ಬೆಂಗಳೂರು: ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದ ಆವರಣದಲ್ಲಿರುವ ಬಾಲಕಿಯರ ಕ್ರೀಡಾ ವಸತಿ ನಿಲಯದಲ್ಲಿನ ಅವ್ಯವಸ್ಥೆ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು, ಈ ಸಂಬಂಧ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ.
ನ್ಯಾಯಮೂರ್ತಿ ಫಣೀಂದ್ರ ಅವರು ತಮ್ಮ ಆದೇಶದಲ್ಲಿ, ಹಾಸ್ಟೆಲ್‌ನಲ್ಲಿರುವ ಬಾಲಕಿಯರು ಎದುರಿಸುತ್ತಿರುವ ಶೋಚನೀಯ ಸ್ಥಿತಿಯನ್ನು ವಿವರಿಸಿದ್ದಾರೆ.
ನಾನೆಂದಿಗೂ ಇಷ್ಟೊಂದು ಅವ್ಯವಸ್ಥೆಯ ವಸತಿ ನಿಲಯಕ್ಕೆ ಭೇಟಿ ನೀಡಿಲ್ಲ. ಅಧಿಕಾರಿಗಳು ಮತ್ತು ವಾರ್ಡನ್ ಇಬ್ಬರೂ ಹೆಸರಿಗೆ ಮಾತ್ರ ಕೆಲಸ ಮಾಡುತ್ತಿದ್ದಾರೆ. ಆದರೆ, ಅವರು ರಾಜ್ಯ ಸರ್ಕಾರದ ಯೋಜನೆಗಳ ಗುರಿ ಮತ್ತು ಉದ್ದೇಶಗಳಿಗೆ ಅನುಗುಣವಾಗಿ ಕೆಲಸ ಮಾಡುತ್ತಿಲ್ಲ. ಈ ಅಧಿಕಾರಿಗಳು ಹಾಸ್ಟೆಲ್‌ಗೆ ಅಪಾಯಕಾರಿಯಾಗಿದ್ದಾರೆ. ಅವ್ಯವಸ್ಥೆ ಕುರಿತು ಪ್ರಶ್ನಿಸಿದಾಗ ವ್ಯವಸ್ಥೆಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುವ ಉತ್ತರ ನೀಡಿದ್ದಾರೆ.
ಸೌಂದರ್ಯ, ಸಂಸ್ಕೃತಿ, ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಹೆಸರುವಾಸಿಯಾದ ಮೈಸೂರು, ಅಧಿಕಾರಿಗಳ ಈ ರೀತಿ ಸಂಪೂರ್ಣ ನಿರ್ಲಕ್ಷ್ಯ ಮತ್ತು ದುಷ್ಕೃತ್ಯದಿಂದ ಕೆಟ್ಟ ಹೆಸರು ಪಡೆಯುತ್ತಿದೆ. ಹಾಸ್ಟೆಲ್ ಅನ್ನು ಸರಿಯಾಗಿ ನಿರ್ವಹಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಿರುವುದು ನಾಚಿಕೆಗೇಡಿನ ಸಂಗತಿ. ವಸತಿ ನಿಲಯದಲ್ಲಿ ಬಾಲಕಿಯಲಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಮತ್ತು ಎಲ್ಲಾ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಾನು ದೂರು ದಾಖಲಿಸಿದ್ದೇನೆಂದು ತಿಳಿಸಿದ್ದಾರೆ.
ಇದೇ ವೇಳೆ ಉಪ ಲೋಕಾಯುಕ್ತರು ಈ ವಿಷಯವನ್ನು ಸಂಬಂಧಪಟ್ಟ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದ್ದಾರೆ,
ಅಲ್ಲದೆ, ರಾಜ್ಯದಾದ್ಯಂತ ಇತರ ಬಾಲಕಿಯರ ಹಾಸ್ಟೆಲ್‌ಗಳನ್ನು ಪರಿಶೀಲಿಸಲು ಮತ್ತು ಇದೇ ರೀತಿ ಸಮಸ್ಯೆಗಳನ್ನು ಸರಿಪಡಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಏತನ್ಮಧ್ಯೆ ಉಪ ನಿರ್ದೇಶಕ ಭಾಸ್ಕರ್ ನಾಯಕ್ ಮತ್ತು ಹಾಸ್ಟೆಲ್ ವಾರ್ಡನ್ ನೇತ್ರಾ ಅವರು ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವುದಾಗಿ ಮತ್ತು ಎರಡು ತಿಂಗಳೊಳಗೆ ವರದಿಯನ್ನು ಸಲ್ಲಿಸುವುದಾಗಿ ನ್ಯಾಯಮೂರ್ತಿ ಫಣೀಂದ್ರ ಅವರಿಗೆ ಭರವಸೆ ನೀಡಿದ್ದಾರೆಂದು ತಿಳಿದಬಂದಿದೆ.
ಈ ನಡುವೆ ಪ್ರಸ್ತುತ ಹೊರಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ನೇತ್ರಾ ಅವರ ಸ್ಥಾನಕ್ಕೆ ಶಾಶ್ವತ ಸರ್ಕಾರಿ ಉದ್ಯೋಗಿಯನ್ನು ವಾರ್ಡನ್ ಆಗಿ ನೇಮಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ಉಪ ಲೋಕಾಯುಕ್ತರು ಶಿಫಾರಸು ಮಾಡಿದ್ದಾರೆ.