ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗೆ ಕೈದಿಗಳಿಗೆ ಸಿಗುತ್ತಿರುವ ರಾಜಾತಿಥ್ಯದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸರು ಮೂರು ಎನ್ಸಿಆರ್ ಮತ್ತು ಒಂದು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಸಹಾಯಕ ಅಧೀಕ್ಷಕ ಇಮಾಮಾಸಾಬ್ ಮೈಗೇರಿ ಅವರು ಜೈಲರ್ ಗೋಪಿನಾಥ್ ಡಿ ಮೂಲಕ ದೂರು ಸಲ್ಲಿಸಿದ್ದು, ದೂರಿನಲ್ಲಿ ವೈರಲ್ ಆಗಿರುವ ವೀಡಿಯೊಗಳಲ್ಲಿ ನಾಲ್ವರು ವಿಚಾರಣಾಧೀನ ಕೈದಿಗಳು - ಕಾರ್ತಿಕ್, ಧನಂಜಯ, ಮಂಜುನಾಥ್ ವಿ, ಮತ್ತು ಚರಣ್ ರಾವ್ ಬಿ - ಜೈಲಿನ ಬ್ಯಾರಕ್ ಸಂಖ್ಯೆ 8, ಕೊಠಡಿ ಸಂಖ್ಯೆ 7 ರೊಳಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ.
ವೀಡಿಯೊಗಳಲ್ಲಿ, ಕೈದಿಗಳು ಜೈಲಿನ ಆವರಣದೊಳಗೆ ನಿಷೇಧಿತ ವಸ್ತುಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದವರು ಯಾರು? ಮಾಧ್ಯಮಗಳಿಗೆ ಸೋರಿಕೆ ಮಾಡಿದವರು ಯಾರು ಎಂಬುದನ್ನು ತನಿಖೆ ನಡೆಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ, ಪರಪ್ಪನ ಅಗ್ರಹಾರ ಪೊಲೀಸರು ಸೋಮವಾರ ಕರ್ನಾಟಕ ಕಾರಾಗೃಹ ಕಾಯ್ದೆಯ ಸೆಕ್ಷನ್ 42 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚುವರಿಯಾಗಿ, ಶಂಕಿತ ಭಯೋತ್ಪಾದಕ, ಸೀರಿಯಲ್ ರೇಪಿಸ್ಟ್ ಉಮೇಶ್ ರೆಡ್ಡಿ ಮತ್ತು ನಟ ತರುಣ್ ಜೈಲಿನೊಳಗೆ ಮೊಬೈಲ್ ಫೋನ್ ಬಳಸುತ್ತಿರುವ ವಿಡಿಯೋ ಕುರಿತು ಮೂರು ಎನ್‌ಸಿಆರ್‌ಗಳನ್ನು ದಾಖಲಿಸಿಕೊಂಡಿದ್ದಾರೆ.
ವಿಡಿಯೋವನ್ನು ಹೇಗೆ ರೆಕಾರ್ಡ್ ಮಾಡಲಾಗಿದೆ ಮತ್ತು ಪ್ರಸಾರ ಮಾಡಲಾಗಿದೆ ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಯುತ್ತಿದೆ.