ಬೆಂಗಳೂರು: 2026ನೇ ಸಾಲಿನ ಸರ್ಕಾರಿ ರಜಾ ದಿನಗಳ ಪಟ್ಟಿಗೆ ಗುರುವಾರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದ್ದು, ನಾನಾ ಹಬ್ಬಗಳು ಸೇರಿದಂತೆ 2026ರಲ್ಲಿ ಒಟ್ಟು 20 ದಿನ ರಜೆ ಘೋಷಿಸಲಾಗಿದೆ.
ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್ ಕೆ ಪಾಟೀಲ್ ಅವರು, 2026ನೇ ಸಾಲಿನ ಸಾರ್ವತ್ರಿಕ ರಜೆಗಳ ಪಟ್ಟಿಗೆ ಸಂಪುಟ ಅನುಮೋದನೆ ನೀಡಿದೆ ಎಂದರು.
ಮುಂದಿನ ವರ್ಷ ರಾಷ್ಟ್ರೀಯ ಮತ್ತು ನಾಡ ಹಬ್ಬಗಳನ್ನು ಒಳಗೊಂಡಂತೆ ಒಟ್ಟು 20 ದಿನಗಳ ಸರ್ಕಾರಿ ರಜೆಗಳು ಲಭ್ಯವಿರಲಿವೆ. ಈ ಅಧಿಕೃತ ಪಟ್ಟಿಯಿಂದ ಭಾನುವಾರಗಳಂದು ಬರುವ ಕೆಲವು ಹಬ್ಬಗಳು ಮತ್ತು ಎರಡನೇ ಶನಿವಾರದ ರಜೆಗಳನ್ನು ಹೊರತುಪಡಿಸಲಾಗಿದೆ. ಈ ಮೂಲಕ, ಸರ್ಕಾರಿ ನೌಕರರಿಗೆ ದೊರೆಯುವ ರಜಾ ದಿನಗಳ ಸಂಖ್ಯೆಯನ್ನು ನಿಖರವಾಗಿ ನಿಗದಿಪಡಿಸಲಾಗಿದೆ.
ರಜಾ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದಾಗಿದೆ.