡುವ ಜನರ ಗುಂಪು ಎಂದು ವರ್ಗೀಕರಿಸಲಾಗಿದೆ. ನಮ್ಮದು ಮಾನ್ಯತೆ ಪಡೆದ ಸಂಸ್ಥೆಯಾಗಿದೆ. ಆರ್‌ಎಸ್‌ಎಸ್ ಅನ್ನು ವ್ಯಕ್ತಿಗಳ ಸಂಸ್ಥೆಯಾಗಿ ಪರಿಗಣಿಸಲಾಗಿದ್ದು ಆದಾಯ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ ಎಂದರು. ಇಲ್ಲಿ ನೋಂದಣಿಯಾಗದ ಹಲವು ವಿಷಯಗಳಿವೆ. ಹಿಂದೂ ಧರ್ಮವೂ ಸಹ ನೋಂದಣಿಯಾಗಿಲ್ಲ ಎಂದು ಅವರು ಟೀಕಿಸಿದರು.
ಮೈಸೂರಿನ ಸರಗೂರಿನಲ್ಲಿ ದನಗಳು ಮತ್ತು ಓರ್ವ ವ್ಯಕ್ತಿಯನ್ನು ಕೊಂದು ಆತಂಕ ಸೃಷ್ಟಿಸಿದ್ದ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. ಕಂದಲಿಕೆ ಹೋಬಳಿ ಹೊಸಕೋಟೆ ಗ್ರಾಮದ ಟ್ರೆಂಚ್ ಬಳಿ 11 ರಿಂದ 12 ವರ್ಷ ವಯಸ್ಸಿನ ಗಂಡು ಹುಲಿ ಸೆರೆಯಾಗಿದೆ. ಪ್ರಸ್ತುತ ಹುಲಿಯನ್ನು ಮೈಸೂರು ತಾಲ್ಲೂಕಿನ ಕೂರ್ಗಳ್ಳಿಯಲ್ಲಿರುವ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಹುಲಿ ಸೆರೆ ಬಗ್ಗೆ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಜನ, ಜಾನುವಾರುಗಳ ಸಾವಿಗೆ ಕಾರಣವಾಗಿದ್ದ ಗಂಡು ಹುಲಿಯನ್ನು ಸೆರೆ ಹಿಡಿಯಲಾಗಿದೆ ಎಂದರು. ಮೃತ ವ್ಯಕ್ತಿಗಳ ಮರಣೋತ್ತರ ಪರೀಕ್ಷಾ ವರದಿ ಮತ್ತು ಸೆರೆ ಹಿಡಿದ ಹುಲಿಯ DNA ಮಾದರಿ ಎರಡನ್ನೂ ಪರಿಶೀಲಿಸಿ, ಇದೇ ಹುಲಿ ಜನರ ಸಾವಿಗೆ ಕಾರಣವಾಗಿದ್ದೇ ಎಂಬುದನ್ನು ಖಚಿತಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.. ಮತ್ತೊಂದೆಡೆ, ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ತಾಲೂಕಿನ ಸಾತನೂರು ಅರಣ್ಯ ವ್ಯಾಪ್ತಿಯ ಕೂನೂರು ಗ್ರಾಮದ ಬಳಿಯ ಅರ್ಕಾವತಿ ನದಿಯ ಹಾರೋಬೆಲೆ ಡ್ಯಾಂ ಹಿನ್ನೀರಿನಲ್ಲಿ ಎರಡು ಕಾಡಾನೆಗಳು ಮುಳುಗಿ ಸಾವನ್ನಪ್ಪಿವೆ. ಆಹಾರ ಅರಸಿ ನಾಡಿಗೆ ಬಂದಿದ್ದ ಕಾಡಾನೆಗಳು ನದಿ ದಾಟುವಾಗ ಜೊಂಡಿಗೆ ಸಿಲುಕಿ ಮುಳುಗಿ ಮೃತಪಟ್ಟಿವೆ.
ರಾಜ್ಯ ಸರ್ಕಾರ ಎರಡು ವರ್ಷದಲ್ಲಿ ಒಂದು ಲಕ್ಷ ಕೋಟಿ ರೂಪಾಯಿಗಳನ್ನು ನೇರವಾಗಿ ರಾಜ್ಯದ ಜನರ ಜೇಬಿಗೆ ಹಾಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಉದ್ಘಾಟಿಸಿ, ಹಲವು ಅಭಿವೃದ್ಧಿ ಕಾರ್ಯಕ್ರಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, ನಾವು ನುಡಿದಂತೆ ನಡೆದು ಜನರ ಜೇಬಿಗೆ ಹಣ ಹಂಚುತ್ತಿದ್ದರೆ, ಸುಳ್ಳನ್ನೇ ಮನೆ ದೇವರು ಮಾಡಿಕೊಂಡಿರುವ ಬಿಜೆಪಿಯವರು ಮಾನ ಮರ್ಯಾದೆ ಬಿಟ್ಟು ರಾಜ್ಯದ ಜನರಿಗೆ ಸುಳ್ಳುಗಳನ್ನು ಹಂಚುತ್ತಿದ್ದಾರೆ. ಲಜ್ಜೆಗೆಟ್ಟು ಮತಗಳ್ಳತನಕ್ಕೆ ಇಳಿದು ಬಿಜೆಪಿಗರು ಸಿಕ್ಕಿಬಿದ್ದಿದ್ದಾರೆ ಎಂದರು. FRP ಮತ್ತು MSP ಎರಡನ್ನೂ ನಿಗದಿ ಮಾಡೋದು ಕೇಂದ್ರದ ಬಿಜೆಪಿ ಸರ್ಕಾರ. ಕಬ್ಬು ಬೆಳೆಗಾರರಿಗೆ ದ್ರೋಹ ಬಗೆದದ್ದು ಪ್ರಹ್ಲಾದ್ ಜೋಶಿ. ಆದರೆ, ವಿಜಯೇಂದ್ರ ತಮ್ಮದೇ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಮಾಡಿದ ದ್ರೋಹವನ್ನು ಮರೆಮಾಚಿ ಬೆಳಗಾವಿಗೆ ಹೋಗಿ ಪ್ರತಿಭಟನೆಯ ಡ್ರಾಮಾ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದರು.