ಕೂಡ್ಲಿಗೆ/ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಸಾರ್ವಜನಿಕವಾಗಿ ನೀಡಿದ್ದ ಹೇಳಿಕೆಗಳು ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರನ್ನು ನೋಡಿದಾಕ್ಷಣ ಬದಲಿಸಿದ ಸ್ವರ ಬೆಳವಣಿಗೆಗಳು ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಸಾಧ್ಯತೆಯ ಬಗ್ಗೆ ಚರ್ಚೆಗಳು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಕುಡ್ಲಿಗಿಯಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲು ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ, ಸಿದ್ದರಾಮಯ್ಯ ಆರಂಭದಲ್ಲಿ 5 ವರ್ಷವೂ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆಂದು ಹೇಳಿದರು. ಆದರೆ ಕೆಲವೇ ಕ್ಷಣಗಳಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಾಧ್ಯಮಗಳ ಕಡೆಗೆ ನೋಡಿ ನಮ್ಮ ಸರ್ಕಾರ 5 ವರ್ಷದ ಅಧಿಕಾರಾವಧಿ ಪೂರೈಸುತ್ತದೆ ಎಂದು ಹೇಳಿದರು.
ಸ್ವರ ಬದಲಿಸಿದ ಈ ಹೇಳಿಕೆ ನಾಯಕತ್ವ ಬದಲಾವಣೆಯ ಕುರಿತು ಕಾಂಗ್ರೆಸ್‌ನಲ್ಲಿನ ಭಿನ್ನಾಭಿಪ್ರಾಯಗಳು ಬಹಿರಂಗವಾಗವಂತೆ ಮಾಡಿದೆ.
ಸಿದ್ದರಾಮಯ್ಯ ಅವರ ಹೇಳಿಕೆ ಮುಂಬರುವ ಚುನಾವಣೆ ವೇಳೆ ರಾಜ್ಯ ರಾಜಕೀಯ ಮತ್ತು ಕಾಂಗ್ರೆಸ್‌ನ ವರ್ಚಸ್ಸು ಎರಡರ ಮೇಲೂ ಸಂಭಾವ್ಯ ಪರಿಣಾಮ ಬೀರಲಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಏತನ್ಮಧ್ಯೆ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದರು. ಬಿಹಾರ ಚುನಾವಣೆಯಲ್ಲಿ ಬಿಜೆಪಿ "ವೋಟ್ ಚೋರಿ" ಪದ್ಧತಿಯನ್ನು ಮುಂದುವರೆಸಿದೆ ಎಂದು ಆರೋಪಿಸಿದರು,
ಬಿಜೆಪಿ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ದುರ್ಬಲಗೊಳಿಸಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಬ್ಬು ರೈತರಿಗೆ ದ್ರೋಹ ಮಾಡಿದ್ದಾರೆ. ಎಫ್‌ಆರ್‌ಪಿ ಮತ್ತು ಎಂಎಸ್‌ಪಿ ಎರಡನ್ನೂ ನಿಗದಿ ಮಾಡೋದು ಕೇಂದ್ರದ ಬಿಜೆಪಿ ಸರ್ಕಾರ. ಕಬ್ಬು ಬೆಳೆಗಾರರಿಗೆ ದ್ರೋಹ ಬಗೆದದ್ದು ಪ್ರಹ್ಲಾದ್ ಜೋಶಿ. ಆದರೆ, ವಿಜಯೇಂದ್ರ ತಮ್ಮದೇ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಮಾಡಿದ ದ್ರೋಹವನ್ನು ಮರೆಮಾಚಿ ಬೆಳಗಾವಿಗೆ ಹೋಗಿ ಪ್ರತಿಭಟನೆಯ ಡ್ರಾಮಾ ಮಾಡುತ್ತಿದ್ದಾರೆ.
ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ದ್ರೋಹ ಬಗೆದರೂ ರಾಜ್ಯ ಸರ್ಕಾರ ಹೆಚ್ಚುವರಿ ಹಣ ನೀಡಿ ನಮ್ಮ ಕಬ್ಬು ಬೆಳೆಗಾರರನ್ನು ಕಾಪಾಡೊ ಕೆಲಸ ಮಾಡಿದೆ. ಶಾಸಕ ಶ್ರೀನಿವಾಸ್, ಸಂಸದ ತುಕಾರಾಂ ಇಬ್ಬರೂ ಜನರ ಅಭಿವೃದ್ಧಿ ಹೊರತಾಗಿ ಬೇರೇನನ್ನೂ ಕೇಳುವವರಲ್ಲ. ಇವರಿಬ್ಬರನ್ನು ಗೆಲ್ಲಿಸಿದ ಜನತೆಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಈ ಶಾಸಕರು ಮತ್ತು ಸಂಸದರು ನಿಮ್ಮ ಆಸ್ತಿ ಇದ್ದ ಹಾಗೆ. ಇವರನ್ನು ಕಾಪಾಡಿಕೊಳ್ಳಿ ಎಂದು ತಿಳಿಸಿದರು.