ಬೆಂಗಳೂರು: ಸ್ವತಂತ್ರ ಭಾರತದ ಅತ್ಯಂತ ಅಸಮರ್ಥ ಗೃಹ ಸಚಿವ ಅಮಿತ್ ಶಾ ಆಗಿದ್ದು, 12 ಜನರ ಸಾವಿಗೆ ಕಾರಣವಾದ ದೆಹಲಿ ಸ್ಫೋಟವು ಗುಪ್ತಚರ ಇಲಾಖೆಯ ವೈಫಲ್ಯವನ್ನು ಸೂಚಿಸುತ್ತದೆ. ಹೀಗಾಗಿ, ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ಒತ್ತಾಯಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಣಿಪುರ, ಪುಲ್ವಾಮಾ ಮತ್ತು ಪಹಲ್ಗಾಮ್ ಸೇರಿದಂತೆ ದೇಶದಾದ್ಯಂತ ವಿವಿಧೆಡೆ ಭಯೋತ್ಪಾದಕ ದಾಳಿಗಳಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು ಅಮಿತ್ ಶಾ ವಿರುದ್ಧ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ಅಮಿತ್ ಶಾ ಅವರನ್ನು ಅವರ ಬೆಂಬಲಿಗರು 'ಆಧುನಿಕ ಸರ್ದಾರ್ ಪಟೇಲ್' ಎಂದು ಕರೆಯುತ್ತಾರೆ. ಆದರೆ, ಸ್ವತಂತ್ರ ಭಾರತದ ಅತ್ಯಂತ ಅಸಮರ್ಥ ಗೃಹ ಸಚಿವ ಎಂದರೆ ಅದು ಅಮಿತ್ ಶಾ ಎಂದರು.
ಈ ದಾಳಿಗಳಿಗೆ ಹೊಣೆ ಯಾರು? ಗೃಹ ಸಚಿವರಾಗಿರುವ ಅವರೇ ಚುನಾವಣಾ ವೇದಿಕೆಯಲ್ಲಿ ಬಾಂಗ್ಲಾದೇಶಿಗಳು ಭಾರತಕ್ಕೆ ನುಸುಳುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳುತ್ತಾರೆ. ಹಾಗಾದರೆ, ಇದರ ಹೊಣೆ ಯಾರದ್ದು? ವಿರೋಧ ಪಕ್ಷಗಳು ಇದಕ್ಕೆ ಕಾರಣವೇ?' ಎಂದು ಖರ್ಗೆ ಪ್ರಶ್ನಿಸಿದರು.
'ಅವರನ್ನು (ಶಾ) ಆಧುನಿಕ ಸರ್ದಾರ್ ಪಟೇಲ್ ಎಂದು ಕರೆಯಲಾಗುತ್ತದೆ ಮತ್ತು 56 ಇಂಚಿನ ಎದೆಯ ಬಗ್ಗೆ ಪದೇ ಪದೆ ಹೇಳಿಕೊಳ್ಳಲಾಗುತ್ತದೆ. ಅವರು ರಾಜೀನಾಮೆ ನೀಡುವ ಮೊದಲು ಇನ್ನೂ ಎಷ್ಟು ಜನರು ಪ್ರಾಣ ಕಳೆದುಕೊಳ್ಳಬೇಕಾಗುತ್ತದೆ?. 'ಅಮಿತ್ ಶಾ ವಿರುದ್ಧ ಕ್ರಮ ಕೈಗೊಳ್ಳಲು ಮೋದಿ ಏಕೆ ಹೆದರುತ್ತಾರೆ? ಅವರ ಗುಜರಾತ್ ರಹಸ್ಯಗಳು ಬಹಿರಂಗಗೊಳ್ಳುತ್ತವೆ ಎಂದು ಅವರು ಚಿಂತಿತರಾಗಿದ್ದಾರೆಯೇ? ಎಲ್ಲದಕ್ಕೂ ಒಂದು ಮಿತಿ ಇದೆ, ಅವರು ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ. ಬೇರೆ ಯಾವುದೇ ದೇಶವಾಗಿದ್ದರೆ, ಗೃಹ ಸಚಿವರು ಇಷ್ಟೊತ್ತಿಗೆ ರಾಜೀನಾಮೆ ನೀಡುತ್ತಿದ್ದರು. ಗುಪ್ತಚರ ಇಲಾಖೆಯ ವೈಫಲ್ಯವಿದ್ದು, ಅವರು ತಕ್ಷಣವೇ ರಾಜೀನಾಮೆ ನೀಡಬೇಕು' ಎಂದು ಒತ್ತಾಯಿಸಿದರು.
'ಈ ಘಟನೆಗೆ ಕೇಂದ್ರ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆಯೇ?. ಆ ಆರ್‌ಎಸ್‌ಎಸ್- ದೇಶಭಕ್ತರು ಎಲ್ಲಿದ್ದಾರೆ? ಅವರನ್ನು ಗಡಿಗೆ ಕಳುಹಿಸಿ. ಅವರು ದೊಡ್ಡ, ದೊಡ್ಡ ವಿಷಯಗಳನ್ನು ಮಾತನಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅವರು ಏನು ಹೇಳುತ್ತಾರೆ?. ಆಧುನಿಕ ಸರ್ದಾರ್ ಪಟೇಲ್ ಎಲ್ಲಿದ್ದಾರೆ? ಅವರು ಈ ಘಟನೆಯ ಹೊಣೆಯನ್ನು ಹೊರಲಿ' ಎಂದು ಅವರು ಹೇಳಿದರು.
ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರೊಂದು ಸ್ಫೋಟಗೊಂಡು 12 ಜನರು ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಹಲವಾರು ವಾಹನಗಳು ಸುಟ್ಟುಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.